

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಪುನರಾಯ್ಕೆ ನಿಶ್ಚಿತ. ಸಂಸದ ಡಾ.ಕೆ.ಸುಧಾಕರ್ ಸೇರಿ ಎಲ್ಲರ ಜತೆಗೆ ಅವರ ಸಂಪರ್ಕ, ಸಂವಹನ ಚೆನ್ನಾಗಿರಬೇಕು. ಸಂಸದ ಡಾ.ಕೆ.ಸುಧಾಕರ್ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗಲ್ಲವೆಂದು ಶಾಸಕ ಮುನಿರತ್ನ ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ದೊಡ್ಡದು. ಆ ಹುದ್ದೆಯಲ್ಲಿರುವ ಆರ್.ಅಶೋಕ್ ತಾವೇ ಮುಂದಾಳತ್ವವಹಿಸಿ ಆಂತರಿಕ ಗೊಂದಲ ಬಗೆಹರಿಸಬೇಕಾಗಿತ್ತು ಎಂದರು.
ಭಿನ್ನಮತ ಸರಿಯಾಗುವುದು ನಮ್ಮ ಪಕ್ಷದಲ್ಲೇ ಕೆಲವರಿಗೆ ಇಷ್ಟವಿಲ್ಲ. ಹಿಂಬಾಗಿಲಿನಿಂದ ಕುಮ್ಮಕ್ಕು ನೀಡುತ್ತಿದ್ದಾರೆ. ಕಲಹ ನಿಲ್ಲಿಸುವ ಎತ್ತಿ ಕಟ್ಟುತ್ತಿದ್ದು, ಹೀಗೆಯೇ ಮುಂದುವರಿದರೆ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಮುನಿರತ್ನ ಬೇಸರ ವ್ಯಕ್ತಪಡಿಸಿದರು.
ಪಕ್ಷದ ವರಿಷ್ಠರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಆದರೆ ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಅವಲಂಬಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಅವರೇ ಬೇಕು, ಒಳಜಗಳ ಬಗೆಹರಿಸಲು ಅವರೇ ಬರಬೇಕು.
ಮೊದಲು ರಾಜ್ಯ ನಾಯಕರು ಸರಿ ಹೋಗಬೇಕು. ಪಕ್ಷಕ್ಕೆ ನಮ್ಮ ಕೊಡುಗೆ ಏನು ? ಎಂದು ತಿಳಿದುಕೊಂಡು, ನಮ್ಮವರನ್ನು ನಾವೇ ಟೀಕಿಸುವುದು ಸರಿಯಲ್ಲವೆಂದು ಮುನಿರತ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಕಾಂಗ್ರೆಸ್ ಪಕ್ಷದ ಅಂತಃಕಲಹ, ಮನಸ್ತಾಪ, ಒಳಜಗಳ ದೊಡ್ಡ ಪ್ರಮಾಣದಲ್ಲಿ ಇದ್ದರೂ ಬಿಜೆಪಿಯದೇ ಹೈಲೈಟ್ ಆಗುತ್ತಿದೆ. ಸಿಎಂ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಅವರ ಪಕ್ಷದೊಳಗೆ ಪ್ರಯತ್ನ ಮಾಡಲಾಗುತ್ತಿದ್ದು, ಸ್ನೇಹಿಮಯಿಕೃಷ್ಣ ಅವರನ್ನು ಬೆಳೆಸುತ್ತಿರೋದೇ ಸಿದ್ದರಾಮಯ್ಯ ಅವರ ಮಗ್ಗುಲ ಮುಳ್ಳುಗಳು ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ಜತೆ ಐದು ವರ್ಷ ಕೆಲಸ ಮಾಡಿರುವ ನನಗೆ ಅವರ ಶಕ್ತಿ ಏನೆಂದು ಗೊತ್ತಿದೆ. ಅವರು 11 ಕೆವಿ ಅಲ್ಲ, 660 ಕೆವಿ ಕರೆಂಟ್, ಅವರನ್ನು ಮುಟ್ಟಿದರೆ ಸುಟ್ಟು ಹೋಗ್ತೀರಾ ?. ನಾನು ಇಷ್ಟು ಮಾತನಾಡಿದ್ದಕ್ಕೆ ನನ್ನ ಮೇಲೆ ಮತ್ತೆ ಕೇಸ್‌ಗಳು ಹಾಕಿದರೂ ಅಚ್ಚರಿಯಿಲ್ಲ ಎಂದು ಮುನಿರತ್ನ ಹೇಳಿದರು.