

ಕಠೋಪನಿಷತ್ತಿನ ಹಿನ್ನೆಲೆ: ‘‘ತೇಜಸಾಂ ಹಿ ನ ವಯಃ ಸಮೀಕ್ಷ ್ಯೇ’’ ಎಂದು ಕಾಳಿದಾಸನು ರಘುವಂಶದಲ್ಲಿ ಹೇಳಿರುವಂತೆ, ‘‘ತೇಜಸ್ಸಿ’’ಗೆ ವಯಸ್ಸಿನ ಪರಿಗಣನೆ ಅವಶ್ಯವಿಲ್ಲ. ಈ ಕುಮಾರನಿಗೆ ಪ್ರಾಯಶಃ ಆಗ ತಾನೇ ಉಪನಯನವಾಗಿ, ಇನ್ನೂ ಅಧ್ಯಯನ ಆರಂಭಿಸಿದ್ದನೆಂದೋ ಅಥವಾ ಉಪನಯನದ ವಯಸ್ಸನ್ನು ಮುಟ್ಟಿದ್ದನೆಂದೋ ಇಟ್ಟುಕೊಳ್ಳೋಣ. ಚಿಕ್ಕ ವಯಸ್ಸಿನಲ್ಲೇ ಅತ್ಯಾಶ್ಚರ್ಯಕರವಾದ ಮೇಧಾವೀ, ತೇಜಸ್ವೀ, ಶ್ರದ್ಧಾಸಂಪನ್ನ ಎಂಬುದು ಅವನ ಮಾತುಗಳಿಂದಲೇ ತಿಳಿದುಬರುತ್ತದೆ.
ಅನ್ನದಾನ ಒಳ್ಳೆಯ ಕರ್ಮವೇ. ವೇದೋಕ್ತವೂ, ಬ್ರಹ್ಮಸಾಧಕವೂ ಹೌದು. ‘‘ತಮೇತಂ ವೇದಾನುಚಚನೇನ ಬ್ರಾಹ್ಮಣಾ ವಿವಿದಿಷಂತಿ. ಯಜ್ಞೇನ, ದಾನೇನ, ತಪಸಾ ಅನಾಶಕೇನ’’ (ಬೃ.4-4-22) ಎಂದು ಶ್ರುತಿಯೇ ದಾನವನ್ನು ಪರಮಾತ್ಮನನ್ನು ಕಾಣುವ ಸಾಧನವನ್ನಾಗಿ ವರ್ಣಿಸಿದೆ. ಆದರೆ ಇಂಥ ಕಾರ್ಯ, ಕಾಮ್ಯಕರ್ಮರೂಪದಲ್ಲಿ ಆಗಬಾರದು ಅಷ್ಟೆ. ಅಂದರೆ ಕೀರ್ತಿಯ ಆಸೆಗಾಗಿ ಆಗಬಾರದು. ದೇವರ ಪ್ರೀತಿಗಾಗಿ ಆಗತಕ್ಕದ್ದು. ಜೀವನದುದ್ದಕ್ಕೂ ಸತ್ಕಾರ್ಯಗಳನ್ನೇ ನಡೆಸಿಕೊಂಡು ಬಂದು, ಬಹುಜನರ ಪ್ರಶಂಸೆಗೂ ಆದರಕ್ಕೂ ಪಾತ್ರನಾದ ಒಬ್ಬ ಮಹಾನುಭಾವನಿಗೆ, ಒಂದಾನೊಂದು ದಿನ ‘‘ನಾನು ದೊಡ್ಡವನು’’ ಎಂಬ ಅಹಂಕಾರ ಬರುವುದು ಅಸಂಭವವೇನಲ್ಲ. ಋಷಿಯಾದರೇನು? ಮನುಷ್ಯನಲ್ಲವೇ? ಹೀಗೆ ವಾಜಶ್ರವಸ್ಸಿಗೆ ಅಹಂಕಾರ ಬಂದಿತೆಂದು ಉಪನಿಷತ್ತು ಸೂಚಿಸುತ್ತದೆ. ‘‘ವಿಶ್ವಜಿತ್’’ ಎಂಬ ಮಹಾಯಾಗವನ್ನು ಮಾಡಲು ಇಚ್ಛಿಸಿದನಂತೆ. ಯಾಗಗಳು ಬ್ರಹ್ಮಾರಾಧನಾ ಸಾಧನಗಳು. ಬ್ರಹ್ಮಪ್ರೇರಣೆಯಿಂದ, ‘‘ಬ್ರಹ್ಮಾರ್ಪಣಂ’’ ಇತ್ಯಾದಿ ಗೀತೆಯಲ್ಲಿ ಹೇಳಿದಂತೆ ನಡೆಸಲ್ಪಡಬೇಕಾಗುವುವು. ಈ ಋಷಿಯಾದರೋ ಫಲಕಾಮಿಯಾಗಿ (ನಿಷ್ಕಾಮಿಯಾಗಿ ಅಲ್ಲ,) ಅಹಂಕಾರ ಸಂಕಲ್ಪದಿಂದ ಯಜ್ಞವನ್ನು ಆರಂಭಿಸಿದನು ಎಂದು, ‘‘ಉಶನ್’’ ಎಂಬ ಶಬ್ದದಿಂದ ಉಪನಿಷತ್ತಿನಲ್ಲಿ ಸೂಚಿಸಿದೆ. ಅಂದರೆ ಅವನು ಯಜ್ಞ ಮಾಡಿದ್ದೇ ತಪ್ಪಲ್ಲ. ಅದರಲ್ಲಿ ದೇವರನ್ನು ಮರೆತದ್ದು ತಪ್ಪಾಯಿತು. ಇದಕ್ಕಾಗಿಯೇ ಮುಂಡಕ ಶ್ರುತಿಯಲ್ಲಿ ‘‘ಪ್ಲವಾಹ್ಯೇತೇ ಅದೃಢಾಃ ಯಜ್ಞರೂಪಾಃ’’ ಎಂದು ಹೇಳಿದೆ.
ಈ ವಿಶ್ವಜಿದ್ಯಾಗದಲ್ಲಿ, ‘‘ಯಜಮಾನನು’’ ತನ್ನ ಸರ್ವಸ್ವವನ್ನೂ (ಸರ್ವವೇದಸಂ) ದಾನ ಮಾಡಿಬಿಡಬೇಕೆಂಬ ವಿಧಿಯಿದೆ. ಕೀರ್ತಿಕಾಮಿಯಾಗಿ ಯಾಗ ಆರಂಭಿಸಿದವನಿಗೆ, ತನ್ನ ಸರ್ವಸ್ವವನ್ನೂ ದಾನಮಾಡುವ ಆಸೆ, ಶ್ರದ್ಧೆ ಇಲ್ಲದೆ, ಏನೋ ನಾಲ್ಕು ನಿರುಪಯುಕ್ತ ವಸ್ತುಗಳನ್ನು ಮಾತ್ರ ದಾನ ಮಾಡಿ, ‘‘ಆಯಿತು’’ ಎಂದು ಮುಗಿಸಿ ‘‘ದೊಡ್ಡ’’ವನಾಗುವ ಹಂಬಲವಿರುವುದು ಸಹಜ. ಅಥವಾ ಸರ್ವಸ್ವದಾನಕ್ಕೆ ಯೋಗ್ಯತೆಯೇ ಇಲ್ಲದೆ, ಕಡುಬಡವನಾಗಿದ್ದು, ಹೇಗಾದರೂ, ತನ್ನ ಯೋಗ್ಯತೆಗೆ ಮೀರಿದ ‘‘ವಿಶ್ವಜಿತ್’’ ಯಾಗವನ್ನು ಮಾಡಿ ಗೆದ್ದೆನೆಂದೆನಿಸಿಕೊಳ್ಳಬೇಕೆಂಬ ಹಂಬಲದಿಂದ, ಅಲ್ಪಬೆಲೆಗೆ, ನಿರುಪಯುಕ್ತ ಪದಾರ್ಥಗಳನ್ನು ಕೊಂಡುತಂದು ದಾನ ಮಾಡಲು ಯತ್ನಿಸುವುದೂ ಸಹಜ. ಎರಡೂ ತಪ್ಪೇ. ಪರಮಾತ್ಮಸಾಧನೆಗೆ ಇದೇ ಯಾಗ ಆಗಬೇಕೆಂಬ ನಿಬಂಧನೆಯಿಲ್ಲ. ‘‘ಪತ್ರಂ, ಪುಷ್ಪಂ’’ ಎಂಬಂತೆ ಖರ್ಚಿಲ್ಲದ ಯಾಗವಾದರೂ ಭಗವತ್ಪ್ರೀತಿಯಿಂದ ನಡೆಸಿದರೆ ಸಾಕು.
(ಲೇಖಕರá- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)