

ಹುಣಸೂರು: ಪದೇ ಪದೆ ಜ್ವರಬಾಧೆ ಕಾಣಿಸಿಕೊಳ್ಳುತ್ತಿರುವ ತಾಲೂಕಿನ ನಿಲುವಾಗಿಲು ಗ್ರಾಮಕ್ಕೆ ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ವಚ್ಛತೆ ಸೇರಿ ಇನ್ನಿತರ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
ಕೀಟಶಾಸ್ತ್ರಜ್ಞೆ ರತ್ನಕುಮಾರಿ ನೇತೃತ್ವದಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ತಂಡ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆಯಿತು. ಈ ವೇಳೆ ಚರಂಡಿಗಳಲ್ಲಿ ಕೊಳಚೆ ನೀರು ಹರಿಯದೆ ನಿಂತಿರುವುದು ಕಂಡುಬಂತು.
ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ಕಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದರ್ಶನ್ ಮಾತನಾಡಿ, ಗ್ರಾಮದ ಜನರಿಗೆ ಆಗಾಗ್ಗೆ ಜ್ವರಬಾಧೆ ಕಾಣಿಸಿಕೊಳ್ಳುತ್ತಿದೆ. ಆದರೆ, ಡೆಂಘೆಯಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದರು.
ಗ್ರಾಮದಲ್ಲಿ ಶುಚಿತ್ವದ ಕೊರತೆ ಎದ್ದುಕಾಣುತ್ತಿದೆ. ವೈಯಕ್ತಿಕ ಮತ್ತು ಪರಿಸರ ಶುಚಿತ್ವದ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮೀಣರಲ್ಲಿ ಸತತವಾಗಿ ಅರಿವು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಗ್ರಾಮದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಜಾನುವಾರುಗಳಿಗೆ ನಿರ್ಮಿಸಲ್ಪಟ್ಟಿರುವ ನೀರಿನ ತೊಟ್ಟಿ ಶುಚಿಗೊಳ್ಳದೆ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಶುಚಿತ್ವದ ಕಡೆ ಗಮನಹರಿಸಲು ಗ್ರಾ.ಪಂ. ಅಧಿಕಾರಿಗಳನ್ನು ಕೋರಲಾಗಿದೆ. ಗ್ರಾಮದಲ್ಲಿ ಹೈಪೋಕ್ಲೋರೇಡ್ ದ್ರಾವಣದ ಫಾಂಗಿಂಗ್ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕೀಟಶಾಸ್ತ್ರಜ್ಞೆ ರತ್ನಕುಮಾರಿ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಕೈಗೊಂಡಿರುವ ಲಾರ್ವಾ ಸಮೀಕ್ಷೆಯಲ್ಲಿ ವಿವಿಧ ಜಾತಿಯ ಸೊಳ್ಳೆಗಳು ಪತ್ತೆಯಾಗಿವೆ. ಆದರೆ ಗ್ರಾಮೀಣರಲ್ಲಿ ಶುಚಿತ್ವದ ಕುರಿತು ಎಚ್ಚರಿಕೆ, ಗ್ರಾ.ಪಂ.ಗಳಿಂದ ಸಕಾರಾತ್ಮಕ ಸ್ಪಂದನೆಯ ಅವಶ್ಯಕತೆಯಿದೆ. ನೀರಿನ ಟ್ಯಾಂಕ್‌ಗಳಲ್ಲಿ ಸೊಳ್ಳೆ, ಅದರ ಲಾರ್ವಾವನ್ನು ತಿಂದು ಬದುಕುವ ಕೆಲಜಾತಿಯ ಮೀನುಗಳಿದ್ದು ಅವುಗಳ ಬಳಕೆಗೂ ಯೋಚಿಸಲಾಗುತ್ತಿದೆ ಎಂದರು.
ವಲಯ ಮಟ್ಟದ ಕೀಟಶಾಸ್ತ್ರಜ್ಞೆ ರೇಖಾ, ಕೀಟ ಸಂಗ್ರಾಹಕ ರುದ್ರಪ್ಪ, ಕಿರಿಯ ಆರೋಗ್ಯ ಸಹಾಯಕರಾದ ಪ್ರೇಮ್‌ಕುಮಾರ್, ಜಯಮ್ಮ, ಆಶಾ ಕಾರ್ಯಕರ್ತೆಯರು ಇದ್ದರು.
ಗ್ರಾ.ಪಂ. ನಿರ್ಲಕ್ಷೃ: ಗ್ರಾಮದ ತುಂಬೆಲ್ಲ ಚರಂಡಿಗಳು ಗಲೀಜು ನೀರಿನಿಂದ ತುಂಬಿದ್ದು, ಸೊಳ್ಳೆಗಳ ಕಾಟ ತಾಳದಾಗಿದೆ. 6 ತಿಂಗಳು ಕಳೆದರೂ ಚರಂಡಿಗಳ ಶುಚಿತ್ವವನ್ನು ಗ್ರಾ.ಪಂ. ಮಾಡಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಿಸುತ್ತಿಲ್ಲ. ಜನರು ಜ್ವರ ಬಂದು ಜೀವ ಕಳೆದುಕೊಳ್ಳಬೇಕೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.