ತಿಪಟೂರಿನಿಂದ ವಿಜಯೇಂದ್ರ ಕಣಕ್ಕೆ!?; ವೇದಿಕೆಯಲ್ಲೇ ಈ ಬಗ್ಗೆ ಪ್ರಸ್ತಾಪಿಸಿದ ಬಿಎಸ್​ವೈ ಪುತ್ರ

vijayendra
vijayendra
Published on

ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲ ಇನ್ನೂ ಹಾಗೇ ಉಳಿದಿದ್ದರೆ, ಮತ್ತೊಂದೆಡೆ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬುದೂ ಕೆಲವರಲ್ಲಿ ಕೌತುಕ ಮೂಡಿಸಿದೆ. ಅದಕ್ಕೆ ಇಂದು ವೇದಿಕೆಯೊಂದರಲ್ಲಿ ವಿಜಯೇಂದ್ರ ಆಡಿದ ಮಾತು ಉತ್ತರ ನೀಡಿದಂತಿದೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಇಂದು ನಡೆದ ಶ್ರೀ ಗುರು ಸಿದ್ದರಾಮೇಶ್ವರ ‌ಜಯಂತ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ವಿಜಯೇಂದ್ರ ವೇದಿಕೆಯಲ್ಲಿ ಮಾತನಾಡಲು ಮುಂದಾದಾಗ ಅವರ ಪರವಾಗಿ ನಿರಂತರವಾಗಿ ಜೈಕಾರ-ಚಪ್ಪಾಳೆಗಳು ಕೇಳಿಬಂದವು.

ಅಭಿಮಾನಿಗಳ ಈ ಅಬ್ಬರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನೀವು ಹೀಗೆ ಗಲಾಟೆ ಮಾಡಿದರೆ ಬಿ.ಸಿ.ನಾಗೇಶ್ ಅವರನ್ನು ಸೈಡಿಗೆ ಕಳುಹಿಸಿ ತಿಪಟೂರಿನಿಂದಲೇ ನಾನು ಚುನಾವಣೆಗೆ ನಿಲ್ಲಬೇಕಾಗುತ್ತದೆ ಎಂದು ಹೇಳಿದರು. ಅವರು ವೇದಿಕೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಹೀಗೆ ಹೇಳಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ವಿಜಯೇಂದ್ರ ಈ ಮಾತನ್ನಾಡಿದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net