

ನವದೆಹಲಿ: ನಿಮ್ಮ ವಿಮಾನ ಇನ್ನೇನು ಟೇಕ್ ಆಫ್ ಆಗಲಿದೆ ಎನ್ನುವಾಗ ಕಿಟಕಿಯ ಹೊರಗೆ ರಿಪೇರಿ ಮಾಡುವ ಟೆಕ್ನೀಷಿಯನ್ಗಳು ವಿಮಾನದ ರೆಕ್ಕೆಗಳ ಮೇಲೆ ಟೇಪ್ ಹಾಕಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಿದರೆ ಹೇಗಾಗಬಹುದು? ದುರಸ್ತಿ ಕಾರ್ಯಕ್ಕೆ ‘ಟೇಪ್’ ಬಳಕೆ ಮಾಡಿರುವುದರಿಂದ ಭಯಗೊಂಡ @myhoneysmacks ಎಂಬ ಯೂಸರ್ನೇಮ್ ಹೊಂದಿರುವ TikTok ಬಳಕೆದಾರರು ಈ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೊ ತಕ್ಷಣ ವೈರಲ್ ಆಗಿದ್ದು ಇದನ್ನು ಏಪ್ರಿಲ್ 27ರಂದು ಝೀರೋಹೆಡ್ಜ್ (@govttrader) ಎಂಬ ಯೂಸರ್ನೇಮ್ ಇರುವ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಮೆಂಟ್‌ಗಳಲ್ಲಿ, ಅಸಮರ್ಪಕವಾಗಿ ದುರಸ್ತಿಯಾಗುತ್ತಿದ್ದು ಇದು ಅಪಾಯಕಾರಿ ಎಂದು ಅನೇಕ ಜನರು ಭಯ ವ್ಯಕ್ತಪಡಿಸಿದರು.
ಇನ್ಸೈಡ್ ವರದಿಯ ಪ್ರಕಾರ, ವೀಡಿಯೊದಲ್ಲಿ ರಿಪೇರಿ ಕೆಲಸದಿಂದ ಬಳಸಲಾದ ಸಿಲ್ವರ್ ಬಣ್ಣದ ಟೇಪ್ ಸ್ಪೀಡ್ ಟೇಪ್ ಆಗಿದೆ. ಇದನ್ನು ವಿಶೇಷವಾಗಿ ವಾಯುಯಾನ ಉದ್ಯಮದಲ್ಲಿ ಬಳಸಲಾಗುತ್ತದೆ. ಅಲ್ಯೂಮಿನಿಯಂ-ಆಧಾರಿತ ಟೇಪ್ಗಳು ಕಠಿಣ UV ಕಿರಣಗಳು, ಹೆಚ್ಚಿನ ಗಾಳಿಯ ಒತ್ತಡ, -65 ರಿಂದ 300 ಡಿಗ್ರಿ ಫ್ಯಾರನ್‌ಹೀಟ್ ನಡುವಿನ ತಾಪಮಾನ ಮತ್ತು ತೇವಾಂಶವನ್ನು ತಡೆದುಕೊಳ್ಳುತ್ತದೆ ಎಂದು ವರದಿಯಾಗಿದೆ. ವಿಮಾನದ ಹೊರ ಪದರ ಬೇಗನೇ ಹಾಳಾಗದಂತೆ ಕಾಪಾಡಲು ಹಾಗೂ ವಿಮಾನದ ಪೇಂಟ್ ಕಿತ್ತು ಹೋಗದಂತೆ ತಡೆಯುವುದು ಈ ಟೇಪ್‌ನ ವಿಶೇಷತೆಯಾಗಿದೆ.
ವೈರಲ್ ವೀಡಿಯೊ ಆದ ಕುರಿತು ಅಸೋಸಿಯೇಟ್ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪಿರಿಟ್ ಏರ್‌ಲೈನ್ಸ್‌ನ ವಕ್ತಾರ ಮೈಕೆಲ್ ಲೋಪಾರ್ಡಿ “ನಾವು ನಮ್ಮ ಎಂಜಿನಿಯರಿಂಗ್ ತಂಡವನ್ನು ವಿಚಾರಿಸಿದಾಗ ಅಲ್ಲಿ ಬಳಸಿದ್ದು ಸ್ಪೀಡ್ ಟೇಪ್ ಎಂದು ತಿಳಿದು ಬಂದಿದೆ. ಇದು ವಾಯುಯಾನ ಉದ್ಯಮದಾದ್ಯಂತ ಬಳಸಲಾಗುವ ಸುರಕ್ಷಿತ ಉಪಕರಣ. ಸ್ಪೀಡ್ ಟೇಪ್ ಬಳಕೆಯನ್ನು ವಿಮಾನ ತಯಾರಕರು ಮತ್ತು ನಮ್ಮ ಇಂಜಿನಿಯರಿಂಗ್ ತಂಡವು ಅಧಿಕೃತಗೊಳಿಸಿದ್ದು ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮೂಲಕ ನಿಗದಿಪಡಿಸಿದ ಬಳಕೆಗೆ ಎಲ್ಲಾ ನಿಯಮಗಳನ್ನು ಪೂರೈಸುತ್ತದೆ" ಎಂದಿದ್ದಾರೆ (ಏಜೆನ್ಸೀಸ್)