

ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯ ನಂತರದ ದೊಡ್ಡ ಭಯೋತ್ಪಾದಕ ದಾಳಿ ಮಂಗಳವಾರ ಪಹಲ್ಗಾಮ್ಲ್ಲಿ ನಡೆದಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ದೇಶವನ್ನು ಬೆಚ್ಚಿಬೀಳಿಸಿದೆ. ಶಾಂತವಾಗಿದ್ದ ಕಾಶ್ಮೀರದಲ್ಲಿ ಮತ್ತೆ ರಕ್ತಪಾತ ನಡೆದಿದ್ದು, ಘಟನೆಯನ್ನು ಇಡೀ ದೇಶ ಏಕದನಿಯಲ್ಲಿ ಖಂಡಿಸಿದೆ. ಉಗ್ರರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಭಯೋತ್ಪಾದನೆ ವಿರುದ್ಧದ ಸಮರವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೊಂದು ಭೀಕರ ದಾಳಿ ನಡೆಸಿದ್ದು, ಪಹಲ್ಗಾಮ್ಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಂಗಳವಾರ ನಡೆದ ದಾಳಿಯಲ್ಲಿ ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ರಸ್ತೆ ಸಂಪರ್ಕವಿಲ್ಲ, ಈ ಹಿನ್ನೆಲೆಯಲ್ಲಿ ಪೋನಿಗಳ ಮೂಲಕ ಸ್ಥಳೀಯರು ಗಾಯಾಳುಗಳನ್ನು ಕೆಳಗೆ ಕರೆತಂದಿದ್ದಾರೆ. ರಸ್ತೆ ಸಂಪರ್ಕವಿಲ್ಲದ ಕಾರಣ ಭದ್ರತಾ ಪಡೆಗಳೂ ಘಟನಾ ಸ್ಥಳಕ್ಕೆ ತಲುಪಲು ವಿಳಂಬವಾಯಿತು. ಕಾಲುದಾರಿಯ ಮೂಲಕ ಸೈನಿಕರು ಆಗಮಿಸಿದ್ದು, ಈ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೆಲಿಕಾಪ್ಟರ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಣಿವೆಯಲ್ಲಿದ್ದ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್ಲ್ಲಿ ನಡೆದ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. 2019ರಲ್ಲಿ 370ನೇ ವಿಧಿ ಹಿಂಪಡೆದ ಬಳಿಕ ಹಲವು ಉಗ್ರ ಸಂಘಟನೆಗಳ ಭಯೋತ್ಪಾದಕರನ್ನು ಒಟ್ಟುಗೂಡಿಸಿ ‘ದಿ ರೆಸಿಸ್ಟನ್ಸ್ ಫ್ರಂಟ್’ ಸ್ಥಾಪಿಸಲಾಗಿತ್ತು. ದಾಳಿ ನಡೆಸಿದ ಉಗ್ರರು ಜಮ್ಮುವಿನ ಕಿಶ್ತ್ಯಾರ್ನಲ್ಲಿ ಗಡಿ ದಾಟಿ ಭಾರತದೊಳಗೆ ನುಸುಳಿ ದಕ್ಷಿಣ ಕಾಶ್ಮೀರದ ಕೊಕರ್ನಾಗ್ ಮೂಲಕ ಬೈಸರನ್ ತಲುಪಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗುಪ್ತಚರ ವಿಭಾಗದ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋನ್ ಮೂಲಕ ದಾಳಿಯ ಮಾಹಿತಿ ಪಡೆದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುವಂತೆ ಅಮಿತ್ ಷಾಗೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಷಾ ಶ್ರೀನಗರಕ್ಕೆ ತೆರಳಿದ್ದು ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ತುರ್ತು ಸಭೆ ನಡೆಸಿದ್ದಾರೆ.
ಪಹಲ್ಗಾಮ್ಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಅವರ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲವಾಗಿದೆ ಮತ್ತು ಇನ್ನಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ದಾಳಿಯನ್ನು ಖಂಡಿಸಿದ್ದು, ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮೋದಿ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ. ಇದು ಹೇಡಿತನದ ಮತ್ತು ಅಮಾನವೀಯ ಕೃತ್ಯವಾಗಿದೆ. ಮುಗ್ಧ ನಾಗರಿಕರ ಮೇಲೆ ನಡೆದ ಈ ದಾಳಿಯನ್ನು ಕ್ಷಮಿಸಲಾಗುವುದಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. | ದ್ರೌಪದಿ ಮುಮು ರಾಷ್ಟ್ರಪತಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಉಗ್ರರು ದಾಳಿ ನಡೆಸಿದರು.
ಸುಮಾರು ಐದು ಜನ ಭಯೋತ್ಪಾ ದಕರು ದಾಳಿ ನಡೆಸಿದ್ದು, ಗುಂಡು ಹಾರಿಸುವ ಮುನ್ನ ಹೆಸರು ಕೇಳಿದ್ದರು. ಉಗ್ರರು ದಾಳಿ ನಡೆಸುವಾಗ ಭೀತಿಯಿಂದ ಓಡಿದ ಜನರು ಬಯಲು ಪ್ರದೇಶದಲ್ಲಿ ಅಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಸುಲಭವಾಗಿ ಉಗ್ರರ ಗುಂಡಿನ ದಾಳಿಗೆ ಪ್ರವಾಸಿಗರು ಬಲಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಮಿನಿ ಸ್ವಿಟ್ಜರ್ಲೆಂಡ್ ಎಂದೇ ಕರೆಯಲ್ಪಡುವ ಹುಲ್ಲುಗಾವಲು ಪ್ರವಾಸಿಗರು, ಚಾರಣಿಗರ ನೆಚ್ಚಿನ ತಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ಶಸ್ತ್ರಸಜ್ಜಿತ ಭಯೋತ್ಪಾದಕರು ಕುದುರೆ ಸವಾರಿ ಮಾಡುತ್ತಿದ್ದವರು ಮತ್ತು ಸುಂದರ ದೃಶ್ಯಗಳನ್ನು ನೋಡುತ್ತ ವಿಹರಿಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದರು. ಗಾಯಾಳುಗಳನ್ನು ಕೂಡಲೇ ಪಹಲ್ಗಾಮ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಲಿದ್ದು, ಶೀಘ್ರದಲ್ಲೇ ಎನ್ಐಎ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನಾಲ್ಕು ದಿನದ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ವೇಳೆಯಲ್ಲೇ ದೊಡ್ಡ ಮಟ್ಟದ ದಾಳಿ ನಡೆಸುವುದು ಉಗ್ರರ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ. ಇನ್ನು ದಾಳಿ ನಡೆದ ಬೈಸರನ್ ಕಣಿವೆ ಪ್ರದೇಶ ಪ್ರದೇಶ ಪ್ರಮುಖ ಪ್ರವಾಸಿ ಸ್ಥಳವಾಗಿದ್ದು, ಪ್ರವಾಸಿ ಋತು ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಇದೇ ವೇಳೆ ಜುಲೈ 3 ರಿಂದ ಆರಂಭವಾಗಲಿರುವ 38 ದಿನಗಳ ಅಮರನಾಥ ಯಾತ್ರೆಗೆ ಸಿದ್ಧತೆ ನಡೆಯುತ್ತಿದೆ. ಅಮರನಾಥ ಯಾತ್ರೆಯಲ್ಲಿ ಪಹಲ್ಗಾಮ್ ಸಹ ಪ್ರಮುಖ ನೆಲೆಯಾಗಿರುವ ಹಿನ್ನೆಲೆಯಲ್ಲಿ ಉಗ್ರರು ದಾಳಿ ನಡೆಸಲು ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಪಹಲ್ಗಾಮ್ ಪ್ರಮುಖ ಪ್ರವಾಸಿತಾಣ ಮತ್ತು ಅಮರನಾಥ ಯಾತ್ರೆಯ ಒಂದು ಪ್ರಮುಖ ಬೇಸ್ಕ್ಯಾಂಪ್. ಈ ಹಿನ್ನೆಲೆಯಲ್ಲಿ ಪಹಲ್ಗಾಮ್ಲ್ಲಿ ಹಲವು ಬಾರಿ ಉಗ್ರರ ದಾಳಿಗಳು ನಡೆದಿವೆ. 2000ನೇ ಇಸವಿಯಲ್ಲಿ ಪಹಲ್ಗಾಮ್ಲ್ಲಿ ಅಮರನಾಥ ಯಾತ್ರೆಯ ಬೇಸ್ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 30 ಭಕ್ತರು ಬಲಿಯಾಗಿದ್ದರು. 60 ಜನರು ಗಾಯಗೊಂಡಿದ್ದರು. 2001ರಲ್ಲಿ ಶೇಷ್ನಾಗ್ನಲ್ಲಿ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿ 13 ಯಾತ್ರಿಕರನ್ನು ಹತ್ಯೆ ಮಾಡಿದ್ದರು. 2002ರಲ್ಲಿ ಪಹಲ್ಗಾಮ್ ಪ್ರದೇಶದಲ್ಲಿ 11 ಜನರನ್ನು ಉಗ್ರರು ಹತ್ಯೆ ಮಾಡಿದ್ದರು. 2017ರಲ್ಲಿ ಅಮರನಾಥ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದವರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 8 ಜನರು ಪ್ರಾಣ ಕಳೆದುಕೊಂಡರು. ಕಳೆದ ವರ್ಷ ಪಹಲ್ಗಾಮ್ ಯನ್ನರ್ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ರಾಜಸ್ಥಾನದ ದಂಪತಿ ಗಾಯಗೊಂಡಿದ್ದರು.
ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮಾರ್ಚ್ 2000ದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ದಕ್ಷಿಣ ಕಾಶ್ಮೀರದ ಛತ್ತಿಸಿಂಗ್ಪುರದಲ್ಲಿ ಉಗ್ರರು 35 ಸಿಖ್ಖರನ್ನು ಹತ್ಯೆ ಮಾಡಿದ್ದರು.