

ಮೇಷ: ಈ ವಾರವು ನರಕ ಚತುರ್ದಶಿಯಿಂದ ಆರಂಭವಾಗುತ್ತಿದೆ. ಮನುಷ್ಯನಿಗೆ ಶುಭಾಶುಭ ಫಲಗಳನ್ನು ಕೊಡಲು ಸಾಕ್ಷಾತ್ ಶ್ರೀಕೃಷ್ಣನೇ ಅವತರಿಸಿ, ವಾಮನ ಅವತಾರ ತಳೆದು ಬಲಿ ಚಕ್ರವರ್ತಿಯನ್ನು ಪಾತಾಳಲೋಕಕ್ಕೆ ಕಳಿಸಿದ. ಮೂರು ಹೆಜ್ಜೆ ಭೂಲೋಕ ಮತ್ತೆ ಪಡೆದು ಮನುಷ್ಯನಿಗೆ ಉಪಕಾರ ಮಾಡಿದ. ಈ ವಿಷಯವನ್ನು ತಿಳಿದುಕೊಂಡು, ಮೇಷ ರಾಶಿಯವರು ದುಷ್ಟಬುದ್ಧಿಯನ್ನು ಬಿಟ್ಟು, ಕೊಟ್ಟ ಮಾತಿನಂತೆ ನಡೆಯಬೇಕು. ಸತ್ಸಂಗದಲ್ಲಿ ನಡೆದರೆ ಲಗ್ನದಲ್ಲಿ ಇರುವ ಗುರು ನಿಮ್ಮನ್ನು ಅನುಗ್ರಹಿಸಿ ಫಲ ಕೊಡುತ್ತಾನೆ. ತ್ರಿದಿನ ಪರ್ಯಂತ ಶ್ರೀಕೃಷ್ಣನ ಪೂಜೆ, ಲಕ್ಷ್ಮಿಪೂಜೆ, ಬಲೀಂದ್ರ ಪೂಜೆಯನ್ನು ಮಾಡಿ ನಿಮ್ಮ ಭಾಗ್ಯ ವೃದ್ಧಿಸಿಕೊಳ್ಳಿ.
ವೃಷಭ: ಸೋಮವಾರದಂದು ಅಮಾವಾಸ್ಯೆ. ಅತಿಯಾದ ಆಸೆ ಮನುಷ್ಯನನ್ನು ದುಃಖಕ್ಕೆ ಈಡು ಮಾಡುತ್ತದೆ. ರಾಜ-ಮಹಾರಾಜರೇ ಸೋಲನ್ನು ಒಪ್ಪಿಕೊಂಡು ಕೈಚೆಲ್ಲಿದ ನಿದರ್ಶನಗಳಿವೆ. ದ್ವಾದಶದಲ್ಲಿ ಗುರು, ಏಕಾದಶದಲ್ಲಿ ರಾಹು ನಿಮಗೆ ಎಚ್ಚರಿಕೆಯ ಗಂಟೆ ಇದ್ದಂತೆ. ತಾಳ್ಮೆಯಿಂದ ನಡೆದರೆ ಆಚೆ ದಡವನ್ನು ಸೇರಬಹುದು. ದೇವರನ್ನು ನಂಬಿ ಪೂಜಿಸಿದರೆ ಯಾವುದೇ ಭಯವಿಲ್ಲ, ಸೋಲು ಇರುವುದಿಲ್ಲ. ನಿಮ್ಮ ಹಿತಕ್ಕಾಗಿ ಭಾನುವಾರ ಸಂಜೆ ಲಕ್ಷ್ಮೀಯನ್ನು ಆರಾಧಿಸಿದರೆ ತೃಪ್ತಿ ಆಗುವಷ್ಟು ಧನಲಾಭ ಆಗುವುದು.
ಮಿಥುನ: ಶುದ್ಧನಾಗಿ ಸ್ಪಟಿಕಮಣಿಯಂತೆ ಶೋಭಿಸುವ ಗುರು ಏಕಾದಶದಲ್ಲಿ ಇರುವುದು ನಿಮ್ಮ ಅಪ್ರತಿಮ ಸಾಧನೆಗಾಗಿ. 9ರ ಶನಿ ನಿಮ್ಮ ಏಳಿಗೆಗಾಗಿ ಎಂದು ಅರಿತು, ಕಳೆದುಹೋದ ದಿನಗಳನ್ನು ಚಿಂತಿಸದೆ ನಿಮ್ಮ ಆಗುಹೋಗುಗಳನ್ನು ತಿದ್ದಿಕೊಂಡು ನಡೆದರೆ ಈಗಲೂ ನೀವು ಸಾಧಕರಾಗಿ ಬದುಕಬಹುದು. ಮಹಾವಿಷ್ಣುವನ್ನು ಭಜಿಸಿ. ಮರೆಯದಿರಿ, ಭೀಮಬಲದಂಥ ಗುರುಬಲವೇ ನಿಮ್ಮನ್ನು ಕಾಪಾಡುತ್ತಿದೆ.
ಕಟಕ: ದೋಣಿ ಇಲ್ಲದೆ ನದಿಯನ್ನು ದಾಟಲು ಆಗುವುದಿಲ್ಲ. ದಯೆ ಎಂಬ ದೋಣಿಯಲ್ಲಿ ಹರಿನಾಮ ಎಂಬ ಕೋಲಿದ್ದರೆ ದೋಣಿಯನ್ನು ದಾಟಿಸಬಹುದು. ದಶಮದಲ್ಲಿ ಗುರು ಇದ್ದರೂ, ವಿಧಿವತ್ತಾಗಿ ಗುರುಗಳನ್ನು ಪೂಜಿಸಿ. ಗುರುಗಳಲ್ಲಿ ದೃಢವಾದ ನಂಬಿಕೆ ಇರಿಸಿದರೆ ಕಷ್ಟನಷ್ಟದಿಂದ ಪಾರಾಗಬಹುದು. ಶರೀರಕ್ಕೆ ಆಗುವ ವೈಪರೀತ್ಯ ತಡೆಗಟ್ಟಬಹುದು. ಶನಿಯ ಸಂಕಟದಿಂದ ಪಾರಾಗಲು ಕೃಷ್ಣ ಅಷ್ಟೋತ್ತರವನ್ನು ನಿತ್ಯವೂ ಪಠಿಸಿ.
ಸಿಂಹ: ದೀಪಾವಳಿಯು ದೀಪದ ಸಂಭ್ರಮ. ಸಂಭ್ರಮ ಎಂಬ ಪದಕ್ಕೆ ಸರಿಯಾದ ಅರ್ಥ ದೇವರು ಎಲ್ಲ ಶುಭವನ್ನು ಕೊಟ್ಟು ಜನಾನುರಾಗಿಯಾಗಿ ಮಾಡುತ್ತಾನೆ. 9ರ ಗುರು ನಿಮ್ಮ ಭವಿಷ್ಯ ನಿರ್ಧಾರ ಮಾಡಲಿದ್ದಾರೆ. ಸಪ್ತಮ ಶನಿಗೆ ಪ್ರಾರ್ಥನೆ ಬೇಕೆ ಹೊರತು ಭಯ ಪಡುವ ಅವಶ್ಯಕತೆ ಇಲ್ಲ. ಜೀವನದ ಬೆಳಕಿಗೆ ಸೂರ್ಯನನ್ನು ಪ್ರಾರ್ಥಿಸಿ. ಮಹಾಮಹಿಮನಾದ ದತ್ತಾತ್ರೇಯನನ್ನು ಪೂಜಿಸಿ. ಶುಭಕ್ಕೆ, ನಿಮ್ಮ ಏಳಿಗೆಗೆ ಯಾವ ಅಡ್ಡಿ-ಆತಂಕ ಬರುವುದಿಲ್ಲ.
ಕನ್ಯಾ: ಮನುಷ್ಯನಿಗೆ ದುಡ್ಡಿದ್ದರೆ ಎಲ್ಲವೂ ದೊರಕುವುದು, ಏನು ಬೇಕಾದರೂ ಮಾಡಬಹುದು ಎಂಬ ಸಂಕೋಲೆಯಿಂದ ಆಚೆ ಬಂದು ಅಷ್ಟಮ ಗುರುವಿಗೆ, ಗುರುಪಾದಕ್ಕೆ ನಮಸ್ಕಾರ ಮಾಡಿ. ನಿರಂತರವಾಗಿ ನಿಮ್ಮ ಕುಲದೇವರ ಸಹಿತ ಗುರು ದತ್ತಾತ್ರೇಯನನ್ನು ಪೂಜಿಸಿ, ಭಜಿಸಿ. ಶುಭವನ್ನು ಕಂಡುಕೊಳ್ಳಬಹುದು.
ತುಲಾ: ಸಪ್ತಮ ಗುರು ಸಂತೋಷವನ್ನು ನೀಡುತ್ತಾನೆ. ಬಲಿಷ್ಠನಾದ ಗುರುವಿನ ಪ್ರಭಾವ ತೋರಿ ಕೀರ್ತಿಪತಾಕೆ ಹಾರಿಸಿ, ನಿಮ್ಮ ದೈವಭಕ್ತಿ ಪರೀಕ್ಷಿಸಿ ಶುಭದಾಯಕ ಫಲ ಕೊಟ್ಟಿದ್ದಾನೆ. ಇದೇ ರೀತಿ ಮುಂದುವರಿಯಬೇಕಾದರೆ ಗುರುವಿನ ಪೂಜೆ, ಅವರಲ್ಲಿ ವಿಶ್ವಾಸ ಹಾಗೂ ಲಲಿತಾ ಪರಮೇಶ್ವರಿ ಅನುಗ್ರಹ ಬೇಕಾಗುತ್ತದೆ. ಏನೇ ಬರಲಿ, ಶುಭ ಇರಲಿ. ಜಯದ ಪತಾಕೆಯಿಂದ ನಿಮ್ಮ ಜೀವನ ಮುಂದುವರಿಯಲಿ.
ವೃಶ್ಚಿಕ: ಬಾಲ್ಯದಲ್ಲಿ ಮಕ್ಕಳು ಏನನ್ನು ಪಡೆಯಬೇಕಾದರೂ ಚೀರಾಟ, ಹೋರಾಟವನ್ನು ಮಾಡಿ, ಕಣ್ಣಲ್ಲಿ ನೀರು ಹಾಕಿ ಪಡೆದುಕೊಳ್ಳುತ್ತಾರೆ. ಯಾರು ಏನೇ ಹೇಳಿದರೂ ಅವರಿಗೆ ಅರ್ಥ ಆಗುವುದಿಲ್ಲ. ನೀವು ನಿಮ್ಮ ಧನಬಲ, ಗುರುಬಲಕ್ಕೆ ಮಗುವಂತೆ ಪರಮಾತ್ಮನಲ್ಲಿ ಪ್ರಾರ್ಥಿಸಿದರೆ ಏನು ಬೇಕಾದರೂ ಕೊಡುತ್ತಾನೆ, ಕೊಟ್ಟು ಹರಸುತ್ತಾನೆ. ಕಷ್ಟಪರಂಪರೆಗಳನ್ನು ನಿವಾರಿಸಿ ನಿಮ್ಮನ್ನು ಸಮುದ್ರದಿಂದ ದಾಟಿಸುತ್ತಾನೆ. ಶುಭವನ್ನು, ಧನಲಾಭ ಕೊಡಲು ಸುಬ್ರಮಣ್ಯ ದೇವರ ಸಹಾಯ ದೊರೆಯುತ್ತದೆ. ಗುರುಬಲಕ್ಕಾಗಿ ಗುರುಚರಿತ್ರೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ. ದೀಪಾವಳಿಯಿಂದ ಆಚೆಗೆ ಗೆಲುವು ಶುಭವಾಗುವುದು.
ಧನು: ಈ ರಾಶಿಯಲ್ಲಿ ಹುಟ್ಟಿದ ಮನುಷ್ಯನು ಧನುರ್ಧಾರಿಯಾದ ಶ್ರೀರಾಮನನ್ನು ಪೂಜಿಸಬೇಕು. ಶ್ರೀರಾಮನು ಕಾರ್ತಿಕ ಮಾಸದ ಶುದ್ಧ ಪಂಚಮಿಯಂದು ಲಂಕೆಯಲ್ಲಿ ರಾವಣನ ಆಳ್ವಿಕೆ ಅಂತ್ಯಗೊಳಿಸಿ ದೈವಭಕ್ತನಾದ ವಿಭೀಷಣನನ್ನು ಕೂರಿಸಿದ ಎಂಬುದನ್ನು ನೆನಪಿಸಿಕೊಳ್ಳಿ. ಕೇವಲ ಬಾಣಬಿಲ್ಲುಗಳಿಂದ ರಾಕ್ಷಸ ಸಮೂಹವನ್ನು ನಾಶ ಮಾಡಿ, ಧನಸ್ಸನ್ನು ಮುರಿದು, ಸೀತೆಯನ್ನು ಪಡೆದು ಈ ಶ್ರೇಷ್ಠವಾದ ಸಾಂಪ್ರದಾಯಿಕ ಹಿಂದೂ ದೇಶ ನಿರ್ಮಾಣ ಮಾಡಿದ್ದಾನೆ. ಸಮವಾಗಿ ಗುರು, ಶನಿ ಬಲ ಇದ್ದು, ಕಾಲವು ನಿಮ್ಮಂತೆ ನಡೆದು ನಿಮಗೆ ಬೇಕಾದ ಎಲ್ಲವೂ ಸಿಕ್ಕಿ ಸಂತೋಷ ನೀಡುತ್ತದೆ. ದುರ್ಗಾಸಹಿತ ಶ್ರೀರಾಮನನ್ನು ಪೂಜಿಸಿ, ಭಜಿಸಿ.
ಮಕರ: ಮಕರ ರಾಶಿಯಲ್ಲಿ ಅಂತ್ಯದ ಶನಿಸಂಚಾರ ನಡೆದಿದ್ದು, ಆದರೂ ದೇವರು ದೈವಭಕ್ತಿಗೆ ಮೆಚ್ಚುತ್ತಾನೆ. ಯಾವುದೇ ಭೀತಿಗೆ ಒಳಗಾಗಬೇಡಿ, ಪೂರ್ವಪುಣ್ಯದ ಸತ್ಪಲಗಳನ್ನು ನೀಡುತ್ತಾನೆ. ಈ ಸಮಯದಲ್ಲಿ ನರಕ ಚತುರ್ದಶಿಯಿಂದ, ಪಾಡ್ಯದವರೆಗೂ ಶ್ರೀಕೃಷ್ಣನನ್ನು ಪೂಜಿಸಿ ಬೇಕಾದ್ದನ್ನು ಪಡೆಯಬಹುದು.
ಕುಂಭ: ಕಲಿಕಾಲನು ಯಾರ ಸಂಕೋಲೆಗೂ ಒಳಗಾಗದವನು. ತನ್ನ ಮಾಯೆಯಿಂದ ಶುಭಾಶುಭ ಫಲ ನೀಡುವುದರಲ್ಲಿ ಸಂದೇಹ ಇಲ್ಲ. ದ್ವಾದಶ ಶನಿ ನಿಮಗೆ ಒಳ್ಳೆಯ ಪಾಠವನ್ನು ನೀಡುತ್ತಾನೆ. ಮೀನ ರಾಶಿ ದಾಟಿದ ಮೇಲೆ ಒಳ್ಳೆಯ ಕಾಲ ನಡೆಯುತ್ತದೆ. ಜನ್ಮ ಶನಿಯಲ್ಲಿ ವ್ಯಸನ ಬಾರದಂತೆ ನೋಡಿಕೊಂಡು, ವಿಷ್ಣು ಸಹ್ರನಾಮವನ್ನು ಪಾರಾಯಣ ಮಾಡಿ. ಸುಖವನ್ನು, ಇಚ್ಛಿತ ಫಲವನ್ನು ಪಡೆಯಬಹುದು.
ಮೀನ: ಗುರು ದ್ವಿತೀಯದಲ್ಲಿ ಇದ್ದು ಯಾರ ಭೀತಿ, ಬಲವಂತಕ್ಕೆ ಒಳಗಾಗದೆ ನಿಮ್ಮನ್ನು ರಕ್ಷಿಸುವುದು ಗುರು ಒಬ್ಬನೇ. ಈ ಕಾಲವನ್ನು ಸಮತೋಲನದಲ್ಲಿ ಇರಿಸಿಕೊಳ್ಳಿ. ದುರ್ಬುದ್ಧಿಯನ್ನು ದೂರ ಮಾಡಿ ಗುರುಮಾತನ್ನು ಲಕ್ಷ ್ಯ್ಕೆ ತೆಗೆದುಕೊಂಡು ನೀವು ನಡೆದದ್ದೇ ಆದರೆ ಶನಿ, ರಾಹು ಯಾವ ಗ್ರಹಗಳೂ ಅಶುಭ ಉಂಟು ಮಾಡಲು ಸಾಧ್ಯ ಆಗುವುದಿಲ್ಲ. ಗುರುಚರಿತ್ರೆಯ 43ನೇ ಅಧ್ಯಾಯವನ್ನು ಪಾರಾಯಣ ಮಾಡಿ. ವಿಷ್ಣು ಅಷ್ಟೋತ್ತರವನ್ನು ಪಾರಾಯಣ ಮಾಡಿ. ಗೋವಿಂದನ ಧ್ಯಾನದಲ್ಲಿ ತೊಡಗಿಸಿಕೊಂಡರೆ ಸ್ಥಿರ ಮನಸ್ಸು, ಒಳ್ಳೆಯ ಬುದ್ಧಿ ಉಂಟಾಗಿ ಕಾಲನು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ.