

ಬೆಂಗಳೂರು: ಬರ ಪರಿಹಾರ ಕೇಳಲು ಐಷಾರಾಮಿ ವಿಮಾನದಲ್ಲಿ ಪ್ರಯಾಣ ಬೆಳೆಸಿರುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಜನರ ದುಡ್ಡು ಆಕಾಶದಲ್ಲಿ ಜಾತ್ರೆ ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ ಎಂದು ಆರೋಪಿಸಿದ್ದಾರೆ.
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಜನರ ದುಡ್ಡು ಆಕಾಶದಲ್ಲಿ ಜಾತ್ರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂಥಾ ಗಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು ಕಿಡಿಕಾರಿದ್ದಾರೆ.
ಸಚಿವ ಜಮೀರ್ ಅಹಮದ್ ಅವರ ಜೊತೆ ಜನರ ತೆರಿಗೆ ಹಣ ವ್ಯಯಿಸಿ ಐಶಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮೋಜಿನ ಭಾಗವಾಗಿರುವುದು ಈ ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತಿನ್ನೇನು ಅಲ್ಲ. ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನ ಗಳನ್ನು ನೋಡಿದರೆ "ರೋಮ್ ದೊರೆ ನೀರೋ" ಉಲ್ಲೇಖಿಸುವ ಬದಲು “ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ….” ಎಂದು ವರ್ಣಿಸಬಹುದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್, ಇದು ಸ"ಮಜಾವಾದಿ" ಸಿದ್ದರಾಮಯ್ಯನವರ ಸಾಮಾನ್ಯ ಜೀವನ. ಶಾಲಾ ಮಕ್ಕಳು ಬಸ್ಸುಗಳು ಸಿಗದೆ ನೇತಾಡಿಕೊಂಡು ಬಿಎಂಟಿಸಿ/ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಓಡಾಡುವುದು, ಸರ್ಕಾರದ ಯೋಜನೆಗಳಿಗೆ ಅನುದಾನಗಳ ಕೊರತೆ, ಶಾಲೆಗಳ ನವೀಕರಣಕ್ಕೆ ಹಣದ ಕೊರತೆ ಹಾಗು ಕಾಂಗ್ರೆಸ್ ಭಾಗ್ಯಗಳಿಗೇ ಅನುದಾನದ ಕೊರತೆ ಮಧ್ಯೆ ಸಿದ್ದರಾಮಯ್ಯನವರ ವಿಮಾನ ಪ್ರಯಾಣ ಎಂದು ಬಿಜೆಪಿ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.