ಗಾಯಕ ಜುಬೀನ್​ ಗರ್ಗ್​ ಸಾವು: ಮ್ಯಾನೇಜರ್​ ಸಿದ್ಧಾರ್ಥ್ ಶರ್ಮಾ ಬಂಧನಕ್ಕೆ ಅಭಿಮಾನಿಗಳ ಒತ್ತಾಯ!Zubeen Garg

untitled-design-2025-09-26t110824879-68d627007d390
Published on

Zubeen Garg: ಅಸ್ಸಾಮಿ ಗಾಯಕ ಜುಬೀನ್​ ಗರ್ಗ್​ ಮ್ಯಾನೇಜರ್​ ಸಿದ್ದಾರ್ಥ್ ಶರ್ಮಾ ಮನೆಯ ಮುಂದೆ ಗುರುವಾರ (ಸೆ.25) ಅಭಿಮಾನಿಗಳು ಪ್ರತಿಭಟನೆ ನಡೆಸಿ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಜುಬೀನ್​ ಗರ್ಗ್ ನಿಧನದ ಬಳಿಕ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ಸಿದ್ಧಾರ್ಥ ಶರ್ಮಾ 2014 ರಿಂದ ಜುಬೀನ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗೆಯೇ ಇವರು 2023 ರಿಂದ ಜುಬೀನ್ ಗರ್ಗ್ ಮ್ಯೂಸಿಕ್ ಎಲ್ ಎಲ್ ಪಿ ಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ವೇಳೆ ಹಲವಾರು ಕೋಟಿ ಸಂಪತ್ತು ಹಾಗೂ ಹೆಚ್ಚು ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಜುಬೀನ್​ ಸಾವಿನ ತನಿಖೆಯನ್ನು ನಡೆಸಲು ಎಸ್​ಐಟಿ ತಂಡವು ಗುವಾಹಟಿಯಲ್ಲಿರುವ ಮ್ಯಾನೇಜರ್​ ಸಿದ್ದಾರ್ಥ ಮನೆಯನ್ನು ಪ್ರವೇಶಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೆಲವರು ಆತನನ್ನು ಬಂಧಿಸಲಾಗಿದೆ ಎಂದು ತಿಳಿದಿದ್ದರು. ಆದರೆ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ಪೊಲೀಸ್​ ವಾಹನದ ಮೇಲೆ ದಾಳಿ ನಡೆಸಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ಹತೋಟಿಗೆ ತಂದಿದ್ದಾರೆ.

ಘಟನೆಯ ಬಗ್ಗೆ ಅಸ್ಸಾಂ ಪೊಲೀಸರ ವಿಶೇಷ ತಂಡವು ಸಂಗೀತಗಾರ ಶೇಖರ್​ ಜ್ಯೋತಿ ಅವರಿಗೆ ವಿಚಾರಣೆಗೆ ಬರಲು ನೊಟೀಸ್​ ಜಾರಿ ಮಾಡಿದೆ. ಇನ್ನು ಉದ್ಯಮಿ ಶ್ಯಾಮಕಾನು ಮಹಾಂತ ಅವರ ಮನೆ ಮೇಲೆ ಖುದ್ದಾಗಿ ಭೇಟಿ ನೀಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಆದರೆ, ದಾಳಿಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಶ್ಯಾಮಕಾನು ಮಹಾಂತ ಅವರ ಕಾರ್ಯಕ್ರಮಗಳು ಅಸ್ಸಾಮಿ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಅವರಿಗೆ ಯಾವುದೇ ಹಣಕಾಸಿನ ಬೆಂಬಲವನ್ನು ನೀಡದಿರಲು ನಿರ್ಧರಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಹಿನ್ನಲೆ

ಜುಬೀನ್​​ ಗರ್ಗ್​ ಸಾವಿಗೆ ಕಾರಣ ಮತ್ತು ಆ ಸಂದರ್ಭಗಳ ತನಿಖೆಗಾಗಿ ಸಿಐಡಿ ಡಿಜಿಪಿ ಮುನ್ನಾ ಪ್ರಸಾದ್​ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಲಾಗಿದೆ. ಜುಬೀನ್​ ಸಾವಿನ ಪ್ರಕರಣದ ಎಸ್​ಐಟಿ ತನಿಖೆಯಲ್ಲಿ ಸತ್ಯ ಹೊರಬರದಿದ್ದರೆ, ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net