'ವಿಜಯವಾಣಿ' ವರದಿ ಬೆನ್ನಲ್ಲೇ ಮೈಕ್ರೋ ಫೈನಾನ್ಸ್​ಗೆ ಮೂಗುದಾರ

ವಿಜಯವಾಣಿ (5)
Published on

| ರುದ್ರಣ್ಣ ಹರ್ತಿಕೋಟೆ, ಬೆಂಗಳೂರು

ರಾಜ್ಯದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಶೋಷಿಸುತ್ತಿರುವ ಮೈಕ್ರೋ ಫೈನಾನ್ಸ್, ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಮೀಟರ್ ಬಡ್ಡಿ ಮಾಫಿಯಾವನ್ನು ಹೊಸ ಕಾನೂನಿನ ಮೂಲಕ ಬಗ್ಗು ಬಡಿಯಲು ಸರ್ಕಾರ ತೀರ್ಮಾನಿಸಿದೆ. ಮೈಕ್ರೋ ಫೈನಾನ್ಸ್ ದಂಧೆಯ ಕರಾಳತೆ ಕುರಿತು ವಿಜಯವಾಣಿ ಮುಖಪುಟದಲ್ಲಿ ಭಾನುವಾರ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಮುಂದಿನ ಅಧಿವೇಶನದಲ್ಲಿ ಹೊಸ ವಿಧೇಯಕ ರೂಪಿಸಲು ಸಿದ್ಧತೆ ಆರಂಭಿಸಿದೆ.

ಚಾಮರಾಜನಗರ, ಬೆಳಗಾವಿ, ರಾಣೆಬೆೆನ್ನೂರು ಸೇರಿದಂತೆ ರಾಜ್ಯದ ವಿವಿಧೆಡೆ ಖಾಸಗಿ ಫೈನಾನ್ಸ್​ಗಳ ಕಿರುಕುಳ ಮಿತಿ ಮೀರಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಹೀಗಾಗಿಯೇ ಕಾನೂನಿನ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸದಸ್ಯರು ಹೊಸ ಕಾನೂನಿನ ಪರವಾಗಿದ್ದಾರೆ.

ಮೈಕ್ರೋ ಫೈನಾನ್ಸ್ ಕಾಟ ಒಂದೆಡೆಯಾದರೆ, ಮೀಟರ್ ಬಡ್ಡಿ ಕಿರುಕುಳ ಮತ್ತೊಂದೆಡೆ ತಲೆಬೇನೆ ತರಿಸಿದೆ. ಈ ಎರಡಕ್ಕೂ ಕಾನೂನಿನ ಮೂಲಕವೇ ತಡೆ ಹಾಕುವುದು ಸರ್ಕಾರದ ಉದ್ದೇಶ. ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಈ ಬಗ್ಗೆ ಚರ್ಚೆಗಳಾಗಿದ್ದವು.

ನ್ಯಾಯಾಲಯದ ಬಲ

ಹಣಕಾಸು ಸಂಸ್ಥೆಗಳ ಅಕ್ರಮಗಳಿಗೆ ಕಡಿವಾಣ ಹಾಕಲು ಇತ್ತೀಚಿಗಿನ ರಾಜ್ಯ ಹೈಕೋರ್ಟ್ ಆದೇಶವೂ ಪುಷ್ಟಿ ನೀಡಿದೆ. ಕಾನೂನಿನ ಪ್ರಕಾರ ನಿಗದಿಯಾದ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು, ವಸೂಲಿಗೆ ಕಿರುಕುಳ ನೀಡಬಾರದು ಎಂಬ ಆದೇಶ ಇದೆ. ಸುಪ್ರೀಂಕೋರ್ಟ್ ಸಹ ಇದು ರಾಜ್ಯದ ವಿಷಯವಾಗಿರುವುದರಿಂದ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಆದ್ದರಿಂದಲೇ ಸರ್ಕಾರ ಪ್ರತ್ಯೇಕ ಕಾಯ್ದೆಗೆ ಮುಂದಾಗಿದೆ.

ಹೊಸ ಕಾಯ್ದೆಯಲ್ಲಿ ಏನಿರಲಿದೆ

  • ನಿಗದಿತ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವಂತಿಲ್ಲ
  • ವಸೂಲಿಗೆ ಕಿರುಕುಳ ನೀಡಿದರೆ ಕನಿಷ್ಠ 10 ವರ್ಷ ಜೈಲು
  • ಜೈಲು ಶಿಕ್ಷೆ ಜತೆಗೆ ಲಕ್ಷಾಂತರ ರೂ. ದಂಡ ವಿಧಿಸುವುದು
  • ಮೀಟರ್ ಬಡ್ಡಿ ವಿಧಿಸಿ ಯಾರಿಗೂ ಕಿರುಕುಳ ನೀಡುವಂತಿಲ್ಲ
  • ಮೀಟರ್ ಬಡ್ಡಿ ಮಾಫಿಯಾ ಬರೆದಿಟ್ಟ ಚೀಟಿಯೇ ದಾಖಲೆ
  • ಖಾಸಗಿ ಹಣಕಾಸು ಸಂಸ್ಥೆ ಕಾನೂನಿನ ವ್ಯಾಪ್ತಿಗೊಳಪಡಲಿವೆ
  • ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗೂ ಅನ್ವಯ

ಕಿರುಕುಳ ಕೊಟ್ಟ ಮ್ಯಾನೇಜರ್ ಬಂಧನ

ಸಾಲ ಮರುಪಾವತಿಸುವಂತೆ ಗಲಾಟೆ ಮಾಡಿ ಬೆದರಿಕೆ ಹಾಕಿದ್ದ ಬಿಡದಿಯ ಖಾಸಗಿ ಮೈಕ್ರೋಫೈನಾನ್ಸ್ ಶಾಖಾ ವ್ಯವಸ್ಥಾಪಕನನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೂನಮುದ್ದನಹಳ್ಳಿಯ ಮಹಿಳೆ ಯೊಬ್ಬರು ಕಿರುಕುಳದ ಆರೋಪ ಮಾಡಿ ರಘು ಎಂಬುವವರ ವಿರುದ್ಧ ದೂರು ನೀಡಿದ್ದರು.

ಮೈಸೂರು, ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಹೆಚ್ಚಿದೆ. ಜನರಿಗೆ ಕಿರುಕುಳ ನೀಡುತ್ತಿರುವ ಆರೋಪವಿದೆ. ಜನರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ದಂಧೆ ನಡೆಸುವ ಸಂಸ್ಥೆಯ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು. | ಸಿದ್ದರಾಮಯ್ಯ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net