ಮಧುಮೇಹಕ್ಕೆ ಮದ್ದು: ನಿಯಮಿತ ವ್ಯಾಯಾಮ, ಹಿತಮಿತ ಆಹಾರ..

Diabetes
Published on
ವಿಶ್ವ ಮಧುಮೇಹ ದಿನ (ನ.14)ದ ಅಂಗವಾಗಿ ‘ವಿಜಯವಾಣಿ’ ಮತ್ತು ‘ದಿಗ್ವಿಜಯ 24ಗಿ7 ನ್ಯೂಸ್’ ಹಮ್ಮಿಕೊಂಡಿದ್ದ ಸಂವಾದದಲ್ಲಿ ಕರ್ನಾಟಕ ಎಂಡೋಕ್ರೖೆನೋಲಜಿ ಸಂಸ್ಥೆಯ ಡಯಾಬಿಟೀಸ್ ಮತ್ತು ಎಂಡೋಕ್ರೖೆನೋಲಜಿ ವಿಭಾಗದ ಮುಖ್ಯಸ್ಥ ಡಾ. ಆರ್. ಅನಿಲ್ ಕುಮಾರ್, ಮಧುಮೇಹ ಕಾಯಿಲೆಗೆ ಕಾರಣ, ಚಿಕಿತ್ಸೆ, ನಿಯಂತ್ರಣ ಕ್ರಮಗಳ ಕುರಿತು ವಿವರಿಸಿದ್ದಾರೆ. ಈ ಕುರಿತ ಸಮಗ್ರ ಮಾಹಿತಿ ನಿಮ್ಮ ಮುಂದೆ.

ಮಧುಮೇಹಿಗಳು ನಿಯಮಿತ ವ್ಯಾಯಾಮ ಹಾಗೂ ಹಿತಮಿತ ಆಹಾರ ಸೇವನೆಯನ್ನು ದೈನಂದಿನ ಚಟುವಟಿಕೆಯ ಭಾಗವಾಗಿರಿಸಿಕೊಂಡಿದ್ದೇ ಆದಲ್ಲಿ ಡಯಾಬಿಟಿಕ್ ಕಾಯಿಲೆ ಹತ್ತಿರ ಸುಳಿಯದು. ಜತೆಗೆ ಶಿಸ್ತಿನ ಆರೋಗ್ಯ ಕಾಳಜಿ ವಹಿಸಿದರೆ ಮಧುಮೇಹದಿಂದ ದೂರ ಉಳಿಯಬಹುದು. ಈ ಮುನ್ನೆಚ್ಚರಿಕೆ ಹೊರತಾಗಿಯೂ ವರ್ಷದಲ್ಲಿ ಎರಡು ಬಾರಿ ತಪ್ಪದೆ ಆರೋಗ್ಯ ತಪಾಸಣೆ ಹಾಗೂ ವೈದ್ಯರು ನೀಡುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಧುಮೇಹವನ್ನು ನಿಶ್ಚಿತವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂದು ಡಾ. ಆರ್.ಅನಿಲ್ ಕುಮಾರ್ ತಿಳಿಸಿದರು.

ಬದಲಾದ ಜೀವನ ಶೈಲಿ ಹಾಗೂ ಆರೋಗ್ಯ ಕಾಳಜಿ ವಹಿಸದ ಕಾರಣ ನಮ್ಮಲ್ಲಿ ಕಾಯಿಲೆಗಳು ಹೊಕ್ಕಿವೆ. ಅತಿಯಾದ ಬಾಯಿ ಚಪಲ, ಅನಗತ್ಯ ಚಿಂತೆ, ಒತ್ತಡದಲ್ಲಿ ಕಾರ್ಯನಿರ್ವಹಣೆ ಮಧುಮೇಹಕ್ಕೆ ಆಹ್ವಾನ ಕೊಟ್ಟಂತೆ. ಪ್ರತಿ ತಿನಿಸಿನಲ್ಲೂ ಸಕ್ಕರೆ ಅಂಶ ಇದ್ದೇ ಇದ್ದು ಅದನ್ನು ಅರಿತು ಹಿತ-ಮಿತವಾಗಿ ಸೇವಿಸಬೇಕು. ಒಮ್ಮೆ ತಿನ್ನುವ ಆಹಾರವನ್ನು ಭಾಗ ಮಾಡಿ 2-3 ಬಾರಿ ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ರೋಗ ಬಂದ ಮೇಲೆ ಚಿಕಿತ್ಸೆಗೆ ಹಾತೊರೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣ ರೋಗಿಯ ಲಕ್ಷಣವೂ ಹೌದು. ಇದು ಪ್ರತಿಯೊಬ್ಬರ ದಿನಚರಿ ಆದಲ್ಲಿ ಮಧುಮೇಹದಿಂದ ಬಳಲುವ ಅಥವಾ ಅದರ ಬಗ್ಗೆ ಭಯ ಪಡುವ ಅಗತ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು.

ವಿಶ್ವ ಮಧುಮೇಹ ದಿನದ ಮಹತ್ವ: ಮಧುಮೇಹ ನಿಯಂತ್ರಣಕ್ಕೆ ಇನ್ಸುಲಿನ್ ಕಂಡುಹಿಡಿದ ಫ್ರೆಡೆರಿಕ್ ಬ್ಯಾಂಟಿಂಗ್ ಜನ್ಮದಿನ (ನ.14)ವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು 1922ರಲ್ಲಿ ಇನ್ಸ್​ಲಿನ್ ಕಂಡು ಹಿಡಿದಿದ್ದು, ಈ ವರ್ಷ ಶತಮಾನೋತ್ಸವ ಆಚರಿಸಲಾಗುತ್ತಿದೆ. ಇನ್ಸುಲಿನ್ ಇಲ್ಲದಿದ್ದರೆ ಮಧುಮೇಹದಿಂದ ಅಸಂಖ್ಯ ಜನರು ಪ್ರಾಣ ಕಳೆದುಕೊಳ್ಳಬೇಕಿತ್ತು. ಹಾಗಾಗಿ ವಿಶ್ವಾದ್ಯಂತ ಮಧುಮೇಹ ಕುರಿತು ಜಾಗೃತಿ ಮೂಡಿಸಲು ನ.14ರಂದು ಮಧುಮೇಹ ದಿನ ಆಚರಿಸ ಲಾಗುತ್ತಿದೆ.

ಮಧುಮೇಹ ಎಂದರೇನು?: ಮಧುಮೇಹ (ಡಯಾಬಿಟೀಸ್) ರಕ್ತದಲ್ಲಿ ಗ್ಲೂಕೋಸ್ ಅಥವಾ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಬರುವ ಕಾಯಿಲೆ. ವ್ಯಕ್ತಿ ಅಹಾರ ಸೇವನೆ ನಂತರ ಅಂಗಾಂಶದಲ್ಲಿ ಶೇಖರಣೆಗೊಂಡ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಿ ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಇನ್ಸುಲಿನ್ ಪ್ರಮಾಣ ಉತ್ಪತ್ತಿ ಆಗದಿದ್ದಲ್ಲಿ ಅಥವಾ ದೇಹವು ಇನ್ಸುಲಿನ್​ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಮುನ್ನೆಲೆಗೆ ಬರುತ್ತದೆ.

ಭಾರತಕ್ಕೆ 2ನೇ ಸ್ಥಾನ: ಭಾರತದಲ್ಲಿ 74.2 ದಶಲಕ್ಷ ಮಧುಮೇಹಿಗಳಿದ್ದು, ಅತೀ ಹೆಚ್ಚು ರೋಗಿಗಳನ್ನು ಹೊಂದಿರುವ ವಿಶ್ವದ 2ನೇ ದೇಶವಾಗಿದೆ. ಮೊದಲ ಸ್ಥಾನದಲ್ಲಿ ಚೀನಾ (102 ದಶಲಕ್ಷ), ಮೂರನೇ ಸ್ಥಾನದಲ್ಲಿ ಅಮೆರಿಕ ಇದೆ. ವಿಶ್ವದಲ್ಲಿ ಅಂದಾಜು 537 ದಶಲಕ್ಷ ಮಂದಿ ಮಧುಮೇಹ ಹೊಂದಿದ್ದಾರೆ. ಬದಲಾದ ಜೀವನ ಶೈಲಿ, ಆಹಾರ ಕ್ರಮ, ಒತ್ತಡ, ವಂಶವಾಹಿ ಸೇರಿ ಹಲವು ಕಾರಣಗಳಿಂದ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಮಧುಮೇಹದಲ್ಲಿ ಎರಡು ವಿಧ

  • ಟೈಪ್ -1 ಡಯಾಬಿಟೀಸ್ ಹೆಚ್ಚಾಗಿ ಸಣ್ಣ ವಯಸ್ಸಿನವರಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಮಕ್ಕಳಲ್ಲಿ ಮೂವರಲ್ಲಿ ಕಂಡುಬರುತ್ತಿದೆ. ಈ ಪ್ರಮಾಣ ಐರೋಪ್ಯ ದೇಶಗಳಲ್ಲಿ 60 ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ, ಶೀತ ಪ್ರದೇಶದಲ್ಲಿ ಈ ಸಂಖ್ಯೆ ಹೆಚ್ಚು ಎನ್ನಲಾಗಿದೆ. ಇಂತಹ ಮಕ್ಕಳಿಗೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯೇ ಆಗದು. ಹಾಗಾಗಿ ಇವರಿಗೆ ಇನ್ಸುಲಿನ್ ಒಂದೇ ಪರಿಹಾರ ಹಾಗೂ ಅನಿವಾರ್ಯ ಆಗಿದೆ.
  • ಟೈಪ್ -2 ಡಯಾಬಿಟೀಸ್ ಹೊಂದಿದವರಲ್ಲಿ ಇನ್ಸುಲಿನ್ ಬಿಡುಗಡೆ ಆಗುತ್ತಿರುತ್ತದೆ. ಆದರೆ, ಅದು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಇದು ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ 20 ವರ್ಷದವರಲ್ಲೇ ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ಮೊದಲು ಡಯೆಟ್ ಹಾಗೂ ಮಾತ್ರೆ ಮೂಲಕ ನಿಯಂತ್ರಿಸಲಾಗುತ್ತದೆ. ಅದೂ ಸಾಧ್ಯವಾಗದಿದ್ದಾಗ ಇನ್ಸುಲಿನ್ ನೀಡಲಾಗುವುದು. ಯಾರು ಆಹಾರ ಕ್ರಮ, ವ್ಯಾಯಾಮ ಹಾಗೂ ನಿಯಮಿತ ಚಿಕಿತ್ಸೆ ಮತ್ತು ಸಮರ್ಪಕವಾಗಿ ಔಷಧ ಸೇವಿಸುತ್ತಾರೋ ಅಂತಹವರು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಪತ್ತೆ ಹೇಗೆ?: ಊಟಕ್ಕೆ ಮುಂಚೆ ರಕ್ತದಲ್ಲಿ ಸಕ್ಕರೆ ಅಂಶ 126 ಎಂಜಿ ಪರ್ ಡಿಎಲ್ ಅದಕ್ಕಿಂತ ಹೆಚ್ಚಿದ್ದರೆ, ಎಚ್​ಬಿ ಎ1ಸಿ ಮೂರು ತಿಂಗಳ ಸರಾಸರಿ ಸಕ್ಕರೆ ಅಂಶ 6.5 ಗಿಂತ ಹೆಚ್ಚಿದ್ದರೆ ಅಂತಹವರಲ್ಲಿ ಮಧುಮೇಹ ಕಂಡುಬರುತ್ತದೆ. ಯಾರಲ್ಲಿ ಊಟಕ್ಕೆ ಮುಂಚೆ ರಕ್ತದಲ್ಲಿ ಸಕ್ಕರೆ ಅಂಶ 70-100 ಎಂಜಿ ಪರ್ ಡಿಎಲ್ ಹಾಗೂ ಊಟದ ನಂತರ 140 ಎಂಜಿ ಪರ್ ಡಿಎಲ್ ಇರುತ್ತದೋ ಅವರು ಆರೋಗ್ಯವಂತರು. ರಕ್ತದ ಒತ್ತಡ 140/90 ಎಂ.ಎಂ. ಎಲ್​ಡಿಎಲ್ ಆಥವಾ ಬ್ಯಾಡ್ ಕೊಲೆಸ್ಟ್ರಾಲ್ 100 ಎಂಜಿ ಪರ್ ಡಿಎಲ್​ಗಿಂತ ಕಡಿಮೆ ಇರಬೇಕು. ಹೀಗೆ ಯಾರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೋ ಅಂತಹವರಲ್ಲಿ ಹೃದಯ, ಕಿಡ್ನಿ, ಕಣ್ಣು, ನರ ಹಾನಿ ತಡೆಗಟ್ಟಬಹುದು.

ರೋಗ ಲಕ್ಷಣ ಏನು?: ಅತಿಯಾದ ಮೂತ್ರ ವಿಸರ್ಜನೆ, ಬಾಯಾರಿಕೆ, ಹಸಿವು, ದೃಷ್ಟಿ ಮಂಜಾಗುವಿಕೆ, ದೇಹದ ತೂಕ ಇಳಿಕೆ, ಬೆವರುವುದು, ಸುಸ್ತು, ಗಾಯ ಆದಲ್ಲಿ ಬೇಗ ವಾಸಿಯಾಗದಿರುವುದು, ಗಡಸುಚರ್ಮ ಮಧುಮೇಹ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಆದರೂ, ಶೇ.50 ಮಂದಿಯಲ್ಲಿ ಇಂತಹ ಯಾವ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲ. ಅಂತಹವರು ಸಾಮಾನ್ಯ ರಕ್ತಪರೀಕ್ಷೆ ಮಾಡಿಸಿದಾಗ ಕಾಯಿಲೆ ಪತ್ತೆ ಆಗುತ್ತದೆ. 35 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಒಮ್ಮೆ, 50 ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ನಿಯಂತ್ರಣ ಹೇಗೆ?: ಆರೋಗ್ಯಕರ ಆಹಾರ ಕ್ರಮ (ಡಯೆಟ್), ಯೋಗ, ನಡಿಗೆ ಅಥವಾ ವ್ಯಾಯಾಮ. ವೈದ್ಯರ ಸಲಹೆಯಂತೆ ಔಷಧ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಕ್ರಮ ಅನುಸರಿಸುವ ಮೂಲಕ ಮಧುಮೇಹ ನಿಯಂತ್ರಣ ಸಾಧ್ಯವಿದೆ.

ಉಪವಾಸ ಮಾಡಬಹುದೆ?: ಮಧುಮೇಹಿ ಉಪವಾಸ ಮಾಡುವುದು ಒಳ್ಳೆಯದಲ್ಲ. ಆದರೂ, ಊಟದ ಬದಲಿಗೆ ಹಣ್ಣು, ತರಕಾರಿ ಸೇವಿಸಬಹುದು. ಹೆಚ್ಚು ಹಸಿರು ತರಕಾರಿ ಸೇವನೆ ಒಳ್ಳೆಯದು.

ಆಹಾರ ಕ್ರಮ ಹೀಗಿರಲಿ

ಆಹಾರದಲ್ಲಿ ಕಾರ್ಬೆಹೈಡ್ರೇಟ್ಸ್ ಪ್ರಮಾಣ ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಅಹಾರವನ್ನು ತೆಗೆದುಕೊಳ್ಳಬೇಕು. ಅದಂತೆ ಹೆಚ್ಚು ಪ್ರೋಟಿನ್ ಹಾಗೂ ಫೈಬರ್ ಯುಕ್ತ ಆಹಾರ ಸೇವಿಸಬೇಕು. ಕೊಬ್ಬು, ಸಿಹಿ ಪದಾರ್ಥಗಳಿಂದ ದೂರವಿರಬೇಕು. ಎಲ್ಲ ಬಗೆಯ ದ್ವಿದಳ ಧಾನ್ಯಗಳು, ಹಣ್ಣು ಮತ್ತು ತರಕಾರಿ ಹಾಗೂ ಒಣ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಸಿಹಿ ಅಂಶ ಹೆಚ್ಚಿರುವ ಮಾವು, ಹಲಸು, ಸಪೋಟಾ, ಸೀತಾಫಲ, ಪಚ್ಚಬಾಳೆ, ದ್ರಾಕ್ಷಿ ಹಣ್ಣುಗಳ ಸೇವನೆ ಬೇಡ. ಬದಲಿಗೆ ಸೇಬು, ಪರಂಗಿ, ಪೂನ್​ಆಪಲ್, ಸೀಬೇಕಾಯಿ, ನೇರಳೆ, ದಾಳಿಂಬೆಯನ್ನು ತಿನ್ನಬಹುದು. ಆದರೆ ಜ್ಯೂಸ್ ಮಾಡಿ ಕುಡಿಯುವುದು ಬೇಡ. ಮಾಂಸಹಾರಿಗಳಾದರೆ ಬೇಯಿಸಿದ ಕೋಳಿ ಮಾಂಸ, ಮೀನು ಹಾಗೂ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಬಹುದು. ಕುರಿ, ಮೇಕೆ ಮಾಂಸ ಉತ್ತಮವಲ್ಲ. ಎಣ್ಣೆಯಲ್ಲಿ ಕರಿದ ಪದಾರ್ಥ ಸೇವಿಸಬಾರದು. ತುಪ್ಪ, ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಮಿತ ಬಳಕೆ ಉತ್ತಮ. ಸಕ್ಕರೆ ಹಾಗೂ ಬೆಲ್ಲ ಎರಡೂ ಕಬ್ಬಿನಿಂದಲೇ ತಯಾರಿಸುವುದರಿಂದ ಇವುಗಳ ಬಳಕೆ ಬೇಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net