

ತುಮಕೂರು: ಪತ್ನಿಯ ಅಂತ್ಯಸಂಸ್ಕಾರ ಮಾಡಲು ಪತಿ ಬಾರದಿದ್ದಕ್ಕೆ ಗ್ರಾಮಸ್ಥರೆಲ್ಲ ಸೇರಿ ಗಂಡನ ಮನೆಯ ಬಾಗಿಲಿಗೆ ಮೃತದೇಹವನ್ನು ಅಡ್ಡಲಾಗಿ ಇಟ್ಟು ಹೊದ ಘಟನೆ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.
ಕಲಾವತಿ (26) ಮೃತ ದುರ್ದೈವಿ. ಈಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಗಂಡನೇ ಕೊಲೆ ಮಾಡಿ ಬಾವಿಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗಂಡ ಸೋಮಶೇಖರ್ ವಿರುದ್ಧ ಕಲಾವತಿ ಕುಟುಂಬಸ್ಥರು ಈ ಆರೋಪ ಮಾಡಿದ್ದಾರೆ.
ಪತ್ನಿಯಿದ್ದರೂ ಮನೆಯ ಪಕ್ಕದ ಶೆಡ್ನಲ್ಲಿ ಅನ್ಯ ಸ್ತ್ರೀಯನ್ನು ಸೋಮಶೇಖರ್ ತಂದಿಟ್ಟುಕೊಂಡಿದ್ದನಂತೆ. ಈ ವಿಚಾರವಾಗಿ ಪದೇಪದೆ ಗಂಡ-ಹೆಂಡತಿಯ ನಡುವೆ ಗಲಾಟೆ ನಡೆಯುತ್ತಿತ್ತಂತೆ. ನಿನ್ನೆಯೂ ಇದೇ ವಿಚಾರಕ್ಕೆ ಗಲಾಟೆ ನಡೆದು ಗಂಡನೇ ಹೆಂಡತಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಆರೋಪಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)