ತ್ರಿಲೋಕ ಸುಂದರಿ ಸೀತೆಯ ವಿವಾಹಕ್ಕೆ ಶಿವಧನುಸ್ಸಿನ ಸ್ಪರ್ಧೆ

1
Published on
ಅನಂತ ವೈದ್ಯ, ಯಲ್ಲಾಪುರ

‘ಬ್ರಹ್ಮಶ್ರೀ ವಿಶ್ವಾಮಿತ್ರರೇ! ಭೂಮಿಯಲ್ಲಿ ಉತ್ಪನ್ನಳಾಗಿ, ಪ್ರವರ್ಧಮಾನಳಾಗುತ್ತಿರುವ, ನನ್ನ ಮಗಳಾದ ಸೀತೆಯು ಅಪ್ರತಿಮ ಸುಂದರಿ! ಅವಳನ್ನು ಮದುವೆ ಮಾಡಿಕೊಡೆಂದು ಅನೇಕ ರಾಜರು ನನ್ನ ಬಳಿಗೆ ಬಂದು ಪ್ರಸ್ತಾಪಿಸಿದರು. ಅವರೆಲ್ಲರಿಗೂ ನನ್ನದೊಂದೇ ಮಾತು. ಇವಳು ವೀರ್ಯಶುಲ್ಕಳು. ಅತುಲ ಪರಾಕ್ರಮವಿರುವವನಿಗೆ ಮಾತ್ರವೇ ನಾನಿವಳನ್ನು ಮದುವೆ ಮಾಡಿಕೊಡುವೆನು ಎಂದು ಹೇಳಿದೆನು. ವೀರ್ಯಶುಲ್ಕವೆಂದರೆ ಶಿವಧನುವನ್ನು ಯಾರು ಗ್ರಹಣ ಹಿಡಿಯುವುದು, ಧಾರಣ -ಧರಿಸುವುದು, ಶಿಂಜನಿ ಬಂಧನ -ದಾರವನ್ನು ಮೇಲೆ-ಕೆಳಗೆ ಕಟ್ಟುವುದು, ತೋಲನ -ಎತ್ತುವುದು ಮತ್ತು ಶರಸಂಯೋಜನ, ಆರೋಪಣ -ಹೆದೆ ಏರಿಸುವುದು ಮಾಡುತ್ತಾರೋ ಅವರಿಗೆ ಮಗಳನ್ನು ಧಾರೆಯೆರೆಯುವುದು ಎಂದು ಸೀರಧ್ವಜನು ಹೇಳಿದನು. ಅಸುರ-ರಾಕ್ಷಸರು, ಗಂಧರ್ವ-ಯಕ್ಷಪ್ರಮುಖರು, ಕಿನ್ನರ-ಮಹೋರಗರೂ ಇವರ್ಯಾರಿಂದಲೂ ಈ ಶಿವವಧನಸ್ಸನ್ನು ಹಿಡಿದುಕೊಳ್ಳಲು, ಮೇಲೆತ್ತಲು, ಅಲುಗಾಡಿಸಲು ಆಗಲಿಲ್ಲ! ಅಲ್ಪ ಪರಾಕ್ರಮಿಗಳೆಂದು ಅವರಿಗೆಲ್ಲ ಸೀತೆಯನ್ನು ಕೊಡಲಾಗುವುದಿಲ್ಲ ವೆಂದು ಕಳುಹಿಸಿದೆ. ಇದರಿಂದ ಅವರಿಗೆ ಅತ್ಯುಗ್ರ ಕೋಪವೇ ಬಂದಿತು. ಕುಪಿತರಾದ ಲೋಕದ ರಾಜರೆಲ್ಲರೂ ತಮ್ಮ ಪರಾಕ್ರಮ ವನ್ನು ತೋರಿಸಲೇಬೇಕೆಂದು ಮಿಥಿಲಾ ಪಟ್ಟಣವನ್ನು ಮುತ್ತಿದರು.

ಒಂದು ವರ್ಷದ ದೀರ್ಘವಾದ ಯುದ್ಧದಲ್ಲಿ ದುರ್ಗರಕ್ಷಣೆಯ ಸಾಧನಗಳೆಲ್ಲವೂ ನಾಶವಾದವು. ಇದರಿಂದ ನನಗೆ ಬಹಳ ದುಃಖವಾಯಿತು. ಆಗ ನಾನು ದೇವತೆಗಳನ್ನು ಕುರಿತು ತಪಸ್ಸನ್ನು ಮಾಡಿದೆನು. ಸುಪ್ರೀತರಾದ ದೇವತೆಗಳು ನಾಶವಾದ ನನ್ನ ಚತುರಂಗ ಬಲವನ್ನು ದಯಪಾಲಿಸಿದರು. ದೇವತೆಗಳು ನೀಡಿದ ಚತುರಂಗ ಬಲದ ಮುಂದೆ ನಿಲ್ಲಲಾಗದೇ, ಮಿಥಿಲೆಯನ್ನು ಆಕ್ರಮಿಸಿದ ರಾಜರುಗಳೆಲ್ಲರೂ ಸೋತುಹೋದರು.

ಸುವ್ರತರೇ! ಈ ಧನುಸ್ಸನ್ನು ರಾಮ-ಲಕ್ಷ್ಮಣರಿಗೆ ತೋರಿಸುತ್ತೇನೆ. ಒಂದು ವೇಳೆ ರಾಮನು ಮಹಾಶಿವಧನಸ್ಸನ್ನು ಹೆದೆ ಏರಿಸಿದರೆ ನನ್ನ ಮಗಳು ಸೀತೆಯನ್ನು ದಶರಥಸುತನಾದ ರಾಮನಿಗೆ ಮದುವೆ ಮಾಡಿ ಕೊಡುತ್ತೇನೆ.’ ವಿಶ್ವಾಮಿತ್ರರು, ‘ಮಹಾರಾಜ, ಶಿವಧನುವನ್ನು ತೋರಿಸು’ ಎಂದು ಆಜ್ಞಾಪಿಸಿದರು. ವಿಶ್ವಾಮಿತ್ರರ ಆದೇಶದಂತೆ ಜನಕರಾಜನು ಸಚಿವೋತ್ತಮರೇ! ಗಂಧ-ಮಾಲ್ಯಾದಿಗಳಿಂದ ಅಲಂಕೃತವಾಗಿರುವ ಧನಸ್ಸನ್ನು ತೆಗೆದುಕೊಂಡು ಬನ್ನಿ ಎಂದು ಆಜ್ಞಾಪಿಸಿದನು. ಸಚಿವರು ಶಿವಧನಸ್ಸನ್ನು ತರಲು ಹೋದರು. ದೃಢಕಾಯರಾದ ಐದು ರಾಜಭಟರು ಎಂಟುಚಕ್ರಗಳಿಂದ ಕೂಡಿದ್ದ ಆ ಮಹಾಧನುಸ್ಸಿನ ಲೋಹದ ಪೆಟ್ಟಿಗೆಯನ್ನು ಕಷ್ಟಪಟ್ಟು ಎಳೆದು ತಂದರು. ಸಂದೂಕದಿಂದ ಶಿವಧನುವನ್ನು ತೆರೆಯಲಾಯಿತು.

‘ಮಹರ್ಷಿಗಳೇ! ಈ ಶಿವಧನುವನ್ನು ನೋಡಿ, ಸ್ಪರ್ಶಮಾಡಿದ ನಂತರ ಹೆದೆಗೇರಿಸ ಬೇಕೆಂದೆನಿಸುವುದು’ ಎಂದು ಶ್ರೀರಾಮನು ಹೇಳಿದನು. ಹಾಗೆಯೇ ಆಗಲಿ ಎಂದು ಮಹರ್ಷಿಗಳು ಒಪ್ಪಿದರು.

ಶಿವಧನುವಿನ ಭಂಜನ: ಸ್ವಯಂವರವು ಮೂರು ತೆರನಾಗಿ ನಡೆಯುತ್ತಿತ್ತು. ಒಂದು ಎಲ್ಲ ರಾಜರನ್ನೂ ಸೇರಿಸಿ ಕನ್ಯೆಗೆ ಮನಸ್ಸುಬಂದವರನ್ನು ಆರಿಸಿಕೊಳ್ಳಲು ಹೇಳುತ್ತಿದ್ದರು. ಇದಕ್ಕೆ ಉದಾಹರಣೆ ದಮಯಂತಿ! ಎರಡು, ಎಲ್ಲ ರಾಜರನ್ನು ಸೇರಿಸಿ ಅವರಲ್ಲಿ ಹೊಡೆದಾಡಿ ಗೆದ್ದವರಿಗೆ ಹೆಣ್ಣನ್ನು ಕೊಡಲಾಗುತ್ತಿತ್ತು. ಉದಾಹರಣೆ ಅಂಬೆ, ಅಂಬಿಕೆ, ಅಂಬಾಲಿಕೆ. ಮೂರು, ಒಂದು ಶಕ್ತಿಪ್ರದರ್ಶನಕ್ಕೆ ಗುರಿಯನ್ನಿಟ್ಟು ಸ್ಪರ್ಧೆಯನ್ನು ನೀಡಿ ಗೆದ್ದವನಿಗೆ ವಿವಾಹ ಮಾಡುವುದು. ಉದಾಹರಣೆಗೆ ಮತ್ಸ್ಯಯಂತ್ರವನ್ನಿಟ್ಟು ದ್ರೌಪದಿಗೆ ವಿವಾಹ ಮಾಡಲಾಯಿತು.

ಸೀತಾ ವಿವಾಹಕ್ಕಾಗಿ ಶಿವಧನುವನ್ನು ಎತ್ತುವುದೇ ಪಣ. ರಾವಣ ಸೀತೆಯ ವಿವಾಹಕ್ಕೆ ಬಂದುದನ್ನು ವಾಲ್ಮೀಕಿಗಳು ಹೇಳುವುದಿಲ್ಲ! ಆದರೆ ಅಸುರ-ರಾಕ್ಷಸರು ಬಂದರು ಎನ್ನುವಲ್ಲಿ, ಒಂದು ವರ್ಷ ಯುದ್ಧನಡೆದುದು, ದೇವಸೈನ್ಯವನ್ನು ಬಂದುದನ್ನು ಉಲ್ಲೇಖಿಸಿ.... ನಾವು ಆಲೋಚಿಸುವಂತೆ ಮಾಡುತ್ತಾರೆ. ರಾಮನಿಗಿಂತ ಆರು ತಲೆಮಾರು ಹಿಂದಿನ ಅನರಣ್ಯನೆಂಬ ಸೂರ್ಯವಂಶದ ಅರಸನನ್ನು ರಾವಣನು ಕೊಂದುದನ್ನು ಪ್ರಸ್ತಾಪಿಸುವರು. ಆದರೆ ಯಕ್ಷಗಾನ ಮತ್ತು ಉಳಿದ ಕೆಲವು ರಾಮಾಯಣಗಳಲ್ಲಿ ರಾವಣನು ಬಂದ ಬಗ್ಗೆ ಉಲ್ಲೇಖವಿದೆ. ರಾವಣನು ಶಿವಧನುವನ್ನು ಎತ್ತಲಾಗದೇ ಶಿವಧನುವನ್ನೇ ಮೈಮೇಲೆ ಕೆಡವಿಕೊಂಡು, ಅವಮಾನಿತನಾಗುವನು. ವಾಂತಿಮಾಡಿಕೊಂಡನು ಎಂಬ ಕಥೆ ಬರುವುದು. ರಾವಣನ ಪುಷ್ಪಕವಿಮಾನದ ಉಪಮೆ ನೀಡುವರು. (ರಾ.ಬಾ.70.)

ವಿಶ್ವಾಮಿತ್ರ ಮತ್ತು ಜನಕರು ಒಮ್ಮೆಲೇ ತಥಾಸ್ತು ಎಂದು ಹೇಳಿದ ಮೇಲೆ ರಾಮನು ಶಿವಧನುವನ್ನು ನೋಡಿದನು. ಶ್ರೀರಾಮನು ಪೆಟ್ಟಿಗೆಯಲ್ಲಿದ್ದ ಧನುಸ್ಸಿನ ಮಧ್ಯಭಾಗವನ್ನು ಹಿಡಿದು ನಗು-ನಗುತ್ತಲೇ ಮೇಲೆತ್ತಿದನು. ಸಾವಿರಾರು ಜನರು ನೋಡುತ್ತಿದ್ದಂತೆಯೇ ರಘುನಂದನನು ಮಹಾಧನುಸ್ಸಿನ ಒಂದು ತುದಿಯಲ್ಲಿದ್ದ ಶಿಂಜನಿಯನ್ನು ಮತ್ತೊಂದು ತುದಿಗೆ ಕಟ್ಟಲು ಮೌರ್ವಿಯನ್ನು ಲೀಲೆಯಿಂದ ಸೆಳೆದನು. ನರಶ್ರೇಷ್ಠನಾದ ವೀರ್ಯವಂತನಾದ ರಾಮನು ಮೌರ್ವಿಯನ್ನು ಸೆಳೆದು ಕಟ್ಟಿ ಎಳೆದಾಗ ಆ ಧನಸ್ಸು ಮಧ್ಯ ಭಾಗಕ್ಕೆ ಮುರಿದು ಕೆಳಗೆ ಬಿದ್ದಿತು. ಆ ಮಹಾಧನಸ್ಸಿನ ಭಂಜನದಿಂದ ಭೂಕಂಪವಾಯಿತು. ಹಲವರು ಭಯ ಭ್ರಾಂತರಾಗಿ ಕೆಳಗೆ ಬಿದ್ದರು.

ಸೀತೆಯ ಬದುಕು ವಿಚಿತ್ರ. ಸೀತೆಗಾಗಿ ಜನಕನು ಎಲ್ಲವನ್ನೂ ಕಳೆದುಕೊಂಡುದನ್ನು ಮರೆಯಬಾರದು. ತಮ್ಮನ ಸಹಾಯದಿಂದ ಬದುಕಬೇಕಾದರೂ ಸೀತೆಗೆ ಒಂದು ಬಿರು ನುಡಿಯನ್ನೂ ಆಡಲಿಲ್ಲ!

(ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net