VIDEO: ರಸಗೊಬ್ಬರ ಕೊರತೆಯ ಸಮಸ್ಯೆ ಒಂದೆರಡು ದಿನಗಳಲ್ಲಿ ಪರಿಹಾರ

vijayavani-phonein
Published on

ಬೆಂಗಳೂರು: ಕಳೆದ ಮೂರ‌್ನಾಲ್ಕು ದಿನಗಳಿಂದ ರೈತರು ರಸಗೊಬ್ಬರ ಕೊರತೆ ಸಮಸ್ಯೆ ಎದುರಿಸುತ್ತಿದ್ದು, ಆ ತೊಂದರೆ ಎರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಭರವಸೆ ನೀಡಿದ್ದಾರೆ.

‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಫೋನ್ ಇನ್’ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ನೂರಾರು ರೈತರ ಕರೆಗಳಿಗೆ ಉತ್ತರಿಸಿದರು. ಕರೆ ಮಾಡಿದವರಲ್ಲಿ ಬಹುತೇಕ ರೈತರು ಯೂರಿಯಾ ರಸಗೊಬ್ಬರದ ಕೊರತೆಯ ಸಮಸ್ಯೆ ಕುರಿತು ಗಮನ ಸೆಳೆದರು.

ದೊಡ್ಡಬಳ್ಳಾಪುರದ ತೂಬಗೆರೆಯ ಮಂಜುನಾಥ್, ಪ್ರಸನ್ನ, ರಾಜಕುಮಾರ್, ಕಾರೇಪುರದ ಕೃಷ್ಣಮೂರ್ತಿ, ತ್ಯಾಮಗೊಂಡ್ಲುವಿನ ರಂಗನಾಥ್, ದೇವನಹಳ್ಳಿ ಬಳಿಯ ಸೋಮಕ್ಕನಹಳ್ಳಿಯ ಸುಬ್ಬರಾಯಪ್ಪ, ನಂದಗುಡಿಯ ಚೇತನ್‌ಕುಮಾರ್, ಲಕ್ಷ್ಮೀದೇವಿಪುರದ ಶಿವರಾಜ್ ಮುಂತಾದವರು ರಸಗೊಬ್ಬರ ಸಮಸ್ಯೆಯನ್ನು ಪ್ರಸ್ತಾಪಿಸಿದರು.

ಇದಕ್ಕೆ ಸ್ಪಂದಿಸಿದ ಜಯಸ್ವಾಮಿ ಅವರು, ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ. ಸಾಗಾಣಿಕೆಯಲ್ಲಿ ಸ್ವಲ್ಪ ವಿಳಂಬವಾಗಿರಬಹುದು. ಇಂದು ಮತ್ತು ನಾಳೆ ಎರಡು ರೇಕು ರಸಗೊಬ್ಬರ ಬರಲಿರುವ ಕಾರಣ ಸಮಸ್ಯೆ ಇರುವುದಿಲ್ಲ. ಅಲ್ಲದೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು. ಕೆಲವೆಡೆ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟವಾಗುತ್ತಿರುವ ಬಗ್ಗೆ ರೈತರೊಬ್ಬರು ಪ್ರಸ್ತಾಪಿಸಿದಾಗ, ನಿರ್ದಿಷ್ಟ ಸ್ಥಳ ತಿಳಿಸಿದರೆ ಅನಿರೀಕ್ಷಿತ ದಾಳಿ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಫೋನ್‌ಇನ್‌ನಲ್ಲಿ ಪಾಲ್ಗೊಂಡಿದ್ದ ಹಿರಿಯ ವಿಜ್ಞಾನಿ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎ.ಪಿ. ಮಲ್ಲಿಕಾರ್ಜುನ ಮಾತನಾಡಿ, ಯೂರಿಯಾ ಕಡಿಮೆ ಬೆಲೆಗೆ ಸಿಗುವ ಕಾರಣ ಕೆಲವು ರೈತರು ಅದನ್ನೇ ಹೆಚ್ಚು ಬಳಸುತ್ತಾರೆ. ಅದರಿಂದ ಗಿಡಗಳ ಬೆಳವಣಿಗೆ ಚೆನ್ನಾಗಿ ಆದರೂ ಇಳುವರಿ ಕಡಿಮೆಯಾಗುತ್ತದೆ. ರೋಗ, ಕೀಟಬಾಧೆಯೂ ಹೆಚ್ಚಾಗುತ್ತದೆ. ಆದ್ದರಿಂದ ಯಾರೂ ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಸಬಾರದು ಎಂದು ಸಲಹೆ ನೀಡಿದರು.

ಬೆಳೆ ವಿಮೆ ಕ್ಲೇಮುಗಳ ಇತ್ಯರ್ಥ ವಿಳಂಬ, ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿರುವ ತೊಂದರೆ ಮುಂತಾಗಿ ಅನೇಕ ವಿಷಯಗಳ ಕುರಿತು ರೈತರು ಕೇಳಿದ ಪ್ರಶ್ನೆಗಳಿಗೆ ಫೋನ್‌ಇನ್‌ನಲ್ಲಿ ಸಮಾಧಾನಕರ ಉತ್ತರ ದೊರೆಯಿತು. ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ ಉಪಸ್ಥಿತರಿದ್ದರು. ಫೋನ್‌ಇನ್‌ನ ವಿಸ್ತೃತ ವರದಿ ‘ವಿಜಯವಾಣಿ’ ಬೆಂಗಳೂರು ನಗರ ಮತ್ತು ಗ್ರಾಮಾಂತರ ಆವೃತ್ತಿಗಳಲ್ಲಿ ಶನಿವಾರ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net