Balaramana Dinagalu Review - ಆ ದಿನಗಳ ಬಲರಾಮನ ಕಲ್ಟ್ ಕಹಾನಿ

Balaramana Dinagalu
Balaramana Dinagalu
Published on
Balaramana Dinagalu Review -
ಚಿತ್ರ: ಬಲರಾಮನ ದಿನಗಳು
ನಿರ್ದೇಶನ: ಕೆ.ಎಂ.ಚೈತನ್ಯ
ತಾರಾಗಣ: ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರ, ವಿನಯ್, ಪ್ರತಾಪ್ ಮತ್ತಿತರರು
ಸಾಮಾನ್ಯವಾಗಿ ಲಾಂಗು, ಮಚ್ಚು, ರೌಡಿಸಂ ಕಥೆಗಳನ್ನು ಮಾಸ್ ಎನ್ನುತ್ತಾರೆ. ಆದರೆ, ಅಂತಹ ಕಥೆಗಳಿಗೆ ಕೆ.ಎಂ.ಚೈತನ್ಯ ಆ್ಯಕ್ಷನ್-ಕಟ್ ಹೇಳಿದರೆ, ಅದು ಕ್ಲಾಸ್ ಎನಿಸಿಕೊಳ್ಳುತ್ತದೆ. ಅದಕ್ಕೆ ಉದಾಹರಣೆ ‘ಆ ದಿನಗಳು’. 19 ವರ್ಷಗಳ ನಂತರ ಆ ಸಾಲಿಗೆ ‘ಬಲರಾಮನ ದಿನಗಳು’ ಕೂಡ ಸೇರಿಕೊಂಡಿದೆ. 1985ರಿಂದ 95ರವರೆಗೆ ಬೆಂಗಳೂರಿನ ಅಂಡರ್‌ವರ್ಲ್ಡ್ ಹೇಗೆಲ್ಲ ಮಗ್ಗಲು ಬದಲಿಸಿತು? ರಾಜಕೀಯ ಬೆಳವಣಿಗೆಗಳು, ಪ್ರಮುಖ ಘಟನೆಗಳೇನು? ಹೀಗೆ ಹಲವು ಅಂಶಗಳು ಚಿತ್ರದಲ್ಲಿ ಇಣುಕು ಹಾಕುತ್ತವೆ.
ಬದುಕು ಹಸನು ಮಾಡಿಕೊಳ್ಳಲು ಹಾಸನದಿಂದ ಬೆಂಗಳೂರಿಗೆ ಬರುವ ಮುಂಗೋಪಿ ಬಲರಾಮ (ವಿನೋದ್) ಕೆಲಸಕ್ಕೆ ಸೇರಲು ಹೋಗಿ, ಮಾಲೀಕನಿಗೆ ಹೊಡೆದುಬಿಡುತ್ತಾನೆ. ವಾಪಸ್ ಮನೆಗೆ ಬರುವಾಗ ಕೆಲ ಹುಡುಗರು ಆತನ ಪರ್ಸ್ ಕದಿಯುತ್ತಾರೆ. ಅವರ ಬೆನ್ನು ಹತ್ತುವ ಆತನಿಗೆ ಪಿಕ್ ಪಾಕೆಟರ್‌ಗಳ ನಾಯಕ ಬಿಂಡ ಎದುರಾಗುತ್ತಾನೆ. ನೂಕಾಟದಲ್ಲಿ ಬಿದ್ದು ಬಿಂಡ ಪ್ರಾಣ ಬಿಡುತ್ತಾನೆ. ‘ಬಿಂಡನ ಆಕಸ್ಮಿಕ ಸಾವು ನಿರುದ್ಯೋಗಿ ಬಲರಾಮನನ್ನು ಕೊಲೆಗಾರನನ್ನಾಗಿ ಮಾಡುತ್ತದೆ’. ಬಿಂಡ ಬೆಂಗಳೂರು ಡಾನ್ ಜಯರಾಮ್ (ಆಶಿಶ್) ಕಡೆಯುವನು ಅಂತ ತಿಳಿಯುತ್ತದೆ. ಆದರೆ, ಜಯರಾಮನ ಕಡೆಯುವರೇ ಬಲರಾಮನಿಗೆ ಬೇಲ್ ಕೊಡಿಸುತ್ತಾರೆ. ಇನ್ನು ಬಲರಾಮ ಬಲಿಯಾಗುವುದು ಫಿಕ್ಸ್ ಎನ್ನುತ್ತಿರುವಾಗಲೇ, ಆತನನ್ನು ಜಯರಾಮ್ ತನ್ನ ತಂಡದಲ್ಲಿ ಸೇರಿಸಿಕೊಳ್ಳುತ್ತಾನೆ. ಜಯರಾಮನ ಬಂಟನಾಗುವ ಬಲರಾಮ, ಕ್ರಮೇಣ ಗ್ಯಾಂಗ್‌ನ ಫೇವರಿಟ್ ಎನಿಸಿಕೊಳ್ಳುತ್ತಾನೆ. ‘ಅಂಡರ್‌ವರ್ಲ್ಡ್‌ನಲ್ಲಿ ಹೆಸರು ಬೆಳೀತಾ ಹೋದಷ್ಟು, ಆಯಸ್ಸು ಇಳೀತಾ ಹೋಗುವಂತೆಯೇ ಬಲರಾಮನಿಗೆ ಶತ್ರುಗಳೂ ಹೆಚ್ಚುತ್ತಾರೆ. ಕತ್ತಿ (ವಿನಯ್), ಮೋನಪ್ಪ ರೈ (ರಮೇಶ್) ಜತೆಗೆ ಪೊಲೀಸರು ಬಲರಾಮನ ಹಿಂದೆ ಬೀಳುತ್ತಾರೆ. ಅಲ್ಲಿಂದ ‘ಬಲರಾಮನ ದಿನಗಳು’ ಬದಲಾಗುತ್ತವೆ. ಹೇಗೆ? ಮುಂದೇನು? ಅಂತ ತಿಳಿಯಲು ಸಿನಿಮಾ ನೋಡಿ.
‘ಧುರಂಧರ್’ ಸರಣಿಯಲ್ಲಿ ನೈಜ ವ್ಯಕ್ತಿಗಳು, ಘಟನೆಗಳಿಂದ ಪ್ರೇರಣೆ ಪಡೆದು, ‘ಕಾಲ್ಪನಿಕ’ ಕಥೆ ಕಟ್ಟಿರುವಂತೆಯೇ, ಚೈತನ್ಯ ಕೂಡ ‘ಬಲರಾಮನ...’ ಕಾಲ್ಪನಿಕ ಕಥೆ ಕಟ್ಟಿಕೊಟ್ಟಿದ್ದಾರೆ. 1992ರಲ್ಲಿ ವೀರಪ್ಪ ಮೊಯ್ಲಿ ಸಿಎಂ ಆಗಿ ಪದಗ್ರಹಣ, 1993ರ ಮುಂಬೈ ಭಯೋತ್ಪಾದಕ ದಾಳಿ, ಮೋನಪ್ಪ ರೈ ದುಬೈ ಪಲಾಯನ, ರಾ ಜತೆ ಒಪ್ಪಂದ... ‘ಗಿರಿಬಾಲೆ’ (1985), ‘ಕೂಲೀ’ (1983), ‘ನೀ ಬರೆದ ಕಾದಂಬರಿ’ (1985) ಸೇರಿ ಸಿನಿಮಾ ಪೋಸ್ಟರ್‌ಗಳು, ವಾಹನಗಳು, ಕಾಸ್ಟ್ಯೂಮ್‌ಗಳು... ಹೀಗೆ 80-90ರ ದಶಕವನ್ನು ಸೃಷ್ಟಿಸುವಲ್ಲಿ ತಂಡ ಶ್ರಮಿಸಿದೆ. ಕ್ಲಾಸ್‌ಆಗಿ ಕಾಣಿಸಿಕೊಳ್ಳುವ ವಿನೋದ್ ಪ್ರಭಾಕರ್ ಮಾಸ್ ಫೈಟ್‌ಗಳಲ್ಲಿ ಮಿಂಚಿದ್ದಾರೆ. ಆಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರ ಜುಗಲ್ಬಂದಿ ತೆರೆಯ ಮೇಲೆ ನೋಡುವುದೇ ಚಂದ. ಕತ್ತಿ ವಿನಯ್ ಗೌಡ, ಸಿಂಗ್ಲಿ ಆದಿತ್ಯ ಗಮನ ಸೆಳೆಯುತ್ತಾರೆ. ಉಳಿದೆಲ್ಲ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಸಂತೋಷ್ ನಾರಾಯಣ್ ಹಿನ್ನೆಲೆ ಸಂಗೀತ ಮತ್ತು ಎಚ್‌ಸಿ ವೇಣು ಛಾಯಾಗ್ರಹಣ ‘ಬಲರಾಮನ ದಿನಗಳ’ನ್ನು ಮತ್ತಷ್ಟು ಆಪ್ತವಾಗಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net