ವಿಶೇಷ ಸಂಪಾದಕೀಯ| ಸ್ವದೇಶಿ ವಸ್ತು ಬಳಕೆ ಹೊಸ ವರ್ಷದ ಸಂಕಲ್ಪವಾಗಲಿ

Aatma nirbhar
Published on

ಕರೊನಾದಿಂದಾಗಿ ಎಲ್ಲ ರಂಗಗಳಲ್ಲೂ ಸಂಕಷ್ಟ ಎದುರಿಸಬೇಕಾಗಿ ಬಂದಿರುವುದು ಗೊತ್ತಿರುವಂಥದೇ. ಅಂತೂ ವರ್ಷದ ಕೊನೆಯಲ್ಲಿ ಲಸಿಕೆಯ ಆಶಾವಾದ ಸೃಷ್ಟಿಯಾಗಿದೆ. ಕರೊನಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಲೇ ಭವಿಷ್ಯದತ್ತ ದೃಷ್ಟಿಹರಿಸುವುದು ಮತ್ತು ಈ ಕುರಿತು ಯೋಜನೆಗಳನ್ನು ರೂಪಿಸಬೇಕಾದುದು ಅನಿವಾರ್ಯ. ಕರೊನಾ ಕಾರಣದಿಂದಾಗಿ ನಾವು ಅಭಿವೃದ್ಧಿ ವಿಚಾರದಲ್ಲಿ ಅನೇಕ ವರ್ಷಗಳ ಹಿನ್ನಡೆ ಅನುಭವಿಸಿದ್ದೇವೆ. ಭಾರತದ ಮಟ್ಟಿಗೆ, ಸ್ವಾವಲಂಬಿ ದೇಶವನ್ನು ಕಟ್ಟುವತ್ತ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾದ ತುರ್ತು ಅಗತ್ಯವನ್ನು ಕಾಲ ತಂದೊಡ್ಡಿದೆ.

ಪ್ರಧಾನಿ ನರೇಂದ್ರ ಮೋದಿಯವರು 2020ರ ಮೇ 12ರಂದು 20 ಲಕ್ಷ ಕೋಟಿ ರೂ.ಗಳ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಂದರ್ಭದಲ್ಲಿ, ಈ ಸ್ವಾವಲಂಬಿ ಪರಿಕಲ್ಪನೆಯನ್ನೇ ‘ಆತ್ಮನಿರ್ಭರ’ ಎಂದು ಕರೆದಿದ್ದಾರೆ. ಇದರ ಅರ್ಥ ಭಾರತ ಸ್ವಕೇಂದ್ರಿತವಾಗಿ ಜಗತ್ತಿನ ಉಳಿದ ದೇಶಗಳೊಂದಿಗಿನ ಸಂಬಂಧಕ್ಕೆ ಬಾಗಿಲುಮುಚ್ಚುವುದು ಎಂದಲ್ಲ. ಬದಲಿಗೆ, ಜಾಗತಿಕ ಆರ್ಥಿಕತೆಯಲ್ಲಿ ಇನ್ನೂ ದೊಡ್ಡ ಮತ್ತು ಪ್ರಮುಖ ಪಾತ್ರ ನಿಭಾಯಿಸಲು ಸಜ್ಜಾಗುವುದು. ಈ ಉದ್ದೇಶಸಾಧನೆಗೆ ಪ್ರಧಾನಮಂತ್ರಿಯವರು ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ, ಜನಸಂಖ್ಯೆ ಮತ್ತು ಬೇಡಿಕೆ- ಎಂಬ ಐದು ಸ್ತಂಭಗಳನ್ನು ವಿವರಿಸಿದ್ದಾರೆ.

ಸ್ವಾವಲಂಬಿ ಭಾರತ ನಿರ್ವಣದಲ್ಲಿ ಸರ್ಕಾರಗಳ ಜತೆಗೆ ಜನರ ಸಹಭಾಗಿತ್ವ ಕೂಡ ಅಷ್ಟೇ ಪ್ರಮುಖವಾದುದು. ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲವಲ್ಲ. ಅದರಲ್ಲೂ ವಿಶೇಷವಾಗಿ ಚೀನಾ ಕುರಿತಂತೆ ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಭಾರತದ ಜತೆ ಅಪಾರ ಮೊತ್ತದ ವ್ಯಾಪಾರ ವ್ಯವಹಾರಗಳನ್ನು ಹೊಂದಿದ್ದರೂ ಆ ದೇಶವು ಕುತಂತ್ರಗಳನ್ನು ಮಾಡುತ್ತಲೇ ಇರುತ್ತದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತ, ಭಾರತದ ವಿರುದ್ಧ ಮಸಲತ್ತು ನಡೆಸುತ್ತದೆ. ಗಡಿಯಲ್ಲಿ ಅನಗತ್ಯವಾಗಿ ಜಗಳ ತೆಗೆಯುತ್ತದೆ. ಚೀನಾ ಇಷ್ಟೆಲ್ಲ ಹಾರಾಡುವುದು ತನ್ನ ಅಗಾಧ ಆರ್ಥಿಕ ಶಕ್ತಿಯಿಂದಾಗಿ. ಹೀಗಾಗಿ ಮುಖ್ಯವಾಗಿ ಚೀನಾದ ಆರ್ಥಿಕಶಕ್ತಿಯನ್ನು ಕುಗ್ಗಿಸುವ ದಿಸೆಯಲ್ಲಿ ಸಾಮೂಹಿಕ ಪ್ರಯತ್ನ ಆಗಬೇಕಾಗಿದೆ. ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ನಿರ್ಬಂಧ, ಕಟ್ಟುನಿಟ್ಟು ಪರಿಶೀಲನೆ, ನೂರಾರು ಆಪ್​ಗಳ ನಿಷೇಧ ಇತ್ಯಾದಿ ಕ್ರಮಗಳ ಮೂಲಕ ಭಾರತ ಸರ್ಕಾರ ಈ ದಿಸೆಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಜನರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ, ದೀಪಾವಳಿ ಸಂದರ್ಭದಲ್ಲಿ ಚೀನಾದಿಂದ ಬರುತ್ತಿದ್ದ ಪಟಾಕಿ ಪ್ರಮಾಣ ಈಚಿನ ವರ್ಷಗಳಲ್ಲಿ ತೀವ್ರವಾಗಿ ಕುಸಿದಿರುವುದೇ ಸಾಕ್ಷಿ. ಚೀನಾದಿಂದ ಬರುವ ಎಲ್ಲ ವಸ್ತುಗಳ ಮೇಲೂ ಇಂಥ ಪ್ರಹಾರ ಆದಲ್ಲಿ ಆ ದೇಶವನ್ನು ನಡುಗಿಸಬಹುದು. ಇಷ್ಟಿದ್ದರೂ, ಭಾರತ ಮತ್ತು ಚೀನಾ ನಡುವೆ ವ್ಯಾಪಾರ ಕೊರತೆ ಭಾರಿ ಪ್ರಮಾಣದಲ್ಲಿಯೇ ಇದೆ. ಅಂದರೆ, ನಮ್ಮಲ್ಲಿಂದ ಅಲ್ಲಿಗೆ ಹೋಗುವ ವಸ್ತುಗಳ ರಫ್ತು ಕಡಿಮೆ. ಅಲ್ಲಿಂದ ಆಗುವ ಆಮದು ಅಧಿಕ. ಆದರೂ ಈಗ ಚಿತ್ರಣ ಸ್ವಲ್ಪ ಭಿನ್ನವಾಗಿದೆ. 2020ರ ಜನವರಿಯಿಂದ ನವೆಂಬರ್ ಅವಧಿಯಲ್ಲಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ಶೇ.16ರಷ್ಟು ಹೆಚ್ಚಿದ್ದರೆ ಚೀನಾದಿಂದ ಭಾರತಕ್ಕೆ ಆಮದಿನಲ್ಲಿ ಶೇ.13 ಇಳಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಚೀನಾ 4,36,024 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ಭಾರತಕ್ಕೆ ರಫ್ತು ಮಾಡಿದ್ದರೆ, ಭಾರತದಿಂದ 1,40,413 ಕೋಟಿ ರೂ. ಮೌಲ್ಯದ ವಸ್ತುಗಳನ್ನು ತರಿಸಿಕೊಂಡಿದೆ. ಮೊನ್ನೆ ಭಾನುವಾರ ಈ ವರ್ಷದ ಕೊನೆಯ ‘ಮನ್ ಕೀ ಬಾತ್’ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾವಲಂಬಿ ಭಾರತ ನಿರ್ವಣದ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಹೊಸ ವರ್ಷದಲ್ಲಿ ಇಂಥ ಸಂಕಲ್ಪವನ್ನು ದೇಶದ ಜನರೂ ತೊಡಬೇಕಾಗಿದೆ. ಖರೀದಿಸುವ ಪ್ರತಿ ವಸ್ತುವಿನ ಮೂಲ ತಿಳಿಯಬೇಕು. ವಿದೇಶಿ ವಸ್ತುಗಳನ್ನು ಖರೀದಿಸಿದರೆ ನಮ್ಮ ಬೆವರಿನ ಶ್ರಮವನ್ನು ಬೇರೆಯವರಿಗೆ ಧಾರೆಯೆರೆದಂತಾಗುತ್ತದೆ. ಒಂದು ಉದಾಹರಣೆ ನೀಡುವುದಾದರೆ, ಚೀನಾದಲ್ಲಿ ತಯಾರಾದ ಗೊಂಬೆಗಳನ್ನು ಖರೀದಿಸುವುದಕ್ಕಿಂತ ನಮ್ಮದೇ ಚನ್ನಪಟ್ಟಣದ

ಗೊಂಬೆಯನ್ನು ಕೊಳ್ಳಬಹುದಲ್ಲ? ಇದೇ ‘ವೋಕಲ್ ಫಾರ್ ಲೋಕಲ್.’ ಅದೇ ಸಂದರ್ಭದಲ್ಲಿ ನಮ್ಮಲ್ಲಿಯೇ ವಿಶ್ವದರ್ಜೆಯ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವತ್ತಲೂ ಗಮನ ಹರಿಯಬೇಕು. ಚೀನಾ ವಸ್ತ್ತುಗಳನ್ನು ಬಹಿಷ್ಕರಿಸುವ ಆಂದೋಲನ ದೇಶದಲ್ಲಿ ಒಂದು ಹಂತದಲ್ಲಿ ನಡೆಯುತ್ತಿದೆ. 2021ರಲ್ಲಿ ಇದು ಇನ್ನಷ್ಟು ಬಿರುಸು ಪಡೆಯಬೇಕು. ತನ್ಮೂಲಕ ಸ್ವಾವಲಂಬಿ ಭಾರತ ನಿರ್ವಣದಲ್ಲಿ ದೇಶದ ಎಲ್ಲ ಜನರೂ ಭಾಗವಹಿಸಬೇಕು ಎಂಬುದು ವಿಜಯವಾಣಿ ಕಳಕಳಿ, ಆಶಯ. ಇದೂ ಒಂದರ್ಥದಲ್ಲಿ ದೇಶಸೇವೆಯೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net