ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ

bhr road
ಬಾಳೆಹೊನ್ನೂರು ಸಮೀಪದ ಇಟ್ಟಿಗೆ ಸೀಗೋಡು ಬಳಿ ಮುಖ್ಯರಸ್ತೆ ವಿಸ್ತರಣೆಗಾಗಿ ಗುಂಡಿ ತೆಗೆದು ಮುಚ್ಚದಿರುವುದರಿಂದ ಮಳೆಯ ನೀರು ಸಂಗ್ರಹವಾಗಿರುವುದು.
Published on

ಬಾಳೆಹೊನ್ನೂರು: ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಇಟ್ಟಿಗೆ ಸೀಗೋಡು ಸಮೀಪದಲ್ಲಿ ಮುಖ್ಯರಸ್ತೆ ವಿಸ್ತರಣೆಗಾಗಿ ಕಳೆದ ಕೆಲ ದಿನಗಳ ಹಿಂದೆ ಗುಂಡಿ ತೆಗೆದಿದ್ದು ಅದನ್ನು ಇನ್ನೂ ಮುಚ್ಚದೆ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಬಾಳೆಹೊನ್ನೂರಿನಿಂದ ಶೃಂಗೇರಿ, ಕೊಪ್ಪ, ಜಯಪುರ ಸಂಪರ್ಕ ಕಲ್ಪಿಸುವ ಇಟ್ಟಿಗೆ ಸೀಗೋಡಿನ ಬಿಜಿಎಸ್ ಕಾಲೇಜು ಮುಂಭಾಗದಿಂದ ಶಿವನಗರದವರೆಗೆ ಪ್ರಾಮ್ಸಿ ಯೋಜನೆಯಡಿ ರಸ್ತೆ ವಿಸ್ತರಣೆಗಾಗಿ ಅಗಲೀಕರಣ ಮಾಡಿ ಜಲ್ಲಿ ಹಾಕಲು ಇತ್ತೀಚೆಗೆ ಕಾಮಗಾರಿಯ ನಿರ್ವಹಣೆ ಪಡೆದ ಗುತ್ತಿಗೆದಾರರು ಜೆಸಿಬಿ ಮೂಲಕ ಗುಂಡಿಯನ್ನು ತೆಗೆದಿದ್ದು ಕಳೆದ ಹಲವು ದಿನಗಳಿಂದ ಇದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಇದೀಗ ಮಳೆ ಆರಂಭಗೊಂಡಿರುವುದರಿಂದ ರಸ್ತೆ ವಿಸ್ತರಣೆಗಾಗಿ ಮಣ್ಣು ತೆಗೆದ ಜಾಗದಲ್ಲಿ ಸಂಪೂರ್ಣ ಮಳೆಯ ನೀರು ನಿಂತಿದ್ದು ಕೆಸರುಮಯವಾಗಿದೆ. ಕೆಲವು ಕಡೆಗಳಲ್ಲಿ ಧಾರಾಕಾರ ಮಳೆ ಬಂದಾಗ ಕೆಸರುಮಿಶ್ರಿತ ಮಣ್ಣು, ಕಲ್ಲು ಸಂಪೂರ್ಣ ತೊಳೆದುಕೊಂಡು ರಸ್ತೆಗೆ ಬಂದು ನಿಲ್ಲುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದಲ್ಲದೆ ಮಣ್ಣು ತೆಗೆದ ಜಾಗದಲ್ಲಿ ಯಾವುದೇ ಎಚ್ಚರಿಕೆಯ ಸೂಚನಾಲಕ ಅಳವಡಿಸದ ಕಾರಣ ರಾತ್ರಿ ವೇಳೆ ಯಾವುದಾದರೂ ವಾಹನಗಳು ಬದಿಗೆ ತೆರಳಿದರೆ ಗುಂಡಿಗೆ ಬೀಳುವುದು ಖಚಿತ.
ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದ ಗುತ್ತಿಗೆದಾರರು ಮಣ್ಣು ತೆಗೆದ ಗುಂಡಿಗೆ ಜಲ್ಲಿ ಹಾಕಿ ಮುಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net