ವಿಪ್ರ ಯುವ ಮಹೋತ್ಸವ ಜು.6ಕ್ಕೆ

nataraj bhagavat
Published on

ಶಿವಮೊಗ್ಗ: ತ್ರಿಮತಸ್ಥ ವಿಪ್ರ ಸಮಾಜದ ಯುವ ಜನರಿಗಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಜು.6ರ ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಭಾನುವಾರ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಯುವ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ತಿಳಿಸಿದರು.

ಬ್ರಾಹ್ಮಣ ಸಮಾಜದ ಯುವಜನರಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಪ್ರೇರಣೆ ಒದಗಿಸುವ ಉದ್ದೇಶದೊಂದಿಗೆ ವಿಪ್ರ ಯುವ ಮಹೋತ್ಸವ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಕೂಡಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಹೇಳಿದರು.

ವಿಪ್ರ ಯುವ ಮಹೋತ್ಸವದಲ್ಲಿ ಸಾಮಾನ್ಯ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಜನಪದ ಗೀತೆ, ಸಮೂಹ ಗಾಯನ, ಹಾಗೂ ಭಗವದ್ಗೀತೆಯ 12ನೇ ಅಧ್ಯಾಯದ ಕಂಠಪಾಠ ಸ್ಪರ್ಧೆಗಳು ನಡೆಯಲಿವೆ. ಥಟ್ ಅಂತ ಹೇಳಿ ಮಾದರಿಯಲ್ಲಿ ತಡೆರಹಿತ ಪ್ರಶ್ನೋತ್ತರ ನಡೆಯಲಿದೆ. ಸ್ಪರ್ಧೆಗಳ ಪ್ರತಿ ವಿಭಾಗದಲ್ಲಿ ಪ್ರಥಮ ಮೂರು ಸಾವಿರ ರೂ., ದ್ವಿತೀಯ ಎರಡು ಹಾಗೂ ತೃತೀಯ ಒಂದು ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

12ರಿಂದ 25 ವರ್ಷದ ವಯೋಮಿತಿಯೊಳಗಿನ ವಿಪ್ರ ಸಮಾಜದ ಯುವಜನರು ಭಾಗವಹಿಸಬಹುದು. ಜು.4ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಾಗ್ಮಿ ಪ್ರೊ. ಪವನ್ ಕಿರಣಕೆರೆ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಬ್ರಾಹ್ಮಣ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ವೆಂಕಟೇಶಮೂರ್ತಿ, ಪ್ರಮುಖರಾದ ಡಿ.ಎಂ.ಕುಲಕರ್ಣಿ, ಕುಮಾರಶಾಸ್ತ್ರಿ, ಶ್ರೀನಿವಾಸ್ ಪುರಾಣಿಕ್, ರಾಮಗೋಪಾಲ್ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net