ದಾವೂದ್ ಇಬ್ರಾಹಿಂ ಸಾವು? ಪಾಕ್​ ಹಂಗಾಮಿ ಪ್ರಧಾನಿ ಅನ್ವರ್ ಕೊಟ್ಟ ಸುದ್ದಿ ಅಸಲಿಯೇ; ಇಲ್ಲಿದೆ ನೋಡಿ ಮಾಹಿತಿ

ವಿಜಯವಾಣಿ - 2023-12-19T075500.464
Published on

ಕರಾಚಿ: ಕಳೆದ ಒಂದು ದಿನದಿಂದ ಸೋಷಿಯಲ್ ಮೀಡಿಯಾ ಸಂಪೂರ್ಣವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷ ಸೇವಿಸಿ ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯಿಂದಲೇ ತುಂಬಿದೆ. ಆಸ್ಪತ್ರೆಯ ಕಟ್ಟಡದಲ್ಲಿ ಒಂದು ಮಹಡಿ ಆತನಿಗೆಂದೇ ಮೀಸಲು ಹಾಗೂ ಕೇವಲ ಆಪ್ತರಿಗೆ ಮತ್ತು ಕುಟುಂಬಸ್ಥರಿಗೆ ಮಾತ್ರ ನೋಡಲು ಪ್ರವೇಶ ಎಂದು ಹೇಳಲಾಗಿದೆ. ಈ ಸುದ್ದಿ ಎಷ್ಟು ನಿಜ ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ! ಇದಕ್ಕೆ ಪೂರಕವಾಗಿ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಇದೆಲ್ಲದರ ಮಧ್ಯೆ ನಿನ್ನೆಯಿಂದ ದಾವೂದ್​ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಕುರಿತಂತೆ ಜಾಲತಾಣಗಳಲ್ಲಿ ಭಾರೀ ಅನುಮಾನಗಳು ಭುಗಿಲೆದ್ದಿವೆ.

ದಾವೂದ್​ ವಿಷ ಸೇವಿಸಿದ ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಿದ ಪಾಕ್ ವರದಿಗಳ ಮಧ್ಯೆ ಕೆಲವು ಬಳಕೆದಾರರು ಇಬ್ರಾಹಿಂ ಸಾವನ್ನಪ್ಪಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿಸಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಖಾತೆಯ ಸ್ಕ್ರೀನ್‌ಶಾಟ್‌ಗಳ ಪೋಸ್ಟ್ ಸಿಕ್ಕಾಪಟ್ಟೆ ಗೊಂದಲ ಹಾಗೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಆದ್ರೆ, ಈ ಸಂದೇಶವು ನಕಲಿ ಎಂದು ತಿಳಿದುಬಂದಿದೆ. ಹಲವು ಫ್ಯಾಕ್ಟ್​ ಚೆಕ್​ ಮಾಡುವವರು ಇದು ಕಾಕರ್​ ಅವರ ಅಸಲಿ ಖಾತೆಯಲ್ಲ! ಮತ್ತು ದಾವೂದ್ ಬಗ್ಗೆ ಯಾವುದೇ ದೃಢೀಕರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ವೈರಲ್ ಸಂದೇಶ ಹೀಗಿದೆ: "ಮನುಷ್ಯತ್ವದ ಮೆಸ್ಸಿಹ್, ಪ್ರತಿ ಪಾಕಿಸ್ತಾನಿ ಹೃದಯಕ್ಕೆ ಪ್ರಿಯ, ನಮ್ಮ ಪ್ರೀತಿಯ ಹಿಸ್ ಎಕ್ಸಲೆನ್ಸಿ ದಾವೂದ್ ಇಬ್ರಾಹಿಂ ವಿಷ ಸೇವಿಸಿ ನಿಧನರಾಗಿದ್ದಾರೆ. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾ ಅವರಿಗೆ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ" ಎಂದು ಟ್ವೀಟ್​ನಲ್ಲಿ ಬರೆಯಲಾಗಿದೆ.


ಈ ವೈರಲ್ ಸುದ್ದಿ ಕುರಿತಂತೆ ಮಾಹಿತಿ ನೀಡಿದ ಸ್ವತಂತ್ರ ಸತ್ಯ-ಪರಿಶೀಲನಾ ವೆಬ್‌ಸೈಟ್ (DFRAC), ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಬಳಕೆದಾರ ಹೆಸರು ಕಾಕರ್ ಅವರ ಅಧಿಕೃತ ಖಾತೆಗೆ ಹೊಂದಿಕೆಯಾಗುವುದಿಲ್ಲ ಎಂದು ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net