

ಕೊಲ್ಕತಾ: ಮೆಟ್ರೋದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಜನರು ಆಸನಗಳ ಬಗ್ಗೆ ಜಗಳವಾಡಿದರೆ, ಮತ್ತೆ ಕೆಲವೊಮ್ಮೆ ಜನರು ಹಾಡುವುದು, ನೃತ್ಯ ಮಾಡುವುದು ಅಥವಾ ಮೆಟ್ರೋದಲ್ಲಿಯೇ ರೀಲ್ಗಳನ್ನು ಮಾಡುವುದನ್ನು ಕಾಣಬಹುದು. ಆದರೆ ಸದ್ಯ ಕೊಲ್ಕತಾ ಮೆಟ್ರೋದಿಂದ ವಿಡಿಯೋವೊಂದು ವೈರಲ್(Viral Video) ಆಗಿದೆ. ವಿಡಿಯೋದಲ್ಲಿ ಹಿಂದಿ ಮತ್ತು ಬಂಗಾಳಿ ಭಾಷೆಗಾಗಿ ಜಗಳವಾಡುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಕೊಲ್ಕತಾ ಮೆಟ್ರೋದಲ್ಲಿ ಮಹಿಳೆಯೊಬ್ಬರು ಬೆಂಗಾಲಿಯಲ್ಲಿ ಮಾತನಾಡುವ ಕಾರಣ ಮತ್ತೊಬ್ಬ ಮಹಿಳೆ ಕಿರಿಕಿರಿಗೊಳ್ಳುತ್ತಾರೆ. ಮತ್ತು ಆಕೆಗೆ ಹಿಂದಿಯಲ್ಲಿ ಮಾತನಾಡುವಂತೆ ಹೇಳುವುದನ್ನು ನೋಡಬಹುದು. ನೀವು ಬಾಂಗ್ಲಾದೇಶದಲ್ಲಿಲ್ಲ, ನೀವು ಭಾರತದಲ್ಲಿದ್ದೀರಿ. ಪಶ್ಚಿಮ ಬಂಗಾಳ ಭಾರತದ ಒಂದು ಭಾಗವಾಗಿದೆ ನೀವು ಹಿಂದಿಯಲ್ಲಿ ಮಾತನಾಡಬೇಕು ಎಂದು ತಾಕೀತು ಮಾಡುವುದನ್ನು ಕಾಣಬಹುದು.
ಅದೇ ಸಮಯದಲ್ಲಿ ಇನ್ನೊಬ್ಬ ಮಹಿಳೆ ಆಕೆಗೆ ಬಂಗಾಳಿ ಭಾಷೆಯಲ್ಲಿ ಉತ್ತರಿಸುತ್ತಾರೆ. ನಾನು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದೇನೆ. ನನ್ನ ಹುಟ್ಟೂರಿನಲ್ಲಿ ಮತ್ತು ನಿಮ್ಮದಲ್ಲ ನನ್ನ ಸ್ವಂತ ರಾಜ್ಯದಲ್ಲಿ ವಾಸಿಸುತ್ತಿರುವಾಗ ಬಂಗಾಳಿ ಮಾತನಾಡುವುದಕ್ಕಾಗಿ ನೀವು ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಬೆಂಗಾಲಿ ಮಾತನಾಡುವ ಮಹಿಳೆ ಹೇಳುತ್ತಾರೆ. ಅದಕ್ಕೆ ಉತ್ತರಿಸಿದ ಹಿಂದಿ ಮಾತನಾಡುವ ಮಹಿಳೆ ಮೆಟ್ರೋ ನಿಮ್ಮದಲ್ಲ, ಪಶ್ಚಿಮ ಬಂಗಾಳವೂ ನಿಮ್ಮದಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯೆಯಾಗಿ ಬೆಂಗಾಲಿ ಮಾತನಾಡುವ ಮಹಿಳೆ ಮೆಟ್ರೋ ಕೂಡ ನನ್ನದು ಮತ್ತು ಪಶ್ಚಿಮ ಬಂಗಾಳವೂ ನನ್ನದು. ಮೆಟ್ರೋ ನಿರ್ಮಿಸಿರುವುದು ಬಂಗಾಳದ ತೆರಿಗೆ ಕಟ್ಟುವ ಜನರಿಂದ ಹೊರತು ನಿಮ್ಮ ಊರಿನ ತೆರಿಗೆ ಹಣದಿಂದಲ್ಲ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಅಸಂಬದ್ಧ ನಾವು ಇತರರ ಭಾಷೆಯನ್ನು ಏಕೆ ಗೌರವಿಸಬಾರದು, ಭಾರತದಲ್ಲಿ 44% ಅಥವಾ ಅದಕ್ಕಿಂತ ಕಡಿಮೆ ಜನರು ಹಿಂದಿ ಮಾತನಾಡುತ್ತಾರೆ, ನಾವು ಭಾರತೀಯರಾಗಿ ಏಕೆ ಭಾಷೆಯಲ್ಲಿ ವಿಭಜನೆಯಾಗುತ್ತೇವೆ? ಯಾರಾದರೂ ಮಾತನಾಡಲು ಸಾಧ್ಯವಾಗದಿದ್ದರೆ ಅವರಿಗೆ ಮಾತನಾಡಲು ಸಹಾಯ ಮಾಡಿ, ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಪ್ರತಿಯೊಂದು ರಾಜ್ಯದಲ್ಲೂ ನಡೆಯುತ್ತಿವೆ, ಬೆಂಗಾಲಿ ಮಾತನಾಡುವುದು ಯಾರನ್ನಾದರೂ ಬಾಂಗ್ಲಾದೇಶಿಯನ್ನಾಗಿ ಮಾಡಿದರೆ ಹಿಂದಿ ಮಾತನಾಡುವವರನ್ನು ಪಾಕಿಸ್ತಾನಿಗಳು ಎಂದು ಕರೆಯುತ್ತಾರೆಯೇ? ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)