ನುಡಿದೀಪ: ಭಗವಂತನನ್ನು ನಿಜವಾಗಿ ಅರಿಯುವವರು ಯಾರು?

5466
Published on
ಪರಬ್ರಹ್ಮನನ್ನು ಖಚಿತವಾಗಿ, ಸ್ಪಷ್ಟವಾಗಿ ಅರಿಯುವವರು ಅತಿ ವಿರಳ. ಪ್ರಾಪಂಚಿಕ ಜ್ಞಾನದಲ್ಲಿಯೇ ಮುಳುಗಿ ದೇಹ ಸುಖವೇ, ಇಂದ್ರಿಯ ಸುಖವೇ, ಭೋಗಿಸುವುದೇ ಜೀವನದ ಸರ್ವಸ್ವ ಎಂದು ಅಚಲವಾದ ನಂಬಿಕೆಯಿಂದ ಅಧ್ಯಾತ್ಮದ ಲವಶೇಷವನ್ನು ಅರಿಯದ ಮನುಜರೇ ಅಧಿಕ. ಇಂತಹ ವಿಚಿತ್ರ ಸ್ಥಿತಿಯಲ್ಲಿ ಭಗವದ್ ಶಕ್ತಿ, ಪರಬ್ರಹ್ಮ ವಸ್ತು, ಬ್ರಹ್ಮಾನಂದ, ಪ್ರೇಮಾನಂದ, ಪರಮಾನಂದ ಎಂಬೀ ವಿಚಾರಗಳನ್ನು ಹೇಗೆ ತಾನೆ ಬಲ್ಲರು? ನಿಜಕ್ಕೂ ಈ ಜಗತ್ತಿನಲ್ಲಿ ದಿನೇ ದಿನೇ ಬದಲಾಗುತ್ತಿರುವ ವಿಚಾರವೆಂದರೆ ಅದು ಧರ್ಮ, ಆಚರಣೆ, ಸಂಸ್ಕೃ, ಪರಂಪರೆ ಇತ್ಯಾದಿ. ಅದೊಂದು ಕಾಲವಿತ್ತು, ಸಂಜೆಯಾಗುತ್ತಿದ್ದಂತೆ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಮಂದಿರಗಳಲ್ಲಿ ಹರಿಕಥಾ ಶ್ರವಣ, ಭಾಗವತ, ರಾಮಾಯಣ, ಭಗವದ್ಗೀತೆಗಳ ಪ್ರವಚನ, ಹಿರಿಯರು, ಬುದ್ದಿಜೀವಿಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರತಿನಿತ್ಯ ಧಾರ್ವಿುಕ ಸಭೆಗಳಲ್ಲಿ ಭಾಗವಹಿಸಿ ತಮ್ಮ ಜೀವನ ಸಂಧ್ಯೆಯನ್ನು ಅರ್ಥಪೂರ್ಣವಾಗಿ ಕಳೆಯುತ್ತಿದ್ದರು.

ಸಂಸಾರದಲ್ಲಿಯೂ, ಸಮಾಜದಲ್ಲಿಯೂ ಪವಿತ್ರ ಹಾಗೂ ಭಾವನಾತ್ಮಕ ಸಂಬಂಧಗಳ ಅದ್ಭುತ ವಾತಾವರಣವಿರುತ್ತಿತ್ತು. ಇದಕ್ಕೆಲ್ಲಾ ಮೂಲವೇ ಭಗವದ್ ಚಿಂತನೆ. ಎಲ್ಲದಕ್ಕಿಂತ ಮಿಗಿಲಾಗಿ ಭಗವದ್ ಶಕ್ತಿಯ ಬಗ್ಗೆ ಸಮಾಜದಲ್ಲಿರುವವರಿಗೆ ಅರಿವಿತ್ತು. ಹಾಗಾಗಿ ಜೀವನಶೈಲಿಯೇ ಅದ್ಭುತವಾಗಿತ್ತು. ಈ ಎಲ್ಲದರ ಹಿಂದೆ ಮನುಷ್ಯನ ಮಾನಸಿಕ ಸ್ಥಿತಿಯಂತೂ ಅದ್ಭುತವಾಗಿತ್ತು. ಇಂತಹ ಪರಿಸರದಲ್ಲಿ ಸಾಧಕರು, ಭಗವದ್ಭಕ್ತರು, ನೀತಿವಂತರು, ಸುಲಭವಾಗಿ ಭಗವಂತನನ್ನು ಅರಿಯಲು, ಸಾಕ್ಷಾತ್ಕಾರ ಪಡಿಸಿಕೊಳ್ಳಲು ಸಾಧ್ಯವಿತ್ತು. ಇಂದು ಎಲ್ಲೆಲ್ಲಿಯೂ ದ್ವೇಷ, ಅಸೂಯೆ, ಹೃದಯವಂತಿಕೆಯ ಪೂರ್ಣ ಕೊರತೆ ಕಾಡುತ್ತಿದೆ.

ಪರಮಹಂಸ ಶ್ರೀರಾಮಕೃಷ್ಣರು ಭಗವಂತನ ಬಗ್ಗೆ, ಭವತಾರಿಣಿಯ ಬಗ್ಗೆ ಭೋಧಿಸುತ್ತಿರುವ ಸಂದರ್ಭದಲ್ಲಿ ಒಂದು ಸೊಗಸಾದ ಉದಾಹರಣೆ ನೀಡುತ್ತಾರೆ: ಒಬ್ಬ ಶ್ರೀಮತ ತನ್ನ ಆಳಿಗೆ ಒಂದು ವಜ್ರವನ್ನು ಕೊಟ್ಟು ಸಂತೆಗೆ ತೆಗೆದುಕೊಂಡು ಹೋಗಿ, ಯಾರು ಯಾರು ಎಷ್ಟು ಬೆಲೆ ಕಟ್ಟುತ್ತಾರೆ ಎಂಬುದನ್ನು ವಿಚಾರಿಸು. ಮೊದಲು ಬದನೆಕಾಯಿ ಮಾರುವವನ ಹತ್ತಿರ ಹೋಗು ಎಂದನು. ಆಳು ಬದನೆಕಾಯಿ ಮಾರುವವನ ಹತ್ತಿರ ಹೋದ, ಅವನು ಆ ವಜ್ರವನ್ನು ನೋಡಿ, ಇದಕ್ಕೆ ನಾನು ಐದು ಸೇರು ಬದನೆಕಾಯಿ ಕೊಡುತ್ತೇನೆ ಎಂದ. ಆಳು ಹತ್ತು ಸೇರನ್ನು ಕೊಡುವೆಯಾ? ಎಂದನು. ಬದನೆಕಾಯಿ ಮಾರುವವನು, ಇಲ್ಲಿ ನಾನು ಅಂಗಡಿಯಲ್ಲಿ ಎಷ್ಟು ಕೊಡುತ್ತಾರೋ ಅದಕ್ಕಿಂತ ಹೆಚ್ಚು ಹೇಳಿರುವೆನು ಎಂದನು. ಆಳು ನಕ್ಕು ತನ್ನ ಯಜಮಾನನ ಬಳಿಗೆ ಹೋಗಿ ಹೇಳಿದ: ಮಹಾಶಯ, ಅವನು ಒಂಭತ್ತು ಸೇರು ಬದನೆಕಾಯಿ ಕೊಡುತ್ತೇನೆ, ಅದಕ್ಕಿಂತ ಜಾಸ್ತಿ ಕೊಡಲಾಗುವುದಿಲ್ಲ, ನಾನು ಆಗಲೇ ಜಾಸ್ತಿ ಹೇಳಿರುವೆನು ಎಂದನು.

ಯಜಮಾನ ನಕ್ಕು ಈಗ ಬಟ್ಟೆಯ ವ್ಯಾಪಾರಿಯ ಬಳಿಗೆ ತೆಗೆದುಕೊಂಡು ಹೋಗು ಎಂದ. ಆಳು ಬಟ್ಟೆ ವ್ಯಾಪಾರಿ ಬಳಿಗೆ ಹೋದಾಗ ವ್ಯಾಪಾರಿ, ಇದು ಚೆನ್ನಾಗಿದೆ. ಇದರಿಂದ ಒಳ್ಳೆಯ ಒಡವೆಯನ್ನು ಮಾಡಬಹುದು. ನಾನು ನಿನಗೆ ಇದಕ್ಕೆ ಒಂಬೈನೂರು ರೂಪಾಯಿಯನ್ನು ಕೊಡುತ್ತೇನೆ ಎಂದ. ಆಳು ಒಂದು ಸಾವಿರವಾದರೂ ಕೊಟ್ಟರೆ, ನಿನಗೇ ಇದನ್ನು ಮಾರುತ್ತೇನೆ ಎಂದ. ಬಟ್ಟೆ ವ್ಯಾಪಾರಿ, ಅದಕ್ಕಿಂತ ಜಾಸ್ತಿ ಕೇಳಬೇಡ. ಪೇಟೆ ಧಾರಣೆಗಿಂತ ಹೆಚ್ಚನ್ನೇ ನಾನು ಹೇಳಿರುವೆ. ಅದಕ್ಕಿಂತ ಒಂದು ರೂಪಾಯಿಯನ್ನೂ ಜಾಸ್ತಿ ಕೊಡಲಾರೆ. ಬೇಕಾದರೆ ತೆಗೆದುಕೋ, ಇಲ್ಲದೇ ಇದ್ದರೆ ಬಿಡು ಎಂದ. ನಗುತ್ತಾ ಆಳು ದಣಿಯ ಬಳಿಗೆ ಬಂದು ಹೇಳಿದ. ಇದನ್ನು ವಜ್ರಪಡಿ ವ್ಯಾಪಾರಿಯ ಹತ್ತಿರ ತೆಗೆದುಕೊಂಡು ಹೋಗಿ ಕೇಳು, ಅವನು ಎಷ್ಟು ಕೊಡುತ್ತಾನೆ ಎಂಬುದನ್ನು ನೋಡೋಣ ಎಂದ ಧಣಿ. ಆಳು ವಜ್ರ ಮಾರುವವನ ಬಳಿಗೆ ತೆಗೆದುಕೊಂಡು ಹೋದ. ವ್ಯಾಪಾರಿ ವಜ್ರವನ್ನು ನೋಡಿದ ತಕ್ಷಣವೇ ಇದಕ್ಕೆ ಒಂದು ಲಕ್ಷ ರೂಪಾಯಿಯನ್ನು ಕೊಡುತ್ತೇನೆ ಎಂದ.

ಹೀಗೆ ಪ್ರತಿಯೊಬ್ಬನೂ ಅವನವನ ಯೋಗ್ಯತೆಗೆ ತಕ್ಕಂತೆ ವಜ್ರದ ಬೆಲೆಯನ್ನು ಹೇಳುವರು. ಆದರೆ ಎಲ್ಲರಿಗೂ ಈ ಜಗತ್ತಿನಲ್ಲಿ ಅಖಂಡ ಸಚ್ಚಿದಾನಂದನನ್ನು ಅರಿಯಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ, ಆದರೆ ಯಾರು ಅಹರ್ನಿಶಿ ಭಗವಂತನನ್ನು ಶುದ್ಧ ಭಕ್ತಿ, ಶುದ್ಧ ಮನಸ್ಸು, ಶುದ್ಧ ಹೃದಯದಿಂದ ನೆನೆಯುವನೋ ಆತನಿಗೆ ಭಗವದ್ದ ರ್ಶನ ಸಾದ್ಯ! ಬಾಹ್ಯದ ವಿಚಾರಗಳು ಹಾಗೂ ಪ್ರಾಪಂಚಿಕ ಆಸೆ ಲಾಲಸೆಗಳು ಅವನ ಬಳಿ ಸುಳಿಯುವುದಿಲ್ಲ. ಇಡೀ ಜಗತ್ತೇ ಅವನ ದೃಷ್ಟಿಯಲ್ಲಿ ಭವತಾರಿಣಿಯ ಲೀಲಾ ಸ್ಥಾನದಂತೆ ಗೋಚರಿಸುತ್ತದೆ. ಇವರೆೇ ನಿಜ ಅರ್ಥದಲ್ಲಿ ಭಗವಂತನ ಸ್ವರೂಪವನ್ನು ಬಲ್ಲವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net