ಸಂಪಾದಕೀಯ; ಆಡಳಿತ ಸುಧಾರಣೆಯ ಮಹತ್ವದ ನಿರ್ಧಾರ

Vidhana Soudha vvani
Published on

ಸರ್ಕಾರಿ ವ್ಯವಸ್ಥೆಗೆ ಆಗಾಗ ಸುಧಾರಣೆಯ ಸ್ಪರ್ಶವನ್ನು ನೀಡಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ ಜಡತ್ವ, ಉದಾಸೀನತೆ, ವಿಳಂಬ, ಭ್ರಷ್ಟಾಚಾರದಂಥ ಅಪಸವ್ಯಗಳು ದೊಡ್ಡಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ.

ಅದಕ್ಕೆಂದೆ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನರಿಗೆ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಆಡಳಿತ ಸುಧಾರಣೆಗೆ ಮುಂದಾಗಿದೆ. ಇದರ ಭಾಗವಾಗಿ ಇಲಾಖೆಗಳ ವಿಲೀನ, ಅನಗತ್ಯ ಹುದ್ದೆಗಳ ರದ್ದತಿ, ಅಗತ್ಯ ಹುದ್ದೆಗಳ ಭರ್ತಿಗೆ ಆದ್ಯತೆ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ರಾಜ್ಯದಲ್ಲಿ ಒಟ್ಟು ಮಂಜೂರಾದ ಹುದ್ದೆಗಳು 7.73 ಲಕ್ಷ ಇದ್ದು, ಪ್ರಸಕ್ತ 5.30 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಲ್ಲದೆ, ಸಿಬ್ಬಂದಿ ವಿಷಯದಲ್ಲಿ ಭಾರಿ ಅಸಮತೋಲನವೂ ಇದೆ. ಅಂದರೆ, ಕೆಲಸದ ಒತ್ತಡ ಇರುವ ಕಡೆ ಸಿಬ್ಬಂದಿ ಕೊರತೆ ತೀವ್ರವಾಗಿದ್ದರೆ, ಅನೇಕ ಇಲಾಖೆಗಳಲ್ಲಿ ಕೆಲಸ ಇಲ್ಲದಿದ್ದರೂ ಹುದ್ದೆಗಳಿವೆ. ಲಿಪಿಕ ಸಿಬ್ಬಂದಿ ಮತ್ತು ಕಾರ್ಯಾಚರಣೆ ಸಿಬ್ಬಂದಿ ನಡುವಿನ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಈ ಹಿಂದೆ ರಚನೆಯಾಗಿದ್ದ ಆಡಳಿತ ಸುಧಾರಣಾ ಆಯೋಗ, ಆರನೇ ವೇತನ ಆಯೋಗ ಮತ್ತು ಕಾಲಕಾಲಕ್ಕೆ ರಚನೆಯಾಗಿರುವ ಸಮಿತಿಗಳು ನೀಡಿರುವ ಶಿಫಾರಸುಗಳ ಆಧಾರದಲ್ಲಿ ಆಡಳಿತ ಬಿಗಿಗೊಳಿಸುವುದು ಸರ್ಕಾರದ ಚಿಂತನೆ. ಹಾಗಾಗಿ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದದಲ್ಲಿ ಐವರು ಮಂತ್ರಿಗಳ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಮೂರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.

ಎಲ್ಲ ಇಲಾಖೆಗಳ ಪತ್ರಾಂಕಿತ ವ್ಯವಸ್ಥಾಪಕರು, ಪ್ರಾದೇಶಿಕ ಆಯುಕ್ತರ ಹುದ್ದೆ ರದ್ದುಗೊಳಿಸುವ ಸಾಧ್ಯತೆ ಇದೆ. ಅದೇ ರೀತಿ, ಭಾಷಾಂತರ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ, ಕಾನೂನು ಮಾಪನ ಇಲಾಖೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ವಿಲೀನ ಮಾಡಲು ಚಿಂತನೆ ನಡೆದಿದೆ.

ಸರ್ಕಾರಿ ಕಾರ್ಯಗಳು ವಿಳಂಬವಾಗದಿರಲಿ, ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಹಿಂದೆ ವಿಕೇಂದ್ರೀಕರಣ ವ್ಯವಸ್ಥೆಗೆ ಒತ್ತು ನೀಡಲಾಯಿತು ಎಂಬುದು ಗೊತ್ತಿರುವಂಥದ್ದೇ. ಅದರ ಅನುಕೂಲತೆಗಳೇನು, ಅನನಕೂಲತೆಗಳೇನು ಎಂಬುದರ ಸ್ಪಷ್ಟ ಚಿತ್ರಣ ಈಗ ಸಿಗುತ್ತಿದೆ. ಒಂದೇ ರೀತಿಯಾಗಿ ಕಾರ್ಯನಿರ್ವಹಿಸುವ ಹಲವು ಇಲಾಖೆಗಳು ವಿಲೀನಗೊಂಡರೆ ಜನರಿಗೂ ಸೇವೆ ಒಂದೇ ಕಡೆ ಲಭಿಸುತ್ತದೆ. ಸಿಬ್ಬಂದಿಯ ಕೊರತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೂಡ ಈ ಸುಧಾರಣೆ ಪೂಕರವಾಗುತ್ತದೆ.

ಮುಖ್ಯವಾಗಿ, ಭ್ರಷ್ಟಾಚಾರದ ಎಲ್ಲ ಹಾದಿಗಳನ್ನು ಮುಚ್ಚಬೇಕು. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಇಲಾಖೆಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಆಗಿದ್ದರೂ, ಕೆಲವರು ಹೇಗೋ ಭ್ರಷ್ಟಾಚಾರದ ಹೊಸ ದಾರಿಯನ್ನು ಕಂಡುಕೊಂಡು, ಜನರನ್ನು ಹೈರಾಣಾಗಿಸುತ್ತಾರೆ.

ಎಲ್ಲ ಇಲಾಖೆಗಳು ಪರಿಣಾಮಕಾರಿಯಾಗಿ, ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸುವಂತಾಗಬೇಕು. ಪಾರದರ್ಶಕವಾದ, ವಿಳಂಬರಹಿತವಾದ ಗುಣಮಟ್ಟದ ಸೇವೆ ದೊರೆಯುವಂತಾಗಬೇಕು. ಆಗಲೇ ಇಂಥ ಪ್ರಯತ್ನಗಳು ಸಾರ್ಥಕತೆ ಕಾಣಲು ಸಾಧ್ಯ. ಸಂಪುಟ ಉಪ ಸಮಿತಿಯ ವರದಿ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇರಿಸಲಿದ್ದು, ಅದು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿರಲಿ ಎಂಬುದೇ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net