ಸ್ಮಾರ್ಟ್​ಕಾರ್ಡ್ ವಂಚನೆ ಬಗ್ಗೆ ಜಾಗೃತಿ ಮೂಡಿಸಿ; ವಿಜಯವಾಣಿ ವರದಿ ಬಳಿಕ ಎಚ್ಚೆತ್ತ ಆಹಾರ ಇಲಾಖೆ

FOLLOW UP
Published on
ಬೆಂಗಳೂರು:  ಪಡಿತರ ಚೀಟಿದಾರರಿಗೆ ಸ್ಮಾರ್ಟ್​ಕಾರ್ಡ್ ಮಾಡಿಸಿಕೊಡುವುದಾಗಿ ವಂಚನೆ ಮಾಡುತ್ತಿರುವ ಕುರಿತು ‘ಬಡವರಿಗೆ ಸ್ಮಾರ್ಟ್​ಕಾರ್ಡ್ ಟೋಪಿ’ ಹೆಸರಿನಲ್ಲಿ ‘ವಿಜಯವಾಣಿ’ ಬುಧವಾರ ಪ್ರಕಟಿಸಿದ ವಿಶೇಷ ವರದಿಯಿಂದ ಆಹಾರ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಸುತ್ತೋಲೆ ಹೊರಡಿಸಿದೆ.

ಪಡಿತರ ಪಡೆಯಲು ಸ್ಮಾರ್ಟ್​ಕಾರ್ಡ್ ಕಡ್ಡಾಯವೆಂದು ನಂಬಿಸಿ ಪಡಿತರ ಕಾರ್ಡ್​ದಾರರಿಂದ ಹಾಗೂ ಖಾಸಗಿ ಮುದ್ರಣ ಸಂಸ್ಥೆಗಳಿಂದ ಹಣ ವಸೂಲಿ ಮಾಡುತ್ತಿರುವ ಸಂಬಂಧ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದೆ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸ್ಮಾರ್ಟ್​ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ಇಲಾಖೆ ವತಿಯಿಂದ ನೀಡುತ್ತಿಲ್ಲವೆಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಕೇಂದ್ರ ಸರ್ಕಾರ ‘ಏಕ ರಾಷ್ಟ್ರ ಏಕ ಪಡಿತರ ಚೀಟಿ’ ಯೋಜನೆಯಲ್ಲಿ ಪಡಿತರ ಚೀಟಿದಾರರಿಗೆ ಹೊಸದಾಗಿ ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ವಿತರಿಸುತ್ತಿಲ್ಲ. ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ಮುದ್ರಿಸಲು ಕೇಂದ್ರ ಸರ್ಕಾರದ ಜತೆ ಖಾಸಗಿ ಕಂಪನಿಯೊಂದು ಒಪ್ಪಂದ ಮಾಡಿಕೊಂಡಿರುವುದಾಗಿ ನಂಬಿಸಿ ಮುದ್ರಣ ಕಂಪನಿಗಳಿಗೆ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ.

ಮೋಸ ಹೋಗಿರುವವರು ಖುದ್ದಾಗಿ ಇಲಾಖೆಗೆ ದೂರು ನೀಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯಕ್ತೆ ಶಮ್ಲಾ ಇಕ್ಬಾಲ್ ತಿಳಿಸಿದರು.

ಪಡಿತರ ಚೀಟಿಗಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ ಕೂಡಲೇ ಸದರಿ ಅರ್ಜಿಯು ಸಂಬಂಧಪಟ್ಟ ಆಹಾರ ನಿರೀಕ್ಷಕರ ಲಾಗಿನ್​ಗೆ ಹೋಗುತ್ತದೆ. ಅವುಗಳನ್ನು ಪರಿಶೀಲಿಸಿ ಅನುಮೋದಿಸಿದ ನಂತರ ಪಡಿತರ ಚೀಟಿ ನೇರವಾಗಿ ಟೆಂಡರ್ ಮೂಲಕ ಆಯ್ಕೆಯಾಗಿರುವ ಮಣಿಪಾಲ್ ಪ್ರೆಸ್ ಸಂಸ್ಥೆಯಲ್ಲಿ ಮುದ್ರಣಗೊಂಡು ರಿಜಿಸ್ಟ್ರಾರ್ ಪೋಸ್ಟ್ ಮೂಲಕ ಅರ್ಜಿದಾರರ ವಿಳಾಸಕ್ಕೆ ಬರುತ್ತದೆ ಎಂದವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net