ಕಗ್ಗದ ಬೆಳಕು: ಇಹಲೋಕ ಮತ್ತು ಪರಲೋಕ

Kaggada Belaku vvani
Published on

ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ |

ತೊರೆದಾಯಸಂಗೊಳ್ಳೆ ದೊರೆವ ಫಲವೇನು? ||

ಸುರಧನುವಿಗೇಣಿಯಿಡಹೊರಟು ನಿನ್ನಂಗಳದ |

ಕಿರಿ ಹೂವ ಮರೆಯುವೆಯ - ಮಂಕುತಿಮ್ಮ ||

‘ಪರಲೋಕದ ಮೇಲೆ ಕಣ್ಣನ್ನು ನೆಟ್ಟು ಭೂಮಿಯನ್ನು ನಿಕೃಷ್ಟವಾದುದು ಎಂದು ಹೇಳುತ್ತ, ಅದನ್ನು ತೊರೆದು ಆಯಾಸಗೊಂಡರೆ ಬಂದ ಲಾಭವಾದರೂ ಏನು? ಕಾಮನಬಿಲ್ಲಿಗೆ ಏಣಿ ಇಡಲು ಹೊರಟು, ಅಂಗಣದಲ್ಲಿರುವ ಪುಟ್ಟ ಹೂವನ್ನು ಮರೆಯುತ್ತೀಯೇನು?’ ಎಂದು ಈ ಕಗ್ಗ ಪ್ರಶ್ನಿಸುತ್ತದೆ.

ಪ್ರಯತ್ನಪೂರ್ವಕವಾಗಿಯಾದರೂ ವಿರಕ್ತಿಯನ್ನು ರೂಢಿಸಿಕೊಳ್ಳಬೇಕು ಎಂಬ ಧೋರಣೆ ಸಮಾಜದಲ್ಲಿದೆ. ಹಾಗಾಗಿಯೇ ಪದೇಪದೆ ವೈರಾಗ್ಯದ ಮಾತುಗಳನ್ನಾಡುವುದು, ನಿರಾಸಕ್ತರಂತೆ ವರ್ತಿಸುವುದು ಸಜ್ಜನಿಕೆ ಎಂದು ಭಾವಿಸಲಾಗುತ್ತದೆ. ‘ಬಾಳೆಂಬುದು ನೀರ್ಗಳ್ಳೆ, ಎಲ್ಲವೂ ವಿಧಿಯ ಆಟ, ಕರ್ಮದ ಓಟ. ಸಂಪತ್ತು, ಅಧಿಕಾರಗಳು ಕ್ಷಣಿಕ. ಸಾವಿನ ಬಳಿಕದ ಪರಲೋಕವೇ ಅತ್ಯಂತ ಶ್ರೇಷ್ಠ’ ಎಂಬಂಥ ಅಭಿಪ್ರಾಯಗಳು ಪ್ರಚಲಿತದಲ್ಲಿವೆ. ಜೀವಿತವನ್ನು ನಿಕೃಷ್ಟವೆಂದು ಪ್ರತಿಪಾದಿಸುವುದಷ್ಟೇ ಅಲ್ಲ, ಪರಲೋಕದಲ್ಲಿ ಸದ್ಗತಿ ಪಡೆಯಲು ಭೂಮಿಯ ಬದುಕು ತೊಡಕೆಂದೇ ಭಾವಿಸಲಾಗಿದೆ. ಈ ದುಃಖಸಮುದ್ರದಲ್ಲಿ ಮುಳುಗೇಳುವುದರಿಂದ ತಪ್ಪಿಸಿಕೊಳ್ಳಲು ಆರೋಗ್ಯವನ್ನೂ ಗಮನಿಸದೆ ದೇಹವನ್ನು ಬಡವಾಗಿಸುವ ಆಚರಣೆಗಳನ್ನು ಮಾಡಬೇಕೆನ್ನುವವರು, ಉಪವಾಸ, ನಾಮಸ್ಮರಣೆ, ಆಧ್ಯಾತ್ಮಿಕ ಚಿಂತನೆಗಳಲ್ಲೇ ದಿನವನ್ನು ಕಳೆದು ಆಯಾಸಗೊಳ್ಳುವವರು ಹಲವರು. ಇದು ಅಗ್ಗದ ವೈರಾಗ್ಯ, ಹುರುಳಿಲ್ಲದ ನಂಬಿಕೆ.

ಕಾಮನಬಿಲ್ಲು ನಿಸರ್ಗದ ಬಹು ದೊಡ್ಡ ವಿಸ್ಮಯ. ಆದರೆ ಅದನ್ನು ಹಿಡಿಯಬೇಕೆಂದು ಆಗಸಕ್ಕೆ ಏಣಿ ಇಟ್ಟು ಹತ್ತಲು ಹವಣಿಸುವುದು ಮೂರ್ಖತನವಲ್ಲವೇ? ಕ್ಷಣಹೊತ್ತು ಆಕಾಶದಲ್ಲಿ ರಾರಾಜಿಸಿ, ಮರೆಯಾಗುವ ಕಾಮನಬಿಲ್ಲಿನ ಚೆಲುವಿಕೆಗೆ ಮಾರುಹೋಗಿ ಅದನ್ನು ಪಡೆಯಲು ಯತ್ನಿಸುವ ಮನಸ್ಸು ಅಂಗಳದ ತುದಿಯಲ್ಲಿ ಕಾಮನಬಿಲ್ಲಿನಂತೆಯೇ ವರ್ಣರಂಜಿತವಾಗಿರುವ ಪುಟ್ಟ ಹೂವನ್ನು ಮರೆಯುತ್ತದೆ. ಮಳೆಬಿಲ್ಲಾದರೋ ಗಳಿಗೆ ತೋರಿಕೆ ಅಷ್ಟೇ. ಆದರೆ ಮನೆಯಂಗಳದಲ್ಲೇ ಅರಳಿ ನಗುವ ಹೂವು ಹಾಗಲ್ಲ. ಅರಳಿ ಸೌರಭವನ್ನು ಸೂಸುತ್ತ ಭ್ರಮರ-ಕೀಟಗಳಿಗೆ ಸವಿಯನ್ನಿತ್ತು, ಪೂರ್ತಿದಿನ ಲವಲವಿಕೆಯಿಂದ ಇದ್ದು, ಸೂರ್ಯನು ಮರೆಯಾಗುತ್ತಿದ್ದಂತೆ ಬಾಡಿಹೋಗುತ್ತದೆ. ಆದರೂ ಕಾಯಾಗಿ, ಹಣ್ಣಾಗಿ ವೃಕ್ಷವೊಂದರ ಹುಟ್ಟಿಗೆ ಕಾರಣವಾಗುತ್ತದೆ. ಹೂವಿನ ಬದುಕು ಒಂದು ದಿನದ್ದೇ ಆದರೂ ಅದು ಗೋಳಿಡುವುದಿಲ್ಲ. ಈ ಬದುಕು ವ್ಯರ್ಥವೆಂದು ಅರಳಿ, ಪರಿಮಳಿಸದೆ ಇರುವುದಿಲ್ಲ.

ನವಿರು ಹೂವು ಮನುಜ ಪ್ರಪಂಚಕ್ಕೆ ಆದರ್ಶವಾಗಬೇಕು. ನಶ್ವರ ಜೀವನವೆಂದು ಗೋಳಿಡುತ್ತ, ಅಮೂಲ್ಯ ಜನ್ಮವನ್ನು ಹಾಳುಗೆಡಹುವುದು ತಪ್ಪು. ಭಕ್ತಿ ಎಂದರೆ ಎಲ್ಲವನ್ನೂ ನಿರಾಕರಿಸಿ, ಯಾವ ಕೆಲಸವನ್ನೂ ಮಾಡದೆ ದೇವರ ಧ್ಯಾನ-ಭಜನೆಗಳಲ್ಲಿ ಕಳೆದುಹೋಗುವುದಲ್ಲ. ಲೋಕಹಿತಕ್ಕಾಗಿ ನಿಸ್ವಾರ್ಥ ಬುದ್ಧಿಯಿಂದ, ನಿರ್ಮಮಭಾವದಿಂದ ಶ್ರಮಿಸಬೇಕು, ತಾನು ಮಾಡುವ ಸತ್ಕಾರ್ಯಗಳೆಲ್ಲ ದೇವರ ಸೇವೆಯೆಂದು ನಂಬಿ ನಡೆಯಬೇಕು. ಇದೇ ನಿಜಭಕ್ತಿ. ಜೀವನದ ಹೋರಾಟದಲ್ಲಿ ಎದುರಾಗುವ ಪ್ರತಿಕೂಲ ಸಂದರ್ಭಗಳನ್ನು ವಿವೇಕದಿಂದ ಎದುರಿಸುತ್ತ, ಪ್ರಯತ್ನದಿಂದ ಜೀವೋತ್ಕರ್ಷಕ್ಕೆ ಪ್ರಯತ್ನಿಸುವುದೇ ನಿಜವಾದ ವಿರಕ್ತಿ. ತನ್ನ ವೈಯಕ್ತಿಕ ಸುಖಕ್ಕಾಗಿ ಯಾವುದನ್ನೂ ಅಪೇಕ್ಷಿಸದೆ, ಸಮಾಜದ ಒಳಿತಿಗಾಗಿ ಯತ್ನಿಸುವುದು, ಬದುಕಿನ ಕರ್ತವ್ಯಗಳಿಂದ ನುಣುಚಿಕೊಳ್ಳದೆ, ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಇಹದ ಬಾಳುವೆಯನ್ನು ದುಡಿಮೆಯ ಮೂಲಕ ಸುಂದರಗೊಳಿಸಿಕೊಂಡರಷ್ಟೇ ಪರಲೋಕದ ಮೆಟ್ಟಿಲೇರಲು ಅರ್ಹರಾಗುತ್ತೇವೆ. ಆತ್ಮೋನ್ನತಿಯನ್ನು ಪಡೆಯಲು ಜೀವನವೆಂಬ ಪರೀಕ್ಷೆಯನ್ನು ಉತ್ಸಾಹದಿಂದ ಎದುರಿಸಬೇಕು. ತುಚ್ಛವೆಂದು ನಡೆವ ದಾರಿಯನ್ನು ನಿರಾಕರಿಸಿದರೆ ಗಮ್ಯವನ್ನು ಸೇರುವುದಾದರೂ ಹೇಗೆ? ಹಾಗಾಗಿ ವಿವೇಕದಿಂದ ಭಕ್ತಿ-ವಿರಕ್ತಿಗಳು ಮೂಡಬೇಕು, ಕುರುಡುನಂಬಿಕೆಗಳನ್ನು ತ್ಯಜಿಸಬೇಕು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net