ನಿಧಿಯಷ್ಟೇ ದುಬಾರಿಯಾಗಿರುವ ಟೊಮ್ಯಾಟೋಗೆ ನಾಗರಹಾವಿನ ಕಾವಲು! ವಿಡಿಯೋ ವೈರಲ್​

Cobra Guards Tomatoes
Published on

ನವದೆಹಲಿ: ಹಾವುಗಳು ನಿಧಿಗಳನ್ನು ಕಾಯುತ್ತವೆ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಆದರೆ, ಈಗ ಹಾವುಗಳು ಟೊಮ್ಯಾಟೋವನ್ನೂ ಸಹ ಕಾಯುತ್ತವೆ. ಏಕೆಂದರೆ, ಟೊಮ್ಯಾಟೋ ಈಗ ನಿಧಿಯಷ್ಟೇ ದುಬಾರಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೇಶದಲ್ಲಿ ಪ್ರತಿಕೂಲ ವಾತಾವರಣದಿಂದಾಗಿ ಟೊಮ್ಯಾಟೋ ಅನಿಶ್ಚಿತತೆ ಮುಂದುವರಿದಿದೆ. ಟೊಮ್ಯಾಟೋ ಬೆಲೆ ಗಗನಮುಖಿಯಾಗಿದ್ದು, ಏರಿಯಾಗಳಿಗೆ ಅನುಗುಣವಾಗಿ 100 ರಿಂದ 200ರೂ. ವರೆಗೂ ಏರಿಕೆಯಾಗಿದೆ. ಒಂದೆಡೆ ಗ್ರಾಹಕರಿಗೆ ಹೊರೆಯಾಗಿದ್ದರೆ, ಇನ್ನೊಂದೆಡೆ ಟೊಮ್ಯಾಟೋ ಬೆಳೆದ ರೈತರಿಗೆ ಖುಷಿ ತಂದಿದೆ. ಭಾರೀ ಬೇಡಿಕೆಯಿಂದ ಟೊಮ್ಯಾಟೋಗೆ ಚಿನ್ನದ ಬೆಲೆ ಬಂದಿದ್ದು, ಹಲವೆಡೆ ಟೊಮ್ಯಾಟೋ ಕಳ್ಳತನದಂತಹ ಪ್ರಕರಣಗಳು ನಡೆಯುತ್ತಿದೆ. ಹೀಗಾಗಿ ಟೊಮ್ಯಾಟೋ ಬೆಳೆ ರಕ್ಷಿಸಿಕೊಳ್ಳಲು ರೈತರು ನಾನಾ ಸರ್ಕಸ್​ ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ತರಕಾರಿ ಮಾರಾಟಗಾರನೊಬ್ಬ ಟೊಮ್ಯಾಟೋ ಕಾಯಲು ಬೌನ್ಸರ್​ಗಳನ್ನು ನೇಮಿಸಿದ್ದ ಸುದ್ದಿ ಕೆಲ ದಿನಗಳಿಂದ ವೈರಲ್​ ಆಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಸುದ್ದಿ ವೈರಲ್​ ಆಗಿದೆ. ಆದರೆ, ಈ ಬಾರಿ ಟೊಮ್ಯಾಟೋ ಕಾಯುತ್ತಿರುವುದು ಬೌನ್ಸರ್ಸ್​ ಅಲ್ಲ, ಬದಲಾಗಿ ವಿಷಕಾರಿ ನಾಗರ ಹಾವು. ಟೊಮ್ಯಾಟೋ ಮುಂದೆ ಹೆಡೆ ಬಿಚ್ಚಿ ಕುಳಿತಿರುವ ನಾಗರಹಾವು, ಟೊಮ್ಯಾಟೋ ಮುಟ್ಟಲು ಮುಂದೆ ಬರುವವರಿಗೆ ಬುಸುಗುಟ್ಟಿ, ಕಚ್ಚಲು ಹೋಗುತ್ತಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು mirzamdarif1 ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ವೈರಲ್​ ಆಗುತ್ತಿದೆ. ನಿಧಿಗಿಂತಲೂ ಬೆಲೆ ಬಾಳುವ ಟೊಮ್ಯಾಟೋವನ್ನು ಹಾವು ಕಾಯುತ್ತಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಎಂಥಾ ಕಾಲಪ್ಪ ಬಂತಪ್ಪಾ ಎಂದು ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net