

ಬೆಂಗಳೂರು: ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುತ್ತಲೇ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ದೇಶದ ಜನರು ನಿರ್ಧರಿಸಿಯಾಗಿದೆ. ಅಧಿಕೃತವಾಗಿ ಫಲಿತಾಂಶ ಪ್ರಕಟಿಸುವುದೊಂದೇ ಬಾಕಿಯಿದೆ. ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಯಾವ ದುಷ್ಟ ಶಕ್ತಿ ತಡೆಯಲಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾರಿದರು.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಹಾಲಿ ಸದಸ್ಯ, ಪಕ್ಷದ ನಿಯೋಜಿತ ಅಭ್ಯರ್ಥಿ ಪಿ.ಸಿ.ಮೋಹನ್ ಹಾಗೂ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸದಸ್ಯ, ಪಕ್ಷದ ನಿಯೋಜಿತ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಅಭಿವೃದ್ಧಿ, ಪ್ರತಿಯೊಬ್ಬರ ಏಳಿಗೆಗೆ ಮೋದಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ಹೊಸ ಆಯಾಮ, ಬಲಿಷ್ಠ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿದ್ದಾರೆ. ಜಾಗತಿಕವಾಗಿ ದೇಶದ ವರ್ಚಸ್ಸು ವೃದ್ಧಿಯಾಗಿದೆ. ಪ್ರಭಾವೀ ದೂರದೃಷ್ಟಿ ನಾಯಕ ಎಂದು ಇಡೀ ವಿಶ್ವ ಒಪ್ಪಿಕೊಂಡಿದೆ. ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಗುಣಗಾನ ಮಾಡಿದರು.
ದೇಶಾದ್ಯಂತ ಬಿಜೆಪಿ ಪರ ವಾತಾವರಣ, ಮೋದಿ ಪರವಾದ ಅಲೆಯಿದೆ. ಬಿಜೆಪಿಗೇ ಮತ್ತೆ ಅಧಿಕಾರ ನಿಶ್ಚಿತವೆಂದು ಕಾಂಗ್ರೆಸ್ ಸೇರಿ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ನೀಡಿದ ಕೊಡುಗೆ ಏನು ? ಎಂದು ಸಿಎಂ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ರಾಜ್ಯದ 28 ಕ್ಕೆ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಜನರೇ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯಅವರು ಸಾಧನಗಳೇ ಮಾತಾಡಬೇಕು ಎಂಬ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರು ಒಂದಾಗಿ ಶ್ರಮಿಸುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಹುರಿದುಂಬಿದರು.