

ಹುಬ್ಬಳ್ಳಿ: ಕೊಲೆಯಾಗಿದ್ದ ಗ್ರಾಮ ಪಂಚಾಯತ್ ಮಾಜಿ ಸದಸ್ಯರೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಕರಣ ಕುತೂಹಲ ಕೆರಳಿಸಿದ್ದು, ಹಲವಾರು ಪ್ರಶ್ನೆಗಳನ್ನು ಮೂಡಿಸಿದೆ. ಧಾರವಾಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಇಲ್ಲಿನ ಗಂಗಿವಾಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ದೀಪಕ್ ಪಟಧಾರಿ ಅವರ ಪತ್ನಿ ಪುಷ್ಪಾ ಪಟಧಾರಿ ಆತ್ಮಹತ್ಯೆ ಮಾಡಿಕೊಂಡವರು. ಇಲ್ಲಿ ನವನಗರದಲ್ಲಿ ಈ ಪ್ರಕರಣ ನಡೆದಿದೆ. ಈಕೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ದೀಪಕ್ ಪಟಧಾರಿ ಕೊಲೆಯಾಗಿತ್ತು. ಹುಬ್ಬಳ್ಳಿ ಯಾಲೂಮಿನ ರಾಯನಾಳದ ಬಳಿ ಕೊಲೆ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಪುಷ್ಪಾ ಅಲೆದಾಡುತ್ತಿದ್ದರು. ದೀಪಕ ಕುಟುಂಬಸ್ಥರ ಆಗ್ರಹದ ಮೇರೆಗೆ ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಆ ಮೇರೆಗೆ ಸಿಐಡಿ ಅಧಿಕಾರಿಗಳಿಂದ ತನಿಖೆ ಚುರುಕುಗೊಂಡಿದ್ದು, ಮತ್ತೊಂದೆಡೆ ತನಿಖೆಗೆ ಆಗ್ರಹಿಸಿದ್ದ ಪತ್ನಿಯೇ ನೇಣು ಹಾಕಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.