

ಬೀಜಿಂಗ್: ಕೆಲಸ ಮಾಡುತ್ತಿರಲಿ, ಮೋಜು ಮಾಡುತ್ತಿರಲಿ ಅಥವಾ ಎಷ್ಟೇ ಬ್ಯುಸಿ ಇದ್ದರೂ ಪ್ರತಿ ಸಂದರ್ಭದಲ್ಲಿಯೂ ಒಂದು ಕಪ್ ಚಹಾ ಅಥವಾ ಕಾಫಿ ಮಿಸ್ ಮಾಡುವುದೇ ಇಲ್ಲ. ಇನ್ನೂ ಕಾಫಿ ಪ್ರಿಯರಾದರಂತು ಖಂಡಿತವಾಗಿಯೂ ಪ್ರಸಿದ್ಧ ಸ್ಥಳಗಳಿಗೆ ಹೋಗಿ ಚಹಾ ಮತ್ತು ಕಾಫಿಯನ್ನು ಸವಿಯಲು ಬಯಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ. ಅದರಲ್ಲಿ ಇಳಿಜಾರಿನ ಅಪಾಯದ ಸ್ಥಳದಲ್ಲಿ ಜನರು ಕಾಫಿ ಮತ್ತು ಚಹಾವನ್ನು ಸವಿಯುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಕಾಫಿ ಶಾಪ್ ಚೀನಾದಲ್ಲಿ ಇದೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಂಪೂರ್ಣ ಲಂಬವಾಗಿರುವ ಬಂಡೆಯ ಜತೆಗೆ ಆಳವಾದ ಕಂದಕ ಇರುವುದನ್ನು ನೋಡಬಹುದು. ಬಂಡೆಯು ಸಂಪೂರ್ಣವಾಗಿ ನೇರವಾಗಿ ಕಾಣುತ್ತದೆ ಮತ್ತು ಅದರ ಮೇಲೆ ಕುಳಿತುಕೊಳ್ಳಲು ಸ್ಥಳವನ್ನು ಮಾಡಲಾಗಿದೆ. ಈ ಬಂಡೆಯ ಇಳಿಜಾರಿನಲ್ಲಿ ಕಾಫಿ ಶಾಪ್ ತೆರೆಯಲಾಗಿದೆ. ಬಂಡೆಯ ಮೇಲೆ ಸ್ಟ್ಯಾಂಡ್ ಅಥವಾ ಬಾಲ್ಕನಿಯನ್ನು ನಿರ್ಮಿಸಲಾಗಿದೆ. ಅಲ್ಲಿ ಜನರು ಕುಳಿತು ಕಾಫಿಯನ್ನು ಆನಂದಿಸಬಹುದು. ಈ ಶಾಪ್ನ ಹೆಸರು ಕ್ಲಿಫ್ ಕಾಫಿ.
ಕಾಫಿ ಶಾಪ್ ಇರುವ ಸ್ಥಳವನ್ನು ನೋಡಿದರೆ ಯಾರಾದರೂ ಆಶ್ಚರ್ಯಚಕಿತರಾಗುತ್ತಾರೆ. ಅನೇಕ ಜನರು ಕುಳಿತು ತಮ್ಮ ಕಾಫಿಯನ್ನು ಆನಂದಿಸುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಈ ಕಲ್ಲು ಚೀನಾದ ಫುಜಿಯಾನ್‌ನ ಗುಶಿ ಗ್ರಾಮದಲ್ಲಿದೆ. ಕಾಫಿ ಶಾಪ್ ಮಾಡಿರುವ ಸ್ಥಳವನ್ನು ನೋಡಿ ಹಲವರು ಮೂಕವಿಸ್ಮಿತರಾಗಿದ್ದಾರೆ. ಅನೇಕರು ಇದನ್ನು ಸಾಕಷ್ಟು ಆಸಕ್ತಿದಾಯಕವಾಗಿ ನೋಡುತ್ತಿದ್ದು ಪ್ರತಿಕ್ರಿಯಿಸುತ್ತಿದ್ದಾರೆ.
ವಿಡಿಯೋವನ್ನು ‘ಜನರಿಗೆ ಕಾಫಿಯ ಗೀಳು ಯಾವಾಗಿನಿಂದ ಶುರುವಾಯಿತು' ಎಂಬ ಶೀರ್ಷಿಕೆ ನೀಡಿ ಶೇರ್ ಮಾಡಲಾಗಿದೆ. ಇದನ್ನು ನೋಡಿದ ಜನರು ಇದು ಆತಂಕದೊಂದಿಗೆ ಕಾಫಿ, ಈ ಜನರು ಕಾಫಿಯ ಜತೆಗೆ ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಾರೆಯೇ?, ನೀವು ಅದನ್ನು ಅಪಾಯಕಾರಿ ಕಾಫಿ ಎಂದು ಏಕೆ ಹೆಸರಿಸಬಾರದು, ಏನಿದು ಹುಚ್ಚುತನ, ನೀವು ಕಾಫಿ ಕುಡಿಯಲು ಅಂತಹ ಸ್ಥಳಕ್ಕೆ ಹೋಗಲು ಯಾರು ಬಯಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)