

ಮುಂಬೈ: ಸ್ಟಾರ್ ಜೋಡಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಬೆಂಗಳೂರು ಮೂಲದ ವಿಮಾ ಸ್ಟಾರ್ಟ್ಅಪ್ ಗೋ ಡಿಜಿಟ್‌ನ ಮುಂಬರುವ ಷೇರು ಮಾರುಕಟ್ಟೆ ಪಟ್ಟಿಯೊಂದಿಗೆ ಭಾರೀ ಲಾಭವನ್ನು ಗಳಿಸಲು ಸಿದ್ಧರಾಗಿದ್ದಾರೆ.
ಅವರ ರೂ. 2.5 ಕೋಟಿ ಹೂಡಿಕೆಗೆ 263% ನಷ್ಟು ಲಾಭವನ್ನು ದೊರೆಯಬಹುದು. ಗೋ ಡಿಜಿಟ್‌ನ ಐಪಿಒ ಬಿಡುಗಡೆ ಮಾಡಲಾಗುತ್ತಿದ್ದು, ಇದರಲ್ಲಿ ಷೇರಿನ ಬೆಲೆಯನ್ನು ರೂ. 272 ಗೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಇವರಿಬ್ಬರ ಹೂಡಿಕೆಯಾದ 2.5 ಕೋಟಿ ರೂಪಾಯಿಯು 9.06 ಕೋಟಿ ರೂಪಾಯಿಗೆ ಏರುತ್ತದೆ.
ಜನವರಿ 2020 ರಲ್ಲಿ, ಕೊಹ್ಲಿಯು ಖಾಸಗಿ ಪ್ಲೇಸ್‌ಮೆಂಟ್ ಮೂಲಕ 266,667 ಷೇರುಗಳನ್ನು ರೂ. 75 ಯುನಿಟ್ ಬೆಲೆಯಲ್ಲಿ ಖರೀದಿಸಿದ್ದಾರೆ. ಇದರ ಪರಿಣಾಮವಾಗಿ ಒಟ್ಟು ರೂ. 2 ಕೋಟಿ ಹೂಡಿಕೆಯಾಗಿದೆ.
ಇದೇ ಸಮಯದಲ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೂ. 50 ಲಕ್ಷ ಹೂಡಿಕೆ ಮಾಡಿದ್ದರು. ಈ ಕಂಪನಿಯ 66,667 ಷೇರುಗಳನ್ನು ಪ್ರತಿ ಷೇರಿಗೆ ರೂ. 75 ರಂತೆ ಖರೀದಿಸಿದ್ದರು.
ಕೊಹ್ಲಿ ರೂ. 5.25 ಕೋಟಿ ಲಾಭ ಗಳಿಸಿದರೆ, ಅನುಷ್ಕಾ ಶರ್ಮಾ ಅವರ ಲಾಭ ರೂ. 1.31 ಕೋಟಿ ಆಗುತ್ತದೆ. ದಂಪತಿಗಳಿಬ್ಬರ ಒಟ್ಟು ಲಾಭವು ರೂ. 6.56 ಕೋಟಿಗಳಾಗುವ ಸಾಧ್ಯತೆಯಿದೆ.
ಮುಂಬರುವ ರೂ. 2,615 ಕೋಟಿ ಮೊತ್ತದ ಐಪಿಒ ಚಂದಾದಾರಿಕೆಗಾಗಿ ಮೇ 15 ರಂದು ಆರಂಭವಾಗಿ, ಮೇ 17 ರಂದು ಮುಕ್ತಾಯಗೊಳ್ಳಲಿದೆ. ಈ ಐಪಿಒದಲ್ಲಿ ಪ್ರತಿ ಷೇರಿಗೆ ರೂ 258 ರಿಂದ ರೂ. 272 ರ ಬೆಲೆ ನಿಗದಿ ಮಾಡಲಾಗಿದೆ.
ಗೋ ಡಿಜಿಟ್‌ನ ಷೇರುಗಳು ಈಗಾಗಲೇ ಗ್ರೇ ಮಾರ್ಕೆಟ್ನಲ್ಲಿ ರೂ 50 ರ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಅಂದರೆ ಗೋ ಡಿಜಿಟ್‌ನ ಷೇರುಗಳ ಬೆಲೆ ರೂ. 322 ರಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ. ಇದು ಐಪಿಒ ಬೆಲೆಗಿಂತ ಶೇಕಡಾ 18.39 ರಷ್ಟು ಹೆಚ್ಚಾಗಿದೆ.