

ಚಂಡೀಗಢ: ಹರಿಯಾಣದ ಜನನಿಬಿಡ ಪ್ರದೇಶದಲ್ಲಿ ಅತಿ ವೇಗದಲ್ಲಿ ಕಾರು ಚಲಾಯಿಸಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕಾರನ್ನು 140 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದಾರೆ. ಕಾರ ಚಲಾಯಿಸುತ್ತಿದ್ದ ವ್ಯಕ್ತಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಹೋಗುತ್ತಾರೆ. ಡ್ರೈವಿಂಗ್ ಸೀಟ್ ಪಕ್ಕದಲ್ಲಿ ಕುಳಿತಿರುವವರು ಕಾರು ನಿಲ್ಲಿಸಿ ಅವರಿಗೆ ಸಹಾಯ ಮಾಡುವಂತೆ ಹೇಳುತ್ತಾರೆ. ಆದಕ್ಕೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ವೋ ಗಿರ್ ಗಯಾ, ಕೋಯಿ ಬಾತ್ ನಹೀ. ರೋಜ್ ಕಾ ಯಾಹಿ ಕಾಮ್ ಹೈ ಮ್ಯಾಮ್ (ಅವರು ಕೆಳಗೆ ಬೀಳುವುದು ದೊಡ್ಡ ವಿಷಯವಿಲ್ಲ. ಇದು ದೈನಂದಿನ ವಿಷಯ, ಮೇಡಂ) ಎಂದು ಹೇಳುವುದನ್ನು ನೋಡಬಹುದು.
ಈ ವಿಡಿಯೋವನ್ನು ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ರೆಕಾರ್ಡ್ ಮಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಕೋಪಗೊಂಡು ಇದು ರಜತ್ ದಲಾಲ್ ಎಂದು ಹೇಳಿ, ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಜಾಲತಾಣದಲ್ಲಿ ದೆಹಲಿ , ಗುರುಗ್ರಾಮ್ ಮತ್ತು ಫರಿದಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿ ರಜತ್ ದಲಾಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಇದುವರೆಗೆ 6.7ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ವಿಡಿಯೋಗೆ ಪ್ರತಿಕ್ರಿಯಸಿರುವ ಫರಿದಾಬಾದ್ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಗಮನಕ್ಕೆ ಬಂದಿದ್ದು ಡಿಸ್ಟ್ರಿಕ್ಟ್ ಅಡ್ಮಿನಿಸ್ಟ್ರೇಷನ್ ಸ್ವಯಂ ಪ್ರೇರಣೆಯಿಂದ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
ರಜತ್ ದಲಾಲ್ ಮೊದಲಿಗೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಫಿಟ್‌ನೆಸ್ ಮತ್ತು ಜಿಮ್‌ಗೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡಿದ್ದರು. ರಜತ್ ದಲಾಲ್ ಅವರನ್ನು ಜೂನ್ 2024ರಲ್ಲಿ ಅಹಮದಾಬಾದ್ ಪೊಲೀಸರು 18 ವರ್ಷದ ಹುಡುಗನ ಮೇಲೆ ಹಲ್ಲೆ ಮತ್ತು ಅಸಭ್ಯವಾಗಿ ವರ್ತಿಸಿದ ಪ್ರಕರಣದಲ್ಲಿ ಬಂಧಿಸಿದ್ದರು. 18 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿ ನಂತರ ಥಳಿಸಿದ ಹಾಗೂ ವಿದ್ಯಾರ್ಥಿಯ ಮುಖಕ್ಕೆ ಹಸುವಿನ ಸಗಣಿ ಹಚ್ಚಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪ ರಜತ್ ಮೇಲಿತ್ತು. (ಏಜೆನ್ಸೀಸ್)