ಅದು ದೇವಪುರ. ಶಾಸಕ ನರಿಬುದ್ಧಿಯ ನವೀನ್ ರಾಮಯ್ಯ (ಅರುಣ್) ಕ್ಷೇತ್ರಕ್ಕೆ ಸೇರಿದ ಊರು. ಅಲ್ಲಿ ಆತನ ಕುತಂತ್ರಿ ಸದಾನಂದ ಸ್ವಾಮಿ (ಗೋಪಾಲ್) ಬಲಗೈ ಬಂಟ. ಕರಿಬೆಕ್ಕು (ಯೋಗಿ) ಈ ಸ್ವಾಮಿಯ ರೈಟ್ ಹ್ಯಾಂಡು. ಈ ಮೂವರೂ ಸೇರಿ ಹಳ್ಳಿಯನ್ನು ಉದ್ಧಾರ ಮಾಡುವ ಹೆಸರಿನಲ್ಲಿ ಹಾಳು ಮಾಡುತ್ತಿರುತ್ತಾರೆ. ಮತ್ತೊಂದೆಡೆ ದೇವಪುರದ ಸಿಕ್ಸ್ತ್ ಸೆನ್ಸ್ ಸೀನನಿಗೆ (ವಿನಯ್) ಸಿಟಿಯಲ್ಲಿ ಗಾರ್ಮೆಂಟ್ಸ್, ಫ್ಯಾಕ್ಟರಿ ಸೇರೋದಕ್ಕಿಂತ ಹಳ್ಳಿಯಲ್ಲಿ ವ್ಯವಸಾಯವೇ ಇಷ್ಟ. ಹೀಗಾಗಿ ಮನೆಯವರ ಒತ್ತಡಕ್ಕೆ ಅದೆಷ್ಟು ಬಾರಿ ಸಿಟಿಗೆ ಹೋದರೂ, ಮರಳಿ ಹಳ್ಳಿಯ ಗೂಡು ಸೇರುತ್ತಿರುತ್ತಾನೆ. ₹5 ರೂ. ಇಂತಹ ಸೀನ, ಡಾಕ್ಟರ್ ಶಂಕರಪ್ಪ (ಅಚ್ಯುತ್) ಜತೆ ಸೇರಿ ಕುತಂತ್ರಿ, ನರಿ ಮತ್ತು ಕರಿಬೆಕ್ಕನ್ನು ಹೇಗೆ ಸದೆಬಡಿಯುತ್ತಾನೆ? ಎಂಬುದೇ "ಗ್ರಾಮಾಯಣ'ದ ಒನ್ಲೈನ್. 2007ರಲ್ಲಿ ಕಥೆ ಪ್ರಾರಂಭದಲ್ಲಿಯೇ ಹಳ್ಳಿಯ ಪರಿಸರ, ದನ&ಕರು, ಆಚರಣೆ, ಆಚಾರ-ವಿಚಾರಗಳನ್ನು ಪರಿಚಯಿಸುತ್ತಾ, ಆರ್ಎಕ್ಸ್ ಬೈಕ್, ಪೂಮೆಕ್ಸ್ ಚಡ್ಡಿ... ಹೀಗೆ ಪ್ರತಿ ಸಣ್ಣ-ಸಣ್ಣ ಡೀಟೇಲ್ಗಳ ಮೂಲಕ ಪ್ರೇಕ್ಷಕರನ್ನು ದೇವಪುರಕ್ಕೆ ಕರೆಸಿಕೊಂಡುಬಿಡುತ್ತಾರೆ. ಪಾತ್ರಗಳ ಪರಿಚಯಿಸುತ್ತಾ, ಕಥೆಯ ಹಿನ್ನೆಲೆ ಹೇಳುತ್ತಿರುವಂತೆಯೇ ಮೊದರ್ಲಧ ಹೇಗೆ ಮುಗಿಯುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಇನ್ನೂ ಮುಂದುವರಿಯಬೇಕಿತ್ತು ಎನ್ನುವಷ್ಟು ಪ್ರೇಕ್ಷಕರ ಕಥೆಯೊಂದಿಗೆ ಬೆಸೆದುಕೊಂಡುಬಿಡುತ್ತಾನೆ. ದ್ವೀತಿಯಾರ್ಧದಲ್ಲಿ ಕಮರ್ಷಿಯಲ್ ಅಂಶಗಳ ಜತೆಜತೆಗೆ ನಿರ್ದೇಶಕರು "ಸಾಮಾಜಿಕ ಜವಾಬ್ದಾರಿ' ನಿಭಾಯಿಸಲು ಹೆಚ್ಚು ಗಮನ ಹರಿಸಿರುವಂತಿದೆ. "ದೊಡ್ಮನೆ ಕುಡಿ' ವಿನಯ್ ರಾಜಕುಮಾರ್ "ರಾಯಲ್ ಸ್ಟಾರ್' ಆಗಿದ್ದರೂ ಚಪ್ಪಲಿ ಕಾಲಿನಲ್ಲಿ ಮುಖಕ್ಕೆ ಒದೆಸಿಕೊಳ್ಳುವ, ಪೊರಕೆಯಲ್ಲಿ ಹೊಡೆಸಿಕೊಂಡಿದ್ದು, ಗ್ಲಾಮರ್ ಗೊಂಬೆಯಂತೆ ಮಿಂಚುವ ಅವಕಾಶವಿದ್ದರೂ ಹವಾಯಿ ಚಪ್ಪಲಿಯಲ್ಲಿ ಏಟು ತಿನ್ನುವ, ಹಳ್ಳಿ ಬದುಕನ್ನು ಜೀವಿಸಿರುವ ಮೇಘಾ ಶೆಟ್ಟಿ ಚಿತ್ರದ ಪ್ರಮುಖ ಆಕರ್ಷಣೆ, ಅಪರ್ಣಾ ವಸ್ತಾರೆ, ಯೋಗಿ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ ಕುಮಾರ್ ಸೇರಿ ಉಳಿದೆಲ್ಲ ಪಾತ್ರಗಳೂ ಗಮನ ಸೆಳೆಯುತ್ತವೆ. ಇನ್ನು ಆಪ್ತ ಎನಿಸುವ ಸಂಭಾಷಣೆ, ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಒಬ್ಬ ನಿರ್ದೇಶಕನ ಕನಸಿಗೆ ತಂತ್ರಜ್ಞರು ಮತ್ತು ಕಲಾವಿದರು ಜತೆಯಾಗಿ ನಿಂತರೆ, ಎಂತಹ ಮ್ಯಾಜಿಕ್ ಬೇಕಾದರೂ ಸೃಷ್ಟಿಯಾಗಿಬಿಡಬಹುದು ಎನ್ನುವುದಕ್ಕೆ "ಗ್ರಾಮಾಯಣ' ಸಾಕ್ಷಿ!