

ನವದೆಹಲಿ (Delhi) : ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ರಾಜ್ಯಪಾಲ ವಿಕೆ ಸಕ್ಸೇನಾ ನಡುವಿನ ಜಟಾಪಟಿ ಎಲ್ಲರಿಗೂ ತಿಳಿದಿದೆ. ಎಎಪಿ ಸರ್ಕಾರ ಮತ್ತು ಎಲ್‌ಜಿ ನಡುವೆ ಆಗಾಗ್ಗೆ ಕೆಲವು ಯೋಜನೆ ಅಥವಾ ಇತರ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ ಶುಕ್ರವಾರ(ನವೆಂಬರ್ 22) ಕಾರ್ಯಕ್ರಮವೊಂದರಲ್ಲಿ ಸಕ್ಸೇನಾ ಅವರು ಸಿಎಂ ಅತಿಶಿ ಅವರನ್ನು ಶ್ಲಾಘಿಸಿದ್ದಾರೆ.
ಇಂದಿರಾಗಾಂಧಿ ದೆಹಲಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯದ (ಐಜಿಡಿಟಿಯುಡಬ್ಲ್ಯು) 7ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಿಕೆ ಸಕ್ಸೇನಾ ಮತ್ತು ಸಿಎಂ ಅತಿಶಿ ಇಬ್ಬರು ಭಾಗವಹಿಸಿದ್ದರು. ಅಲ್ಲಿದ್ದ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ದೆಹಲಿಯ ಮುಖ್ಯಮಂತ್ರಿ ಮಹಿಳೆಯಾಗಿರುವುದು ನನಗೆ ಖುಷಿ ತಂದಿದೆ. ಅವರು ತಮ್ಮ ಹಿಂದಿನ ಮುಖ್ಯಮಂತ್ರಿಗಿಂತ ಸಾವಿರ ಪಟ್ಟು ಉತ್ತಮರು ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ ಎಂದು ಮುಖ್ಯಮಂತ್ರಿ ಅತಿಶಿ ಅವರನ್ನು ಹೊಗಳಿದರು.
ಎಲ್ ಜಿ ಈ ಹೇಳಿಕೆ ನೀಡುವಾಗ ಮುಖ್ಯಮಂತ್ರಿ ಅತಿಶಿ ಕೂಡ ವೇದಿಕೆಯಲ್ಲಿದ್ದರು. ರಾಜ್ಯಪಾಲರು ನೇರವಾಗಿ ಅರವಿಂದ್ ಕೇಜ್ರಿವಾಲ್ ಹೆಸರನ್ನು ತೆಗೆದುಕೊಳ್ಳಲಿಲ್ಲ ಆದರೆ ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಸಿಎಂ ಕೇಜ್ರಿವಾಲ್ ಅವರನ್ನು ಉಲ್ಲೇಖಿಸಿದ್ದಾರೆ. ಕೇಜ್ರಿವಾಲ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯೊಂದಿಗೆ ಎಲ್‌ಜಿ ಅವರ ಭಿನ್ನಾಭಿಪ್ರಾಯಗಳು ಇಂದಿಗೂ ಮರೆಯಾಗಿಲ್ಲ.
ಇದೆ ವೇಳೆ ಅಲ್ಲಿದ್ದ ವಿದ್ಯಾರ್ಥಿನಿಯರಿಗೆ ರಾಜ್ಯಪಾಲ ವಿಕೆ ಸಕ್ಸೇನಾ ನೀವು ಮುಂದೆ ಹೋದಂತೆ ನಿಮಗೆ ನಾಲ್ಕು ಜವಾಬ್ದಾರಿಗಳಿವೆ ಎಂದು ಹೇಳಿದರು. ಮೊದಲನೆಯದು ನಿಮ್ಮ ಬಗ್ಗೆ ನಿಮ್ಮ ಜವಾಬ್ದಾರಿ, ಎರಡನೆಯದು ನಿಮ್ಮ ಪಾಲಕರು ಮತ್ತು ಕುಟುಂಬದ ಬಗೆಗಿನ ಜವಾಬ್ದಾರಿ, ಮೂರನೆಯ ಜವಾಬ್ದಾರಿ ಸಮಾಜದ ಕಡೆಗೆ ಮತ್ತು ಇದು ರಾಷ್ಟ್ರ ನಿರ್ಮಾಣದ ಕಡೆಗೆ ಇರಬೇಕು, ಲಿಂಗ ತಾರತಮ್ಯವನ್ನು ಮುರಿದು ಎಲ್ಲ ಕ್ಷೇತ್ರಗಳಲ್ಲಿಯೂ ಇತರರಿಗೆ ಸರಿಸಾಟಿಯಾಗಿ ಮಹಿಳೆಯರು ಬರುವುದು ನಾಲ್ಕನೇ ಜವಾಬ್ದಾರಿಯಾಗಿದೆ.(ಏಜೆನ್ಸೀಸ್)