

ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸುವುದು ಕಟ್ಟುನಿಟ್ಟಾಗಿ ಕಡ್ಡಾಯವಾಗಿದೆ. ಆದರೆ ಇದರ ಹೊರತಾಗಿಯೂ ಕೆಲವರು ವಿಮಾನ ಪ್ರಯಾಣದಲ್ಲಿ ಅಗತ್ಯ ನಿಯಮಗಳನ್ನು ಉಲ್ಲಂಘಿಸುವುದು ಆಗಾಗ್ಗೆ ಕಂಡುಬರುತ್ತದೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್.(Viral Video) ಆಗಿದೆ
ವಿಮಾನದಲ್ಲಿ ಧೂಮಪಾನ ಮಾಡುವುದನ್ನು ವಾಯುಯಾನ ಕಾನೂನಿನ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ಇಸ್ತಾನ್‌ಬುಲ್‌ನಿಂದ ಸೈಪ್ರಸ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದೊಳಗೆ ಬಹಿರಂಗವಾಗಿ ಧೂಮಪಾನ ಮಾಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ವಿಡಿಯೋ 2019ರದ್ದು ಎಂದು ಹೇಳಲಾಗುತ್ತದೆ. ಘಟನೆಯ ನಂತರ ಮಹಿಳೆಯನ್ನು ವಶಕ್ಕೆ ಪಡೆಯಲಾಯಿತು ಆದರೆ ಈ ಕ್ಲಿಪ್ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ನೀಲಿ ಬುರ್ಖಾ ಮತ್ತು ಕಪ್ಪು ಕನ್ನಡಕ ಧರಿಸಿದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದೊಳಗೆ ಬಹಿರಂಗವಾಗಿ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಅವಳು ಮುಖ ಕೆಳಗೆ ಇಟ್ಟುಕೊಂಡು ಕ್ಯಾಬಿನ್‌ನೊಳಗೆ ರಹಸ್ಯವಾಗಿ ಸಿಗರೇಟ್ ಹೊಗೆಯನ್ನು ಬಿಡಲು ಪ್ರಯತ್ನಿಸುತ್ತಾಳೆ. ನಂತರ ವಿಮಾನದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಹೀಗೆ ಮಾಡುವುದನ್ನು ನೋಡುತ್ತಾರೆ. ಸಿಕ್ಕಿಬಿದ್ದ ನಂತರ ಮಹಿಳೆ ವಿಮಾನದಲ್ಲಿ ಗದ್ದಲ ಸೃಷ್ಟಿಸುತ್ತಾಳೆ.
ಆ ಮಹಿಳೆ ವಿಮಾನ ಸಿಬ್ಬಂದಿಯೊಂದಿಗೆ ಜಗಳವಾಡುತ್ತಿರುವುದು ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನ ಕವರ್ ಅನ್ನು ಲೈಟರ್‌ನಿಂದ ಸುಡಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ ವಿಮಾನ ಸಿಬ್ಬಂದಿ ಮಹಿಳೆಯ ಕೈಹಿಡಿದು ಲೈಟರ್ ಮೇಲೆ ನೀರು ಸುರಿಯುತ್ತಿರುವುದು ಕಂಡುಬರುತ್ತದೆ. ಈ ದೃಶ್ಯವನ್ನು ನೋಡಿ ವಿಮಾನದಲ್ಲಿದ್ದ ಇತರ ಜನರು ಸಹ ಭಯಭೀತರಾಗಿ ಮಹಿಳೆಯನ್ನು ತಡೆಯಲು ಪ್ರಯತ್ನಿಸಿದರು.
ವಾಯುಯಾನ ಕಾನೂನುಗಳ ಪ್ರಕಾರ, ವಿಮಾನದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಏಕೆಂದರೆ ಇದು ಬೆಂಕಿಯ ಗಂಭೀರ ಅಪಾಯವನ್ನುಂಟುಮಾಡುತ್ತದೆ. ವಿಮಾನದಲ್ಲಿ ಸಿಗರೇಟ್ ಸೇದಿದರೆ ಭಾರೀ ದಂಡ ಮತ್ತು ಬಂಧನಕ್ಕೂ ಕಾರಣವಾಗಬಹುದು. ವಿಮಾನದಲ್ಲಿ ಪ್ರಯಾಣಿಸುವಾಗ ಧೂಮಪಾನ ಮಾಡುವುದರಿಂದಲೂ ವಿಮಾನ ಪ್ರಯಾಣದ ಮೇಲೆ ಶಾಶ್ವತ ನಿಷೇಧ ಹೇರಬಹುದು.