

ಗೋಣಿಕೊಪ್ಪ: ರಾಜ್ಯಕ್ಕೆ ಬರುವ ಹಲವು ಪ್ರವಾಸಿ ವಾಹನಗಳು ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡಿದ್ದು, ಈ ಲೈಟ್‌ಗಳ ಪ್ರಖರ ಬೆಳಕಿನಿಂದಾಗಿ ಎದುರು ಬರುವ ವಾಹನಗಳ ಚಾಲಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಇಂತಹ ವಾಹನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್‌ನ ಜಿಲ್ಲಾ ಘಟಕ ಆಗ್ರಹಿಸಿದೆ.
ಕೆಲವು ಖಾಸಗಿ ವಾಹನಗಳು ಬಾಡಿಗೆ ಹೋಗುತ್ತಿರುವುದು ಕಂಡುಬಂದಿದ್ದು, ಇಂತಹ ವಾಹನಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಹಳೆಯ ವಾಹನಗಳನ್ನು ಮಾರಾಟ ಮಾಡಿ ಅದೇ ರೀತಿಯ ವೈಟ್ ಬೋರ್ಡ್ ವಾಹನಗಳನ್ನು ಪಡೆದು ಶಾಲಾ ವಾಹನಗಳಾಗಿ, ಮದುವೆ ಇನ್ನಿತರ ಸಮಾರಂಭಗಳಿಗೆ ಬಳಸಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕಳ್ಳಿಚಂಡ ಪರಶುರಾಮ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೇರಳದ ಖಾಸಗಿ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿದ್ದು, ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಯಾರು ಹೊಣೆ? ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ಗಮನಹರಿಸಿ, ಇಂತಹ ವಾಹನ ಚಾಲಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆನ್ ಅವರು ಮಾತನಾಡಿ, ಕೇರಳ ರಾಜ್ಯದ ಟ್ಯಾಕ್ಸಿ ಚಾಲಕರು ರಾಜ್ಯದ ಗಡಿಯೊಳಗೆ ಬಂದು ಅಯ್ಯಪ್ಪ ಭಕ್ತರನ್ನು ಶಬರಿಮಲೆಗೆ ಕರೆದೊಯ್ಯುವುದನ್ನು ಪೊಲೀಸ್ ಹಾಗೂ ಸಾರಿಗೆ ಇಲಾಖೆ ತಡೆಹಿಡಿಯಬೇಕು. ಸಾರ್ವಜನಿಕರು ಹಾಗೂ ಅಯ್ಯಪ್ಪ ಭಕ್ತರು ಹಳದಿ ಬೋರ್ಡ್ ಇರುವ ಜಿಲ್ಲೆಯ ವಾಹನಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ, ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಸಾವಿರಾರು ವಾಹನಗಳು ತೆರಿಗೆ ಪಾವತಿಸದೆ ಸಂಚರಿಸುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಆರ್‌ಟಿಒ ಕಚೇರಿ ತೆರೆಯಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಅಖಿಲ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.