ಗ್ರಾಮ ಪಂಚಾಯಿತಿ ಸದಸ್ಯರಿಗೆ 6 ತಿಂಗಳ ವೇತನ ಬಾಕಿ; ಸರ್ಕಾರ ಕೊಟ್ಟರೂ ಕೈಸೇರದ ಗೌರವಧನ..

Editorial
Published on

| ವಿಲಾಸ ಮೇಲಗಿರಿ ಬೆಂಗಳೂರು

ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯಾಗಿರುವ ಗ್ರಾಮ ಪಂಚಾಯಿತಿಗಳ ಚುಕ್ಕಾಣಿ ಹಿಡಿದಿರುವ ಸಹಸ್ರಾರು ಸದಸ್ಯರೀಗ ಮಾಸಿಕ ಗೌರವಧನ ಸಿಗದ ಪರಿಣಾಮ ಆರ್ಥಿಕ ಅಭದ್ರತೆಯಲ್ಲಿ ದಿನದೂಡುವಂತಾಗಿದೆ. ರಾಜ್ಯದಲ್ಲಿ ಒಟ್ಟಾರೆ 6012 ಗ್ರಾಮ ಪಂಚಾಯಿತಿಗಳಿದ್ದು, ಸುಮಾರು 99,537 ಸದಸ್ಯರಿದ್ದಾರೆ. ಈ ಸದಸ್ಯರಿಗೆ ಆರು ತಿಂಗಳಿಂದ ಗೌರವಧನ ಸಿಕ್ಕಿಲ್ಲ! ‘ದೇವರು ಕೊಟ್ಟರೂ ಪೂಜಾರಿ ಕೊಡಲ್ಲ’ ಎಂಬಂತೆ ಸರ್ಕಾರ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿದರೂ ಮಧ್ಯವರ್ತಿ ಸಂಸ್ಥೆಗಳ ಹೊಣೆಗೇಡಿತನದಿಂದ ಗೌರವಧನ ಸಕಾಲಕ್ಕೆ ಸದಸ್ಯರ ಕೈಗೆ ಸೇರುತ್ತಿಲ್ಲ. 2020 ಜನವರಿಯಿಂದ ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರ ಆಯ್ಕೆಯಾಗಿದೆ. ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ತರುವಾಯ ಪಂಚಾಯಿತಿ ಸದಸ್ಯರಿಗೆ ಅಧಿಕಾರ ಪ್ರಾಪ್ತವಾಗುತ್ತದೆ. ಅಲ್ಲಿಂದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗೌರವಧನ ಪಡೆಯಲು ಅರ್ಹರಾಗುತ್ತಾರೆ. ಕಳೆದ ಸಾಲಿನ ಆರ್ಥಿಕ ವರ್ಷದ ಕೊನೆಯ ತ್ರೖೆಮಾಸಿಕದ ಜನವರಿ-ಫೆಬ್ರವರಿ-ಮಾರ್ಚ್​ನ ಗೌರವಧನ ಬಿಡುಗಡೆ ಮಾಡಿದೆ.

ವಿತರಣೆ ಪ್ರಕ್ರಿಯೆ ಹೇಗೆ?: ಆಯಾ ಜಿಲ್ಲೆಗಳ ಜಿಪಂಗಳು ತಮ್ಮ ವ್ಯಾಪ್ತಿಯ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳ ಸಂಖ್ಯೆಯನ್ನು ನಿಖರವಾಗಿ ಗಣನೆಗೆ ತೆಗೆದುಕೊಂಡು ಪ್ರತಿ ಪಂಚಾಯಿತಿಗೆ ನೀಡಬೇಕಾಗಿರುವ ಮೊತ್ತವನ್ನು ಲೆಕ್ಕ ಹಾಕಿ ಗ್ರಾಪಂ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಮಾಸಿಕ ಗೌರವಧನ ಪಾವತಿಸಬೇಕು. ಆದರೆ, ಅನೇಕ ಜಿಲ್ಲಾ ಪಂಚಾಯಿತಿಗಳು ತೋರುವ ನಿರ್ಲಕ್ಷ್ಯದಿಂದ ಸದಸ್ಯರಿಗೆ ಗೌರವಧನ ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಮತ್ತೆ ಕೆಲವು ಕಡೆ ಜಿಲ್ಲಾ ಪಂಚಾಯಿತಿಯಿಂದ ಗ್ರಾಪಂ ಖಾತೆಗೆ ಹಣ ಜಮೆಯಾದರೂ ಪಿಡಿಒ ಕೊಡುತ್ತಿಲ್ಲ. ಇನ್ನು ಕೆಲವೆಡೆ ಸದಸ್ಯರ ಗೌರವಧನವನ್ನು ಅಭಿವೃದ್ಧಿ ಸೇರಿದಂತೆ ಬೇರೆ ಬೇರೆ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಬೇಕಾದಾಗ ಕೊಡುತ್ತಿರುವ ದೂರುಗಳೂ ಕೇಳಿ ಬರುತ್ತಿವೆ.

68.23 ಕೋಟಿ ರೂ. ಬಿಡುಗಡೆ: 2021-22ನೇ ಸಾಲಿಗೆ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳ ಗೌರವಧನಕ್ಕಾಗಿ ಆಯವ್ಯಯದಲ್ಲಿ 139.32 ಕೋಟಿ ರೂ. ಕಾಯ್ದಿರಿಸಲಾಗಿದೆ. ಈ ಪೈಕಿ 2021ನೇ ಸಾಲಿನ 2 ತ್ರೖೆಮಾಸಿಕ ಅಂದರೆ, ಸೆಪ್ಟೆಂಬರ್​ವರೆಗೆ 2 ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಮೊದಲ ಕಂತಿನಲ್ಲಿ 34,51,35,000 ರೂ. ಹಾಗೂ 2ನೇ ಕಂತಿನಲ್ಲಿ 33,72,18,000 ರೂ. ಬಿಡುಗಡೆ ಮಾಡಿದೆ. ಆದರೆ, ಒಟ್ಟು ಸದಸ್ಯರ ಪೈಕಿ ಸುಮಾರು 75 ಸಾವಿರಕ್ಕೂ ಹೆಚ್ಚು ಸದಸ್ಯರಿಗೆ 6 ತಿಂಗಳ ಗೌರವಧನ ಸಿಕ್ಕಿಲ್ಲ. ಕೆಲವು ಸದಸ್ಯರಿಗೆ ಮೊದಲ ತ್ರೖೆಮಾಸಿಕದ ಗೌರವಧನವೂ ಬಂದಿಲ್ಲ!

ಅನೇಕರಿಗೆ ಗೌರವಧನ ಅತ್ಯಗತ್ಯ: ಶೇ.50ಕ್ಕೂ ಹೆಚ್ಚು ಸದಸ್ಯರಿಗೆ ಗೌರವಧನ ಅಗತ್ಯವಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕ ದುರ್ಬಲರು ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿದ್ದಾರೆ. ಅನೇಕ ಕಡೆ ಕೂಲಿ ಕಾರ್ವಿುಕರು, ನಿತ್ಯ ದುಡಿದೇ ಹೊಟ್ಟೆ ಹೊರೆಯಬೇಕಾದವರೂ ಚುನಾಯಿತರಾಗಿದ್ದಾರೆ. ಗ್ರಾಪಂ ಅಧ್ಯಕ್ಷರು/ಉಪಾಧ್ಯಕ್ಷರು/ಸದಸ್ಯರು ಎಂಬ ಕಾರಣಕ್ಕೆ ಅನೇಕರು ಕೂಲಿಗೆ ಹೋಗಲು ಆಗುತ್ತಿಲ್ಲ. ಕೂಲಿಗೆ ಕರೆಯುತ್ತಲೂ ಇಲ್ಲ.

ತಿಂಡಿ, ಟೀ ಹೆಸರಿನಲ್ಲಿ ಶುಲ್ಕ ಸಮಾಪನ: ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನ್ವಯ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸುವ ಗ್ರಾಮ ಸಭೆ, ಸ್ಥಾಯಿ ಸಮಿತಿ ಸಭೆ, ಸಾಮಾನ್ಯ ಸಭೆ ಮತ್ತಿತರ ಸಭೆಗಳಿಗೆ ಉಪವೇಶನ ಶುಲ್ಕ 100 ರೂ. ನಿಗದಿಪಡಿಸಲಾಗಿದೆ. ಆದರೆ, ಅನೇಕ ಕಡೆ ಆ ಶುಲ್ಕವನ್ನೂ ನೀಡುತ್ತಿಲ್ಲ. ಇನ್ನು ಕೆಲವೆಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳು ಸಭೆಗಳಿಗೆ ತಿಂಡಿ, ಟೀ ತರಿಸಿದ್ದೇವೆ ಎಂಬದು ಸಬೂಬು ಹೇಳಿ ಸಾಗಹಾಕುತ್ತಾರೆ. ಮತ್ತೆ ಕೆಲವೆಡೆ ಗೌರವಧನ ಪಡೆಯುವವರಿಗೆ ಉಪವೇಶನ ಶುಲ್ಕ ನೀಡುವಂತಿಲ್ಲ ಎಂದು ಸದಸ್ಯರನ್ನು ವಂಚಿಸುತ್ತಿದ್ದಾರೆ ಎಂಬ ಆರೋಪಗಳು ಇವೆ.

ಕೈಕಟ್ಟಿ ನಿಲ್ಲುವ ಸ್ಥಿತಿ: ಗ್ರಾಪಂ ಸದಸ್ಯರು ಗೌರವಧನಕ್ಕಾಗಿ ಪಿಡಿಒಗಳ ಬಳಿ ಕೈಕಟ್ಟಿ ನಿಲ್ಲಬೇಕಾದ ಸ್ಥಿತಿ ಅನೇಕ ಕಡೆಗಿದೆ. ಸರ್ಕಾರ ಇಂತಹ ಪರಿಸ್ಥಿತಿಯಿಂದ ಪಾರು ಮಾಡಬೇಕು. ಸದಸ್ಯರ ಬ್ಯಾಂಕ್ ಖಾತೆ ವಿವರ ಸರ್ಕಾರದ ಬಳಿ ಇದ್ದು, ನೇರ ನಗದು ವರ್ಗಾವಣೆ ಪದ್ಧತಿ ಜಾರಿಗೊಳಿಸಬೇಕು ಎಂಬುದು ಸದಸ್ಯರ ಒತ್ತಾಯ.

ಸಮಿತಿ ರಚಿಸಿ, ಗೌರವಧನ ಹೆಚ್ಚಿಸಿ: ಸರ್ಕಾರ ಗ್ರಾಪಂ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸುವ ಸಂಬಂಧ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಅದೇ ಮಾದರಿಯಲ್ಲಿ ಚುನಾಯಿತ ಪ್ರತಿನಿಧಿಗಳ ಗೌರವಧನ ಬಿಡುಗಡೆ ಸಂಬಂಧ ಸಮಿತಿ ರಚಿಸಿ, ಗೌರವಧನ ಹೆಚ್ಚಿಸಬೇಕೆಂಬುದು ಸದಸ್ಯರ ಬೇಡಿಕೆ.

ಬಿಡಿಗಾಸಿನ ಗೌರವಧನ?: ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪಿಡಿಒಗಳ ವೇತನಕ್ಕಿಂತ ಹೆಚ್ಚು ಗೌರವಧನ ನೀಡಬೇಕು ಎಂದು ರಮೇಶ್ ಕುಮಾರ್ ನೇತೃತ್ವದ ಸಮಿತಿ ಹೇಳಿತ್ತು. ಆದರೆ, ಸರ್ಕಾರ ವರದಿಯ ಆ ಅಂಶವನ್ನು ಒಪ್ಪದೆ ಕಡಿಮೆ ಗೌರವಧನ ನೀಡುತ್ತಿದೆ.

ಮಾಸಿಕ ಗೌರವಧನ:·ಅಧ್ಯಕ್ಷರು-3000 ರೂ., ಉಪಾಧ್ಯಕ್ಷರು-2000 ರೂ., ಸದಸ್ಯರು-1000 ರೂ.

ಕೇರಳ ಮಾದರಿ: ಕೇರಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 20 ಸಾವಿರ ರೂ., ಉಪಾಧ್ಯಕ್ಷರಿಗೆ 18 ಸಾವಿರ ಹಾಗೂ ಸದಸ್ಯರಿಗೆ 10 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ.

ಗೌರವಧನ ಪಾವತಿಗೆ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಬೇಕು. ಇಂದಿನ ಕಾಲಮಾನಕ್ಕೆ ತಕ್ಕಂತೆ ಗೌರವಧನ ಪರಿಷ್ಕರಿಸಬೇಕು. ಕೇರಳ ರಾಜ್ಯದ ಮಾದರಿಯಲ್ಲಿ ಗೌರವಧನ ನೀಡಬೇಕು. | ಕಾಡಶೆಟ್ಟಿಹಳ್ಳಿ ಸತೀಶ್ ಸಂಚಾಲಕ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net