12 ಪೆನ್ ಡ್ರೈವ್‌, 222 ದಾಖಲೆ; ಆರೋಪಿ ರಾಜೇಂದ್ರನ್ ತಪ್ಪಿತಸ್ಥ ಎಂದು ಸಾಬೀತು: ಕೋರ್ಟ್ ತೀರ್ಪು | Vineetha Murder Case

ವಿಜಯವಾಣಿ - 2025-04-10T124001.130 (1)
Published on

Vineetha Murder Case: ಇಂದು (ಏ.10) ತಿರುವನಂತಪುರಂ ಏಳನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಪ್ರಸೂನ್ ಮೋಹನ್ ಅವರು ವಿನೀತಾ ಕೊಲೆ ಪ್ರಕರಣದ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ನೆಡುಮಂಗಾಡ್‌ನ ಕರಿಪ್ಪೂರಿನ ಚಾರುವಲ್ಲಿಕೋಣಂ ನಿವಾಸಿಯಾಗಿದ್ದ ವಿನೀತಾ (38), ಅಂಬಲಮ್ಮುಕ್ಕುವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದವರು. ಆದ್ರೆ, ರಾಜೇಂದ್ರನ್ ದುರಾಸೆಗೆ ಬಲಿಯಾದ ವಿನೀತಾ ಸಾವು ಸದ್ಯ ಆಕೆಯ ಹೆತ್ತವರು ಮತ್ತು ಮಕ್ಕಳನ್ನು ಅಕ್ಷರಶಃ ಕಂಗಾಲಾಗಿಸಿದೆ.

ಏ.10ರಂದು ಕೋರ್ಟ್​ ತೀರ್ಪು

ಪ್ರಾಸಿಕ್ಯೂಷನ್ ಪ್ರಕಾರ, ಪತ್ನಿ ವಿನೀತಾ ಬಳಿಯಿದ್ದ 2 ಕೆಜಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡುವುದು ರಾಜೇಂದ್ರನ್​ ಉದ್ದೇಶವಾಗಿತ್ತು. ತನ್ನ ಉದ್ದೇಶ ಈಡೇರಿಸಿಕೊಳ್ಳುವ ಸಲುವಾಗಿ ವಿನೀತಾಗೆ ಚಾಕು ಇರಿದು ಕೊಂದಿದ್ದ ಅಪರಾಧವು ಫೆಬ್ರವರಿ 6, 2022ರ ಬೆಳಗ್ಗೆ 11:50ಕ್ಕೆ ಸಂಭವಿಸಿದೆ. ವಿನೀತಾ ಬಳಿ ನರ್ಸರಿ ಸಸಿಗಳನ್ನು ಖರೀದಿಸುವ ನೆಪದಲ್ಲಿ ಗ್ರಾಹಕನಂತೆ ಅಂಗಡಿಯೊಳಗೆ ನುಸುಳಿದ ಕಿಡಿಗೇಡಿ, ಚಿನ್ನವನ್ನು ಕದಿಯುವ ಭರದಲ್ಲಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಕೊಲೆಯ ಸಮಯದಲ್ಲಿ, ಆರೋಪಿಯು ವೆಲ್ಲಮಾಡಂನ ಕಸ್ಟಮ್ಸ್ ಅಧಿಕಾರಿ ಸುಬ್ಬಯ್ಯ, ಪತ್ನಿ ವಸಂತಿ ಮತ್ತು ಅವರ 13 ವರ್ಷದ ದತ್ತುಪುತ್ರಿ ಅಭಿಶ್ರೀ ಅವರ ಕೊಲೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ವಿನೀತಾ ಕೊಲೆ ಮಾಡಿರುವುದು ರಾಜೇಂದ್ರನ್ ಎಂದು ಬಲವಾಗಿ ಹೇಳಲು ಆತ ಅಪರಾಧ ನಡೆದ ಜಾಗದಲ್ಲಿ ಓಡಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಈ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ಮೂಲಕ ಆತ ಕೊಲೆಯಲ್ಲಿ ಭಾಗಿಯಾಗಿರುವುದು ಸಾಬೀತಾಗಿರುವುದು ಸ್ಪಷ್ಟ ಎಂದು ಕೋರ್ಟ್​ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಯಾವುದೇ ಪ್ರತ್ಯಕ್ಷದರ್ಶಿಗಳು ಇಲ್ಲದಿದ್ದರೂ, ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳನ್ನು ಅವಲಂಬಿಸಿದೆ. 118 ಸಾಕ್ಷಿಗಳಲ್ಲಿ 96 ಜನರನ್ನು ಪರಿಶೀಲಿಸಲಾಗಿದೆ. ಸಲ್ಲಿಸಿದ ಸಾಕ್ಷ್ಯಗಳಲ್ಲಿ 12 ಪೆನ್ ಡ್ರೈವ್‌ಗಳು, ಆರೋಪಿಯ ಚಲನವಲನಗಳ ಸಿಸಿಟಿವಿ ದೃಶ್ಯಗಳನ್ನು ಹೊಂದಿರುವ 7 ಡಿವಿಡಿಗಳು ಮತ್ತು 222 ದಾಖಲೆಗಳು ಸೇರಿವೆ. ವಿಶೇಷ ಸಾರ್ವಜನಿಕ ಅಭಿಯೋಜಕ ಎಂ. ಸಲಾವುದ್ದೀನ್ ಪ್ರಾಸಿಕ್ಯೂಷನ್ ಪರವಾಗಿ ಹಾಜರಾದರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ಏನಿದು ಪ್ರಕರಣ?

ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳೊಂದಿಗೆ ನೆಡುಮಂಗಾಡ್‌ನ ಕರಿಪ್ಪೂರಿನ ಚಾರುವಲ್ಲಿಕೋಣಂನಲ್ಲಿ ವಾಸವಿದ್ದ ವಿನೀತಾ (38), ಅಂಬಲಮ್ಮುಕ್ಕುವಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಫೆಬ್ರವರಿ 6, 2022ರ ಬೆಳಗ್ಗೆ 11:50ರ ಸಮಯಕ್ಕೆ ಹಾಡಹಗಲೇ ಭೀಕರವಾಗಿ ಹತ್ಯೆಯಾದರು. ವಿನೀತಾ ಬಳಿಯಿದ್ದ 2 ಕೆಜಿ ಚಿನ್ನದ ಸರವನ್ನು ಕದಿಯುವ ಉದ್ದೇಶದಿಂದ ಅಪರಾಧಿ ರಾಜೇಂದ್ರನ್​, ಆಕೆಯನ್ನು ಕೊಲೆಗೈದಿರುವುದು ಇದೀಗ ಕೋರ್ಟ್​ನಲ್ಲಿ ಸಾಬೀತಾಗಿದೆ. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಏ.10ರಂದು ಕೇಸ್​ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಅಂತೆಯೇ ಇಂದು ಪ್ರಕಟಿಸಿದ್ದು, ಆರೋಪಿ ರಾಜೇಂದ್ರನ್​ ಅಪರಾಧಿ ಎಂದು ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net