ತೈಲ ತಂತ್ರ ಸೌದಿ V/s ಭಾರತ: ಉತ್ಪಾದನೆ ಹೆಚ್ಚಳಕ್ಕೆ ಒಪ್ಪದ ಒಪೆಕ್

Nation 3 Fuel and Rupee
Published on
  • ಸುದ್ದಿ ಸಮಗ್ರ

(ಕೋವಿಡ್ ಸಂಕಷ್ಟದ ಅವಧಿಯಲ್ಲಿ ಬೇಡಿಕೆ ಕಡಿಮೆಯಾಗಿದೆ ಎಂದು ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆ ತಗ್ಗಿಸಿದ್ದವು. ಕೆಲವು ದಿನಗಳ ಹಿಂದೆ ಒಪೆಕ್ ರಾಷ್ಟ್ರಗಳ ಸಭೆಗೆ ಮೊದಲು, ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವಂತೆ ಸೌದಿ ಅರೇಬಿಯಾಕ್ಕೆ ಭಾರತ ಮನವಿ ಮಾಡಿತ್ತು. ಆದರೆ, ಈ ಬೇಡಿಕೆಯನ್ನು ಅಪಹಾಸ್ಯ ಮಾಡಿದ ಸೌದಿಗೆ ಪಾಠ ಕಲಿಸಲು ಭಾರತ ಮುಂದಾಗಿದೆ. ಈ ವಿದ್ಯಮಾನದ ಕಿರು ಅವಲೋಕನ ಇಲ್ಲಿದೆ)

ಇಂಧನ ದರ, ವಿಶೇಷವಾಗಿ ಪೆಟ್ರೋಲ್ ಬೆಲೆ ಲೀಟರಿಗೆ -ಠಿ;100ರ ಆಸುಪಾಸಿನಲ್ಲಿದೆ. ಇದರ ಬಿಸಿ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೂ ತಟ್ಟಿದೆ. ಐದು ಪೆಟ್ರೋಲಿಯಂ ಉತ್ಪನ್ನಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಆದಾಯ ಮೂಲಗಳಲ್ಲಿ ಸೇರಿಸುವ ಕಾರಣ ತೆರಿಗೆ ಇಳಿಸಿ ಇಂಧನ ದರ ತಗ್ಗಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇನ್ನೊಂದೆಡೆ, ಇಂಧನವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ತರುವ ಪ್ರಸ್ತಾಪ ಇಲ್ಲ ಎಂದು ಕೂಡ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಜಾಗತಿಕ ವಾತಾವರಣ ಗಮನಿಸಿದ ಭಾರತ ಸರ್ಕಾರ, ಜಗತ್ತಿನ ತೈಲ ಬಳಕೆದಾರ ರಾಷ್ಟ್ರಗಳ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲು ಮುಂದಾಯಿತು. ಇದರಂತೆ, ಮಾರ್ಚ್ 4 ರಂದು ಒಪೆಕ್+ ರಾಷ್ಟ್ರಗಳ ಸಭೆಗೆ ಮೊದಲು, ತೈಲ ಉತ್ಪಾದನೆ ಪ್ರಮಾಣ ಹೆಚ್ಚಿಸುವಂತೆ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಮನವಿ ಮಾಡಿತು. ಅದಕ್ಕೆ, ‘ಕೋವಿಡ್ ಸಂಕಷ್ಟದ ಅವಧಿಯಲ್ಲಿ ಕಡಿಮೆ ದರಕ್ಕೆ ಶೇಖರಿಸಿಟ್ಟ ತೈಲವನ್ನು ಮೊದಲು ಬಳಸಿ’ ಎಂಬ ಸೌದಿ ಅರೇಬಿಯಾದ ಪ್ರತಿಕ್ರಿಯೆ ಚುಚ್ಚುವಂತೆ ಇತ್ತು. ಈ ಉದ್ಧಟತನಕ್ಕೆ ಭಾರತದ ಪ್ರತಿಕ್ರಿಯೆ ಭಿನ್ನ ರೀತಿಯಲ್ಲಿ ವ್ಯಕ್ತವಾಗಿದೆ. ಭಾರತಕ್ಕೆ ಕಚ್ಚಾ ತೈಲ ಪೂರೈಸುವ ರಾಷ್ಟ್ರಗಳ ಪಟ್ಟಿಯಲ್ಲಿ ಸೌದಿ ಟಾಪ್ ಎರಡರಲ್ಲೇ ಇತ್ತು. ಆದರೆ, ಇತ್ತೀಚಿನ ವರದಿ ಪ್ರಕಾರ, ಇದೇ ಮೊದಲ ಬಾರಿಗೆ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಅಮೆರಿಕ ಎರಡನೇ ಸ್ಥಾನಕ್ಕೆ ಬಂದಿದೆ. ಕಾಲಾನುಕ್ರಮದಲ್ಲಿ ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಪ್ರಮಾಣ ಕಡಿಮೆ ಮಾಡುತ್ತ ಬಂದ ಭಾರತ, ಅಮೆರಿಕದಿಂದ ಆಮದು ಪ್ರಮಾಣ ಹೆಚ್ಚಿಸಿರುವುದು ಇತ್ತೀಚಿನ ದತ್ತಾಂಶದಲ್ಲಿ ಕಂಡುಬಂದಿದೆ.

ಆಮದು ಹೊಡೆತ: ಕಚ್ಚಾ ತೈಲಕ್ಕಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಅವಲಂಬಿತವಾಗುವುದು ಅಪಾಯಕಾರಿ ಎಂಬ ಕಾರಣಕ್ಕೆ ಭಾರತ ಸರ್ಕಾರ ನಿಲುವನ್ನು ಬದಲಾಯಿಸಿದೆ. ಇಂಡಿಯನ್ ಆಯಿಲ್ ಕಾರ್ಪೆರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೆರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೆರೇಷನ್, ಎಂಆರ್​ಪಿಎಲ್​ಗಳು ಮೇ ತಿಂಗಳಲ್ಲಿ 1.08 ಕೋಟಿ ಬ್ಯಾರೆಲ್ ತೈಲ ಸಂಗ್ರಹಿಸಲು ಸಿದ್ಧತೆ ನಡೆಸಿವೆ. ಸರ್ಕಾರಿ ಸ್ವಾಮ್ಯದ ಈ ತೈಲ ಕಂಪನಿಗಳು ದೇಶದ ಪೆಟ್ರೋಲಿಯಂ ಕ್ಷೇತ್ರದಲ್ಲಿ ಶೇಕಡ 60 ಪಾಲು ಹೊಂದಿವೆ. ಅಂದರೆ, ದಿನಕ್ಕೆ ಸರಾಸರಿ 50 ಲಕ್ಷ ಬ್ಯಾರೆಲ್ ತೈಲವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಎಲ್ಲವೂ ಒಟ್ಟಾಗಿ ಸೌದಿ ಅರೇಬಿಯಾದಿಂದ ತಿಂಗಳಿಗೆ 1.47-1.48 ಕೋಟಿ ಬ್ಯಾರೆಲ್ ತೈಲ ಆಮದು ಮಾಡಿಕೊಳ್ಳುತ್ತವೆ. ಸರ್ಕಾರ ಈಗಾಗಲೇ ಮಧ್ಯಪ್ರಾಚ್ಯದ ತೈಲ ಆಮದು ಪ್ರಮಾಣ ಕಡಿಮೆ ಮಾಡಿದ್ದು, ಫೆಬ್ರವರಿ ತಿಂಗಳಲ್ಲಿ 22 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

2ನೇ ಸ್ಥಾನಕ್ಕೇರಿದ ಅಮೆರಿಕ

ಭಾರತಕ್ಕೆ ತೈಲ ಪೂರೈಸುವ ರಾಷ್ಟ್ರಗಳ ಪಟ್ಟಿಯಲ್ಲಿ ಫೆಬ್ರವರಿ ತಿಂಗಳ ಲೆಕ್ಕಾಚಾರ ಪ್ರಕಾರ ಸೌದಿ ಅರೇಬಿಯಾ ನಾಲ್ಕನೇ ಸ್ಥಾನಕ್ಕೆ ಕುಸಿದರೆ, ಅಮೆರಿಕ ಎರಡನೇ ಸ್ಥಾನಕ್ಕೇರಿದೆ. 2006ರ ಜನವರಿ ನಂತರದಲ್ಲಿ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ನಾಲ್ಕನೇ ಸ್ಥಾನಕ್ಕೆ ಹೋಗಿದೆ. 2018ರಲ್ಲಿ ಅಮೆರಿಕ ಟಾಪ್ 10 ತೈಲ ಪೂರೈಕೆ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಭಾರತ ಕೂಡ ಕಚ್ಚಾ ತೈಲಕ್ಕೆ ಅಮೆರಿಕವನ್ನು ಅವಲಂಬಿಸತೊಡಗಿದೆ.

3ನೇ ಅತಿದೊಡ್ಡ ಆಮದು ರಾಷ್ಟ್ರ ಭಾರತ

ಜಗತ್ತಿನಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತಕ್ಕೆ ಮೂರನೇ ಸ್ಥಾನ. ಭಾರತವು ತನ್ನ ತೈಲ ಬೇಡಿಕೆ ಈಡೇರಿಸಿಕೊಳ್ಳಲು ಶೇಕಡ 85 ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ದೇಶದಲ್ಲೂ ದರ ವ್ಯತ್ಯಾಸವಾಗುವ ವ್ಯವಸ್ಥೆಯನ್ನು ಜಾರಿಯಲ್ಲಿರಿಸಿದೆ. ಪ್ರತಿ ಬ್ಯಾರೆಲ್​ಗೆ ಫೆಬ್ರವರಿಯಲ್ಲಿ ಸರಾಸರಿ 61.22 ಡಾಲರ್, ಜನವರಿಯಲ್ಲಿ ಸರಾಸರಿ 54.79 ಡಾಲರ್ ಪಾವತಿಸಿ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಇದು 19.90 ಡಾಲರ್​ಗೆ ಇಳಿಕೆಯಾಗಿತ್ತು. ನಂತರ ಜೂನ್ ಮತ್ತು ಡಿಸೆಂಬರ್​ನಲ್ಲಿ ತೈಲದರ 40 ಮತ್ತು 49 ಡಾಲರ್ ನಡುವೆ ಇತ್ತು.

ಭಾರತದಲ್ಲಿ...ತೈಲೋತ್ಪಾದನೆ ಪ್ರಮಾಣ -10,16,317 ಬ್ಯಾರೆಲ್/ದಿನಕ್ಕೆ

ತೈಲ ಬಳಕೆ ಪ್ರಮಾಣ - 44,43,000 ಬ್ಯಾರೆಲ್/ದಿನಕ್ಕೆ

ತೈಲ ಆಮದು ಪ್ರಮಾಣ - 42,55,300 ಬ್ಯಾರೆಲ್/ದಿನಕ್ಕೆ

ತೈಲ ರಫ್ತು ಪ್ರಮಾಣ - 05 ಬ್ಯಾರೆಲ್/ದಿನಕ್ಕೆ (ಮಾಹಿತಿ -ವಲ್ಡ್​ಓಮೀಟರ್)

ಒಪೆಕ್ ಮುನ್ನೋಟ

ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್​ನ ಮಾಸಿಕ ವರದಿ ಪ್ರಕಾರ, ಭಾರತದಲ್ಲಿ 2021ರಲ್ಲಿ ತೈಲ ಬೇಡಿಕೆ ಶೇಕಡ 13.6 ಏರಿಕೆಯಾಗಿ ದಿನಕ್ಕೆ 49.9 ಲಕ್ಷ ಬ್ಯಾರೆಲ್ ತಲುಪಲಿದೆ ಎಂಬ ಮುನ್ನೋಟವಿದೆ. 2020ರಲ್ಲಿ ತೈಲ ಬೇಡಿಕೆ ಶೇಕಡ 10.54 ಇಳಿಕೆಯಾಗಿ ದಿನಕ್ಕೆ 44 ದಶಲಕ್ಷ ಬ್ಯಾರೆಲ್ ತಲುಪಿತ್ತು. 2019ರಲ್ಲಿ ಇದು 49.1 ಲಕ್ಷ ಇತ್ತು.

ಭಾರತದ ಟಾಪ್ ನಾಲ್ಕು ತೈಲ ಪೂರೈಕೆ ರಾಷ್ಟ್ರಗಳು

ಫೆಬ್ರವರಿ 2021ರ ಅಂಕಿಅಂಶ ಪ್ರಕಾರ ಭಾರತದ ತೈಲ ಪೂರೈಕೆ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ನಿತ್ಯ 5,45,300 ಬ್ಯಾರೆಲ್ ತೈಲ ಪೂರೈಸಿದ್ದು, ಒಟ್ಟಾರೆ ಶೇಕಡ 14 ಪಾಲು ಹೊಂದಿದೆ. ಇರಾಕ್ ಮುಂಚೂಣಿಯಲ್ಲಿದ್ದು 8,67,500 ಬ್ಯಾರೆಲ್, ನೈಜೀರಿಯಾ 4,72,300 ಬ್ಯಾರೆಲ್ ತೈಲ ಪೂರೈಸಿವೆ. ಇದೇ ಅವಧಿ ಯಲ್ಲಿ ಸೌದಿ ಅರೇಬಿಯಾ 4,45,200 ಬ್ಯಾರೆಲ್ ತೈಲ ಪೂರೈಕೆ ಮಾಡಿದ್ದು ಶೇ. 42ರಷ್ಟು ಬೇಡಿಕೆ ಇಳಿಕೆ ಮಾಡಿಕೊಂಡಿದೆ.

ಭಾರತದಲ್ಲಿ ಇಂಧನ ಬೇಡಿಕೆ 4.9% ಇಳಿಕೆ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಪ್ಲಾನಿಂಗ್ ಆಂಡ್ ಅನಾಲಿಸಿಸ್ ಸೆಲ್​ನ ದತ್ತಾಂಶ ಪ್ರಕಾರ, ಭಾರತದಲ್ಲಿ ಇಂಧನ ಬಳಕೆ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇಕಡ 4.9 ಇಳಿಕೆಯಾಗಿದ್ದು, 1.721 ಕೋಟಿ ಟನ್ ಪೆಟ್ರೋಲಿಯಂ ಉತ್ಪನ್ನ ಬಳಕೆಯಾಗಿದೆ. ಡೀಸೆಲ್ ಬಳಕೆ ಶೇಕಡ 8.5 ಇಳಿದು 6.55 ದಶಲಕ್ಷ ಟನ್ ತಲುಪಿದರೆ, ಪೆಟ್ರೋಲ್ ಬಳಕೆ ಶೇ. 6.5 ಇಳಿದು 2.4 ದಶಲಕ್ಷ ಟನ್ ತಲುಪಿದೆ. ಅಡುಗೆ ಅನಿಲ ಮಾರಾಟ ಪ್ರಮಾಣ ಶೇ. 7.6 ಏರಿಕೆಯಾಗಿದೆ.

ದೇಶದಲ್ಲಿ ತೈಲ ದಾಸ್ತಾನು ಎಷ್ಟಿದೆ?: ಭಾರತ 2020ರ ಏಪ್ರಿಲ್-ಮೇ ತಿಂಗಳಲ್ಲಿ 16.71 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿ ಆಂಧ್ರ ಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಪಾದೂರು ಮತ್ತು ಮಂಗಳೂರಿನ ವ್ಯೂಹಾತ್ಮಕ ಪೆಟ್ರೋಲಿಯಂ ಉಗ್ರಾಣದಲ್ಲಿ ದಾಸ್ತಾನು ಇರಿಸಿದೆ. ಅಂದು ಪ್ರತಿ ಬ್ಯಾರೆಲ್​ಗೆ 19 ಡಾಲರ್ ನಂತೆ ಖರೀದಿಸಲಾಗಿತ್ತು ಎಂದು 2020ರ ಸೆಪ್ಟೆಂಬರ್ 21ರಂದು ಸಚಿವ ಧಮೇಂದ್ರ ಪ್ರಧಾನ್ ರಾಜ್ಯಸಭೆಗೆ ತಿಳಿಸಿದ್ದರು.

ಇರಾಕ್ ಅಗ್ರಸ್ಥಾನಿ ಆಗಿದ್ದರೂ... ಒಪೆಕ್ ರಾಷ್ಟ್ರಗಳ ಪೈಕಿ ಇರಾಕ್ ಎರಡನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರ. ಭಾರತಕ್ಕೆ ತೈಲ ಪೂರೈಸುವ ರಾಷ್ಟ್ರಗಳ ಪೈಕಿ ಇರಾಕ್​ಗೆ ನಂಬರ್ ಒನ್ ಪಟ್ಟ. ಆದಾಗ್ಯೂ, ಕಳೆದ ಐದು ತಿಂಗಳ ಅವಧಿಯಲ್ಲಿ ಇರಾಕ್​ಗೆ ಭಾರತ ಸಲ್ಲಿಸಿದ ತೈಲ ಬೇಡಿಕೆ ಪ್ರಮಾಣ ಶೇಕಡ 23 ಇಳಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net