

ನವದೆಹಲಿ: ಗ್ರಾಮಸ್ಥರ ಪ್ರತಿಭಟನೆಗೆ ಹೆದರಿದ ಮಹಾರಾಷ್ಟ್ರ ಸರ್ಕಾರ ಸಾಂಗ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದ ರಾಜ್ಯ ಹೆದ್ದಾರಿ ಯೋಜನೆಯನ್ನೇ ಬದಲಿಸಿದೆ! ಅದು ಕೇವಲ ಒಂದು ಮರಕ್ಕಾಗಿ ನಡೆದ ಪ್ರತಿಭಟನೆ. ಈ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಚಾರ ಪಡೆದಿದ್ದರಿಂದ, ಕೊನೆಗೂ ಮಣಿದ ಅಧಿಕಾರಿಗಳು ಆ ಮರವನ್ನು ಉಳಿಸಲು ಯೋಜನೆಯನ್ನೇ ಬದಲಿಸಿದ್ದಾರೆ.
ಸಾಂಗ್ಲಿ ಜಿಲ್ಲೆಯ ಭೋಸೆ ಗ್ರಾಮದಲ್ಲಿ ಎಲ್ಲಮ್ಮ ದೇಗುಲ ಇದೆ. ಈ ದೇವಸ್ಥಾನದ ಪ್ರಾಂಗಣದಲ್ಲಿ 400 ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರ ಇದೆ. ಇದು 400 ಚದರ ಮೀಟರ್ನಷ್ಟು ಹಬ್ಬಿದ್ದು, ನಯಮನೋಹರವಾದ ನೋಟವನ್ನು ಒದಗಿಸುವ ಜತೆಗೆ ಪ್ರದೇಶದಲ್ಲಿ ತಂಪಾದ ನೆರಳನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಪಂಢರಾಪುರಕ್ಕೆ ತೆರಳುವ ವಾರ್ಕರಿಗಳಿಗೆ (ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಹೋಗುವವರು) ವಿರಮಿಸಲು ಸಹಕಾರಿಯಾಗಿದೆ. ಮಹಾರಾಷ್ಟ್ರ ರಾಜ್ಯ ಹೆದ್ದಾರಿ 166ರಲ್ಲಿ ಬರುವ ರತ್ನಗಿರಿ-ಸೊಲ್ಲಾಪುರ-ನಾಗ್ಪುರ ಹೆದ್ದಾರಿ ನಿರ್ಮಾಣಕ್ಕಾಗಿ ಈ ಮರವನ್ನು ಕಡಿಯಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ಆದರೆ, ಪುರಾತನವಾದ ಈ ಮರವನ್ನು ಉಳಿಸಿಕೊಳ್ಳಬೇಕು ಎಂದು ಪಣತೊಟ್ಟ ಭೋಸೆ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು. ಈ ವಿಷಯ ಮಾಧ್ಯಮಗಳನ್ನೂ ತಲುಪಿತು. ಪ್ರತಿದಿನವೂ ಚಿಪ್ಕೋ ಚಳವಳಿಯ ರೀತಿಯಲ್ಲಿ ಮರದ ಬಳಿ ಬಂದು ಅದರ ಚಿತ್ರಗಳನ್ನು ಫೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಮರವನ್ನು ಅಪ್ಪಿಕೊಂಡು ಅವುಗಳ ಚಿತ್ರಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಇದರಿಂದಾಗಿ ಈ ಪ್ರತಿಭಟನೆ ಅಭಿಯಾನದ ರೂಪ ಪಡೆದುಕೊಂಡಿತು. ಇದು ಮಹಾರಾಷ್ಟ್ರ ಸರ್ಕಾರದ ಗಮನಕ್ಕೂ ಬಂದಿತು.
ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆಧಿತ್ಯ ಠಾಕ್ರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತನ್ ಗಡ್ಕರಿ ಅವರಿಗೆ ಜು.16ರಂದು ಪತ್ರಬರೆದು, ರಸ್ತೆ ನಿರ್ಮಾಣಕ್ಕಾಗಿ ಪುರಾತನ ಮರವನ್ನು ಬಲಿಗೊಡುವುದು ಬೇಡ. ಅದನ್ನು ರಕ್ಷಿಸುವ ಸಲುವಾಗಿ ಹೆದ್ದಾರಿ ಯೋಜನೆಯಲ್ಲಿ ಸೂಕ್ತ ಮಾರ್ಪಾಟುಗಳನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ವಿಶಾಲವಾಗಿ ಹಬ್ಬಿರುವ ಈ ಮರವು ಈ ಪ್ರದೇಶದ ಐತಿಹಾಸಿಕ ಮಹತ್ವಕ್ಕೆ ಪೂರಕವಾಗಿದೆ. ಅಲ್ಲದೆ, ನೂರಾರು ಪಕ್ಷಿಗಳು ಮತ್ತು ಸಣ್ಣಪುಟ್ಟ ಪ್ರಾಣಿಗಳಿಗೆ ಆಶ್ರಯತಾಣವೂ ಆಗಿದೆ ಎಂದು ಆದಿತ್ಯ ಠಾಕ್ರೆ ಅವರ ಮಾತನ್ನು ಮನ್ನಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಮರವನ್ನು ಉಳಿಸುವ ನಿಟ್ಟಿನಲ್ಲಿ ರತ್ನಗಿರಿ-ನಾಗ್ಪುರ ಹೆದ್ದಾರಿ ಯೋಜನೆಯಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಕೇಂದ್ರ ಸಚಿವರ ಸೂಚನೆ ಮೇರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಅಧಿಕಾರಿಗಳು ಯೋಜನೆಯಲ್ಲಿ ಮಾರ್ಪಾಡು ಮಾಡಲು ಮುಂದಾಗಿದ್ದಾರೆ. ಯೋಜನೆಯನ್ನು ಮರುಪರಿಶೀಲಿಸಲಾಯಿತು. ಮುಖ್ಯರಸ್ತೆಗಾಗಿ ಈ ಮರದ ಕೆಲವೊಂದು ಕೊಂಬೆಗಳನ್ನು ಕತ್ತರಿಸಬೇಕಾಗುತ್ತದೆ. ಆದರೆ, ಸರ್ವಿಸ್ ರಸ್ತೆಗೆ ಅಡ್ಡಲಾಗಿ ಬರುತ್ತಿದ್ದ ಮರದ ಮುಖ್ಯಕಾಂಡವನ್ನು ಉಳಿಸಲು ಆ ಮಾರ್ಗದ ವಿನ್ಯಾಸವನ್ನು ಬದಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.