ವಿಧಿಲೀಲೆ ವಿಕಟವಿನೋದ

kaggada belaku 12 feb 20
Published on

ಒಟ್ಟಿನಲಿ ತತ್ತ್ವವಿದು; ವಿಕಟರಸಿಕನೊ ಧಾತ |

ತೊಟ್ಟಿಲನು ತೂಗುವನು, ಮಗುವ ಜಿಗುಟುವನು ||

ಸಿಟ್ಟನ್ ಒಡವುಟ್ಟುಗಳೊಳಾಗಿಪನು, ಸೋಲಿಪನು |

ತುತ್ತು ವಿಕಟಿಗೆ ನಾವು - ಮಂಕುತಿಮ್ಮ ||

‘ಒಟ್ಟಿನಲ್ಲಿ ತತ್ತ್ವ ಇದು. ಧಾತನು ವಿಕಟ ರಸಿಕ. ತೊಟ್ಟಿಲನ್ನು ತೂಗುವವನೂ ಅವನೇ, ಮಗುವನ್ನು ಜಿಗುಟುವವನೂ ಅವನೇ. ಆತ ಒಡಹುಟ್ಟುಗಳ ನಡುವೆ ಸಿಟ್ಟನ್ನು ಮೂಡಿಸಿ ಸೋಲಿಸುತ್ತಾನೆ. ನಾವು ಆ ವಿಕಟತನಕ್ಕೆ ತುತ್ತಾಗಿದ್ದೇವೆ’ ಎನ್ನುತ್ತದೆ ಈ ಕಗ್ಗ.

ಬದುಕಿನ ಗತಿ ವಿಚಿತ್ರವಾಗಿರುತ್ತದೆ. ಊಹಿಸದ ಆಘಾತಗಳು, ಮನಸ್ಸನ್ನು ಮುದುಡಿಸುವಂತಹ ನೋವುಗಳು ಮತ್ತೆಮತ್ತೆ ಅಪ್ಪಳಿಸುತ್ತವೆ. ಜೀವನಮೌಲ್ಯಗಳನ್ನು ಹೊಂದಿದ್ದರೂ, ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೂ ಬದುಕು ಹಳಿತಪ್ಪಿದಂತಾಗುತ್ತದೆ. ಪರಾಮಶಿಸಿ ತೆಗೆದುಕೊಂಡ ನಿರ್ಣಯಗಳು ನಗೆಗೀಡಾಗುತ್ತವೆ, ನಿಲುವುಗಳು ಸೋಲುತ್ತವೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಯಶಸ್ಸು ಒಲಿದು ತಿರುಕನ ಕನಸನ್ನು ನೆನಪಿಸುತ್ತದೆ. ಇದು ಆಶ್ಚರ್ಯ ಮತ್ತು ಬಗೆಹರಿಯದ ರಹಸ್ಯ.

ನಮ್ಮದೇ ಜೀವಿತವು ಯಾಕೆ ಹೀಗೆ ಒಗಟಾಗಿ ಕಾಡುತ್ತದೆ? ಒಳ್ಳೆಯತನಕ್ಕೆ ನೆಲೆ ಇಲ್ಲ ಎಂಬ ನಿರಾಶೆ ತುಂಬಿ, ಆದರ್ಶಗಳನ್ನು ಪೊಳ್ಳಾಗಿಸುತ್ತದೆ ಯಾಕೆ? ಯಾಕೆಂದರೆ ಬದುಕುವವರು ನಾವೇ ಆಗಿದ್ದರೂ ಬದುಕಿನ ಕ್ಷಣಗಳನ್ನು ಸಂಯೋಜಿಸುವವರು ನಾವಲ್ಲ. ವಿಧಾತನು ಜೀವರುಗಳ ಪಾಪ-ಪುಣ್ಯಗಳನ್ನಳೆದು ಅದಕ್ಕನುಗುಣವಾಗಿಯೇ ಬದುಕಿನ ಅವಕಾಶಗಳನ್ನು ನೀಡುತ್ತಾನೆ.

ಎಷ್ಟೋ ಸಲ ಸಂತೋಷದ ಶಿಖರಾಗ್ರದಲ್ಲಿ ಮೈಮರೆತು ವಿಹರಿಸುತ್ತಿರುತ್ತೇವೆ. ಜತೆಗೆ ಒಂದಿಷ್ಟು ಹಮ್ಮು ಸೇರಿಕೊಳ್ಳುತ್ತದೆ. ಆಗ ಇದ್ದಕ್ಕಿದ್ದಂತೆ ಊಹಿಸದ ತೆರದಲ್ಲಿ ಶೋಕದ ಪ್ರಪಾತಕ್ಕೆ ಉರುಳಿರುತ್ತೇವೆ. ಕಳೆದ ನಲಿವಿನ ಕ್ಷಣಗಳನ್ನು ನೆನೆದು, ಮಡಿಲಿಗೆ ಬಿದ್ದ ನೋವನ್ನು ಸಹಿಸಲಾಗದೆ ಕಣ್ಣೀರಾಗುವುದು, ತಳಮಳಿಸುವುದು ಸುಳ್ಳಲ್ಲ. ತೊಟ್ಟಿಲು ತೂಗಿ ಜೋಗುಳ ಹಾಡಿ ಮಗುವು ನಿಶ್ಚಿಂತೆಯಿಂದ ನಿದ್ದೆ ಹೋಗುವಂತೆ ಮಾಡುವ ಕೈಗಳೇ, ಮಗುವಿನ ಮೈಮರೆತ ಸ್ಥಿತಿಯಲ್ಲಿ ಅದನ್ನು ಚಿವುಟಿ ನೋಯಿಸುತ್ತದೆ. ಸುಖ ನಿದ್ರೆಯನ್ನು ಕಳೆದುಕೊಂಡದ್ದಕ್ಕೆ, ಚಿವುಟಿದ ನೋವು ತಡೆಯಲಾಗದುದಕ್ಕೆ ಮಗು ಜೋರಾಗಿ ಅಳಬಹುದು. ಆಗ ಮತ್ತೆ ಸಮಾಧಾನ ಮಾಡಿ ನೋವು ಮರೆಯುವಂತೆ, ನಗುವು ಹರಡುವಂತೆ ಮಾಡಲಾಗುತ್ತದೆ. ವಿಕಟ ರಸಿಕನಾಗಿರುವ ವಿಧಿಯು ಜಗದ ಜೀವರುಗಳನ್ನು ಈ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾನೆ. ಸಂತೋಷದ ಹೊತ್ತಿನಲ್ಲಿ ಬಗೆ ಹರಿಸಲಾಗದ ಸಮಸ್ಯೆಗಳನ್ನು ತಂದಿಡುತ್ತಾನೆ. ಕಂಗೆಟ್ಟು ಸೋತಾಗ ಆಧರಿಸುತ್ತಾನೆ. ಹೀಗೆ ನೋವು-ನಲಿವುಗಳನ್ನು ದಯಪಾಲಿಸುತ್ತ ಜೀವವು ಮಾಗುವಂತೆ ವಿಕಟ ವಿಧಿಯು ವಿರಚಿಸುತ್ತಾನೆ.

ಒಂದೇ ತಾಯಿಯ ಮಕ್ಕಳು ಎಳವೆಯಲ್ಲಿ ಕೂಡಿ ಆಡಿರುತ್ತಾರೆ, ಹಂಚಿ ತಿಂದಿರುತ್ತಾರೆ. ಜಗಳ, ವೈಮನಸ್ಸುಗಳು ಮೂಡಿದ್ದರೂ ಅದು ಮುಂದುವರಿದಿರುವುದಿಲ್ಲ. ಅದೇ ಮಕ್ಕಳು ಬೆಳೆದಂತೆ ದಾಯಾದಿ ಮತ್ಸರ ಬಲಿಯುತ್ತದೆ. ಸಿಟ್ಟು-ಸೇಡುಗಳಿಂದ ಒಡಹುಟ್ಟಿದವರ ಸರ್ವನಾಶಕ್ಕೆ ಯತ್ನಿಸುವಷ್ಟು ಕ್ರೂರಿಗಳಾಗುತ್ತಾರೆ. ಹೀಗೆ ಬಾಂಧವ್ಯಗಳ ನಡುವೆ ಹೊಗೆ ಏಳುವಂತೆ ವಿಕಟ ವಿಧಿ ಬುದ್ಧಿಯನ್ನು ಕೆಡಿಸುತ್ತದೆ. ಈ ರೀತಿ ಜೀವರುಗಳೆಲ್ಲ ವಿಕಟ ವಿಧಿಗೆ ತುತ್ತು ಎಂದು ಜನತೆ ನುಡಿಯುವುದಿದೆ. ತಮ್ಮನ್ನು ಪರಾಮಶಿಸದೆ ಎಲ್ಲವೂ ವಿಧಾತನ ನಿರ್ಣಯ ಎಂದು ಕೈಚೆಲ್ಲುವುದು, ತಮ್ಮ ತಪ್ಪುಗಳನ್ನು ವಿಧಿಯ ತಲೆಗೆ ಕಟ್ಟುವುದು ನಡೆಯುತ್ತದೆ. ವಿಧಿಯ ನಿರ್ಣಯದಂತೆಯೇ ಜೀವಗತಿಯಾಗಿದ್ದರೂ, ಪ್ರತಿಯೊಬ್ಬನಿಗೂ ವಿಧಿ ವಿವೇಕವನ್ನೂ ವಿವೇಚನೆಯನ್ನೂ ನೀಡಿದ್ದಾನೆ. ಅದನ್ನು ಬಳಸಲಾರದಷ್ಟು ಅಹಂಕಾರವು ವಿವೇಕದ ಕಂಗಳನ್ನು ಕುರುಡಾಗಿಸಿರುತ್ತದೆ. ಬಾಳಿನುದ್ದಕ್ಕೂ ಬಗೆಬಗೆಯ ಪರೀಕ್ಷೆ ಗಳನ್ನು ಒಡ್ಡಿ ಪರೀಕ್ಷಿಸುವ ವಿಧಿಯು ಆತ್ಮಶಿಕ್ಷಣವನ್ನು ನೀಡಿ ಪರಿಶುದ್ಧಾತ್ಮ ರಾಗಲು ನೆರವಾಗುತ್ತಾನೆ. ಹಾಗಾಗಿ ವಿಧಿಯನ್ನು ದೂರುತ್ತಿರುವುದಲ್ಲ, ನಮ್ಮೊಳಗನ್ನು ಒರೆಗೆ ಹಚ್ಚುವ ಧೈರ್ಯ ಮಾಡಬೇಕು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net