

ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲು ತಮ್ಮ ಮೇಲಿನ ಆರೋಪಗಳ ಕಾರಣಕ್ಕೆ ರಾಜೀನಾಮೆ ಕೊಡಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣಾ ಆಯೋಗಕ್ಕೆ ವಿಜಯೇಂದ್ರ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಲೋಕಾಯುಕ್ತದಿಂದ ಇವರ ಮೇಲೆ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಇವರಿಗೆ ಸಮನ್ಸ್ ಜಾರಿಯಾಗಿದೆ ಎಂದರು.
ಸಿದ್ದರಾಮಯ್ಯ ಅವರ ರಾಜಿನಾಮೆ ಕೇಳುವ ಬಿಜೆಪಿಗರೇ ಮೊದಲು ವಿಜಯೇಂದ್ರ ಅವರಿಂದ ರಾಜಿನಾಮೆ ಕೊಡಿಸಿ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕರಿಗೆ ರಾಜಿನಾಮೆ ಕೇಳಿ. ಆನಂತರ ನಮ್ಮ ಸಿಎಂ ಬಗ್ಗೆ ಮಾತನಾಡಿ ಎಂದು ಸವಾಲು ಹಾಕಿದರು.
ಬಿಜೆಪಿಯ ನೀತಿ ಪಾಠ ನೋಡಿದರೆ ನರಿಗಳು ನ್ಯಾಯ ಹೇಳಿದಂತೆ ಭಾಸವಾಗುತ್ತದೆ. ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂದು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದು ಇದೇ ಬಿಜೆಪಿಯವರು. ಭ್ರಷ್ಟ ಇತಿಹಾಸ ಹೊಂದಿರುವ ಬಿಜೆಪಿಯವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಕರ್ನಾಟಕ ಮರ್ಯಾದೆ ತೆಗೆದವರು ಈಗ ನೈತಿಕತೆಯ ಪಾಠ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರ ಮೇಲೆ ದೂರು ನೀಡಿದ ಟಿ.ಜೆ.ಅಬ್ರಹಾಂ ಅವರೇ ವಿಜಯೇಂದ್ರ ಅವರೇ ನೀಡಿರುವುದು ಆದರೆ ಇದುವರೆಗೂ ಕ್ರಮವಿಲ್ಲ. ಆದರೆ ಸಿದ್ದರಾಮಯ್ಯ ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.