

ಬೆಂಗಳೂರು: ನಾಡು ನುಡಿ, ಸಂಸ್ಕೃತಿ ಉಳಿಸಿ ಬೆಳೆಸಲು ಒತ್ತಾಸೆಯಾಗಿ ನಿಲ್ಲುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್ನಲ್ಲಿ ಕಡಿಮೆ ಅನುದಾನ ಮೀಸಲಿಟ್ಟಿದ್ದರ ಬಗ್ಗೆ ವಿಧಾನ ಪರಿಷತ್ನಲ್ಲಿ ಬೇಸರ ವ್ಯಕ್ತವಾಗಿದೆ.
ಬಿಜೆಪಿಯ ಎನ್. ರವಿಕುಮಾರ್, ‘ನಾಡಿನ ಭಾಷೆ-ಸಂಸ್ಕೃತಿ ಕಡೆಗಣಿಸಿದ ರಾಜ್ಯ ಸರ್ಕಾರ’ ಶೀರ್ಷಿಕೆಯಡಿ ‘ವಿಜಯವಾಣಿ’ ಪ್ರಕಟಿಸಿದ ವರದಿಯತ್ತ ಸರ್ಕಾರದ ಗಮನಸೆಳೆದರು. ಇಲಾಖೆಗೆ 237 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಎಂಟು ಕೋಟಿ ರೂ. ಕಡಿಮೆಯಾಗಿದೆ. ಮೀಸಲಿಟ್ಟು ಅನುದಾನದಲ್ಲಿ 120 ರಿಂದ 130 ಕೋಟಿ ರೂ. ಸಂಬಳ ಮತ್ತು ಸಾರಿಗೆ ವೆಚ್ಚಕ್ಕೆ ಬಳಕೆಯಾಗುತ್ತದೆ. ಉಳಿದ ಅನುದಾನದಲ್ಲಿ ಇಲಾಖೆ ಕಾರ್ಯನಿರ್ವಹಣೆ, ಪ್ರಮುಖ ಕಾರ್ಯಕ್ರಮಗಳ ಜಾರಿಗೆ ಹಣದ ಕೊರತೆಯಾಗಲಿದೆ ಎಂದು ಸಾಂಸ್ಕೃತಿಕ ವಲಯ ಅಸಮಾಧಾನ ವ್ಯಕ್ತಪಡಿಸಿದೆ.
ಹಲವು ಪ್ರಾಧಿಕಾರ, ಸಂಸ್ಥೆ, 14 ಅಕಾಡೆಮಿಗಳು, 24 ಪ್ರತಿಷ್ಠಾನಗಳು, 6 ರಂಗಾಯಣಗಳು ಹಾಗೂ 2 ಸಂಶೋಧನಾ ಕೇಂದ್ರಗಳು ಇಲಾಖೆ ವ್ಯಾಪ್ತಿಯಲ್ಲಿವೆ. ಇದರೊಂದಿಗೆ ರಾಜ್ಯೋತ್ಸವ ಸೇರಿ ವಿವಿಧ ಪ್ರಶಸ್ತಿಗಳು, 32 ಜಯಂತಿಗಳನ್ನು ಇಲಾಖೆ ನಿರ್ವಹಿಸುತ್ತಿದೆ. ಇಲಾಖೆ ಚಟುವಟಿಕೆಗಳು, ಕಾರ್ಯಕ್ರಮಗಳನ್ನು ಗಮನಿಸಿದರೆ ತೆಗೆದಿಟ್ಟ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಸಾಹಿತ್ಯ, ಸಾಂಸ್ಕೃತಿಕ ವಲಯದ ಅಪೇಕ್ಷೆಯಂತೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಎನ್. ರವಿಕುಮಾರ್ ಆಗ್ರಹಿಸಿದರು.
ಬಂಡವಾಳ ಹಿಂತೆಗೆತ ಸೂಕ್ತ: ರೋಗಗ್ರಸ್ತ ಸಾರ್ವಜನಿಕ ಉದ್ಯಮಗಳು ಸರ್ಕಾರದ ಬೊಕ್ಕಸಕ್ಕೆ ಹೊರೆಯಾದ ಪರಿ ಬಗ್ಗೆ ‘ವಿಜಯವಾಣಿ’ ಸಂಪಾದಕೀಯವನ್ನು ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ ಪ್ರಸ್ತಾಪಿಸಿ, ಸೂಕ್ತ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಿದರು. 125 ಸಾರ್ವಜನಿಕ ಉದ್ದಿಮೆಗಳ ಪೈಕಿ 54 ಉದ್ದಿಮೆಗಳು 2022 ಮಾರ್ಚ್ ಅಂತ್ಯಕ್ಕೆ 37,839 ಕೋಟಿ ರೂ. ನಷ್ಟ ಅನುಭವಿಸಿವೆ. ಎಸ್ಕಾಂಗಳ ಸಹಿತ 34 ಸಾರ್ವಜನಿಕ ಉದ್ದಿಮೆಗಳ ಆಸ್ತಿಗಳು ಶೂನ್ಯ, 26 ಉದ್ದಿಮೆಗಳ 42,557 ಕೋಟಿ ರೂ. ಸಾಲ ಮರುಪಾವತಿಸುವ ಹೊರೆ ಸರ್ಕಾರ ಹೊತ್ತುಕೊಳ್ಳಬೇಕಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಈ ಉದ್ಯಮಗಳು ಮತ್ತಷ್ಟು ಮುಗ್ಗಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಖಾಸಗೀಕರಣ ಅಥವಾ ಬಂಡವಾಳ ಹಿಂತೆಗೆತದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹ ಮಾಡಿದರು.
ಕ್ರಮಕ್ಕೆ ಶರವಣ ಒತ್ತಾಯ: ಬಹುಮಹಡಿ ಕಟ್ಟಡ ನಿರ್ವಿುಸುತ್ತಿರುವ ಕಂಪನಿ ವಿಳಂಬ ಮಾಡಿದ್ದಕ್ಕೆ ವಿಧಿಸಿದ ದಂಡದಲ್ಲಿ ವಿನಾಯಿತಿ ನೀಡಿದ್ದರ ಬಗ್ಗೆ ‘ವಿಜಯವಾಣಿ’ ಪ್ರಕಟಿಸಿದ ವರದಿಯತ್ತ ಜೆಡಿಎಸ್ನ ಟಿ.ಎ.ಶರವಣ ಸರ್ಕಾರದ ಗಮನಸೆಳೆದರು. ಸ್ವಾತಂತ್ರ್ಯ ಉದ್ಯಾನವನ ಸಮೀಪದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ಟೆಂಡರ್ನಲ್ಲಿ ಗುತ್ತಿಗೆ ಪಡೆದ ಕಂಪನಿಗೆ ಕಾಲಮಿತಿ ಪಾಲಿಸಿಲ್ಲವೆಂದು ನಿಯಮಾನುಸಾರ ಬಹು ಕೋಟಿ ರೂ. ವಿಧಿಸಲಾಗಿತ್ತು. ಯಾವುದೇ ಕಾರ್ಯ, ಕಾರಣವಿಲ್ಲದೆ ಕಂಪನಿಗೆ ವಿಧಿಸಿದ ಮೊತ್ತದಲ್ಲಿ 25 ಲಕ್ಷ ರೂ. ವಿನಾಯಿತಿ ನೀಡಿ, ಬಿಬಿಎಂಪಿಗೆ ಅನಗತ್ಯವಾಗಿ ನಷ್ಟು ಉಂಟು ಮಾಡಿದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಟಿ.ಎ. ಶರವಣ ಒತ್ತಾಯಿಸಿದರು.