

ಮುಂಬೈ: ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ '12 ಫೇಲ್' ಚಿತ್ರವು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದ್ದು. ಅತ್ಯಂತ ಯಶಸ್ವಿ ಹಾಗೂ ಬ್ಲಾಕ್ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿತು. ಕೇವಲ ಬಾಕ್ಸ್ ಆಫೀಸ್ನಲ್ಲಿ ಮಾತ್ರವಲ್ಲದೇ ಕಥಾಹಂದರಲ್ಲೂ ಸೈಎನಿಸಿಕೊಂಡ ಚಿತ್ರವು ಆಸ್ಕರ್ಗೆ ನಾಮನಿರ್ದೇಶನ ಆಗಬೇಕು ಎಂಬ ಕೂಗು ಕೂಡ ಕೇಳಿಬಂದಿತ್ತು.
ಈ ಸಿನಿಮಾದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದು, ನಟ ವಿಕ್ರಾಂತ್ ಮಾಸ್ಸೆ! ಹೌದು, ಚಿತ್ರ ಪೂರ ವಿಕ್ರಾಂತ್ ಅಭಿನಯ ಪ್ರೇಕ್ಷಕರ ಗಮನಸೆಳೆದಿದ್ದು, ನೋಡುಗರನ್ನು ಭಾವುಕಗೊಳಿಸಿತು. ಸಿನಿಮಾದ ಗೆಲುವಿನ ಬೆನ್ನಲ್ಲೇ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ವಿಕ್ರಾಂತ್ ಮಾಸ್ಸೆ, ಗಮನಾರ್ಹವಾಗಿ ಹಲವಾರು ಪ್ರಾಜೆಕ್ಟ್ಗಳನ್ನು ಸ್ವೀಕರಿಸಿದ್ದಾರೆ. ಇದೀಗ ಈ ಚಿತ್ರಕ್ಕೂ ಮುನ್ನ ತಾವು ಪಟ್ಟ ಕಷ್ಟ, ಎದುರಿಸಿದ ಕಠಿಣ ಸವಾಲುಗಳ ಕುರಿತು ನಟ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ತಮ್ಮ ಪತ್ನಿ, ನಟಿ ಶೀತಲ್ ಠಾಕೂರ್ ಅವರೊಂದಿಗೆ ಗಂಡು ಮಗು ಸ್ವಾಗತಿಸಿದ ವಿಕ್ರಾಂತ್, ಮನರಂಜನಾ ಉದ್ಯಮದಲ್ಲಿ "ಬಾಲಿಕಾ ವಧು," "ಧರಮ್ ವೀರ್," ಮತ್ತು "ಕುಬೂಲ್ ಹೈ" ನಂತಹ ಯಶಸ್ವಿ ಸೀರಿಯಲ್ಗಳಲ್ಲಿ ಕಾಣಿಸಿಕೊಂಡಿದ್ದರು. "ಎ ಡೆತ್ ಇನ್ ದಿ ಗುಂಜ್" ಸ್ಟಾರ್ ಈ ಹಿಂದೆ ತಿಂಗಳಿಗೆ 35 ಲಕ್ಷ ರೂಪಾಯಿ ಸಂಬಳ ಬರುತ್ತಿದ್ದ ಟಿವಿ ನಟನೆಯ ಕೆಲಸವನ್ನು ತೊರೆದ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಧಾರವಾಹಿಯಿಂದ ದೂರ ಉಳಿಯಬೇಕು ಅಂದುಕೊಂಡ ವಿಕ್ರಾಂತ್, ಇದರಿಂದ ಹೊರಬಂದು ತನ್ನ ಅದೃಷ್ಟ ಪರೀಕ್ಷೆಗೆ ಇಳಿಯಬೇಕೆಂದು ನಿರ್ಧರಿಸಿದರು. ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ನೆಮ್ಮದಿ ಕಾಣಬೇಕು ಎಂದು ಮುಂದಾದ ಮಾಸ್ಸೆ, 24ನೇ ವಯಸ್ಸಿನಲ್ಲಿ ತಮಗೆ ತಿಂಗಳಿಗೆ ಬರುತ್ತಿದ್ದ 35 ಲಕ್ಷ ರೂಪಾಯಿ ಸಂಬಳವನ್ನು ಕೈಬಿಟ್ಟು, ಆಡಿಷನ್ ಕೊಡಲು ಪ್ರಾರಂಭಿಸಿದರು.
ಟಿವಿ ತೊರೆದ ನಂತರ ಎದುರಿಸಿದ ಆರಂಭಿಕ ಸವಾಲುಗಳು ಬಹಳ ಕಷ್ಟವಾಗಿತ್ತು ಎಂದ ವಿಕ್ರಾಂತ್, "ಅಂದು ನಾನು ಆಡಿಷನ್‌ಗೆ ಹೋಗಲು ನನ್ನ ಪತ್ನಿ ಶೀತಲ್ ನನಗೆ ಪಾಕೆಟ್ ಮನಿ ಕೊಡುತ್ತಿದ್ದರು. ಕಾರಣ, ಅಂದು ಮಾಡಿದ್ದ ಉಳಿತಾಯವೆಲ್ಲವೂ ಕೇವಲ ಒಂದು ವರ್ಷದಲ್ಲಿ ಖಾಲಿಯಾಯಿತು. ಆಗ ಏನು ಮಾಡಬೇಕು ಎಂದು ತಿಳಿಯಲಿಲ್ಲ. ನನ್ನ ಹೆಂಡತಿ ಶೀತಲ್ ಹಣ ಕೊಟ್ಟಿರುವ ನಿದರ್ಶನಗಳೇ ಹೆಚ್ಚು" ಎಂದರು.
ಇಂದು ವಿಕ್ರಾಂತ್ ಮಾಸ್ಸೆಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ತಮ್ಮ ಪಾತ್ರಗಳ ಮೂಲಕ ನೋಡುಗರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಒಳ್ಳೆಯ ಕಥಾಹಂದರಗಳನ್ನು ಆಯ್ದುಕೊಳ್ಳುವ ಮುಖೇನ ಇದೀಗ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ,(ಏಜೆನ್ಸೀಸ್).