

ಸಂನ್ಯಾಸಿಗಳೊಬ್ಬರು ಊರನ್ನು ಪ್ರವೇಶಿಸಿದರು. ಪ್ರಶಾಂತವಾದ ಮುಖಮಂಡಲ. ಕರುಣೆಯಿಂದ ಕೂಡಿದ ಮೃದುಮಧುರದೃಷ್ಟಿ ಅವರದು. ಆದರೆ ಅವರು ಯಾರಿಂದಲೂ ಏನನ್ನೂ ಬಯಸಿದವರಲ್ಲ. ಹೊಳೆಯಲ್ಲಿ ಸ್ನಾನಮಾಡಿ, ಆಹ್ನಿಕಗಳನ್ನು ಮುಗಿಸಿ ಮರದ ಕೆಳಗೆ ಕುಳಿತು ಕಣ್ಮುಚ್ಚಿದರು. ಮಧ್ಯಾಹ್ನವಾದರೂ ಕದಲದೆ ತಪದಲ್ಲಿ ಮುಳುಗಿದರು. ಪಕ್ಕದಲ್ಲೇ ಬೇಸಾಯಗಾರನೊಬ್ಬ ವಾಸವಾಗಿದ್ದ. ಸಪರಿವಾರನಾಗಿ ಬಂದು ಭಕ್ತಿಶ್ರದ್ಧೆಗಳಿಂದ ಅವರಿಗೆ ನಮಸ್ಕರಿಸಿ ಫಲಾಹಾರಗಳನ್ನು ಸಮರ್ಪಿಸಿದ. ಸಾಧು ಕಣ್ತೆರೆದು ಒಮ್ಮೆ ಎಲ್ಲರನ್ನೂ ವೀಕ್ಷಿಸಿದರು. ಮತ್ತೆ ಕಣ್ಮುಚ್ಚಿ ಎತ್ತಿದ ಹಸ್ತರಾಗಿ ಆಶೀರ್ವದಿಸಿದರು. ಒಂದೆರಡು ಹಣ್ಣುಗಳನ್ನು ಸ್ವೀಕರಿಸಿ, ಉಳಿದವನ್ನು ಆತನಿಗೆ ಹಿಂತಿರುಗಿಸಿದರು. ಧನ್ಯತೆಯಿಂದ ಕುಟುಂಬವು ಪ್ರಸಾದವನ್ನು ಸ್ವೀಕರಿಸಿತು. ಅಂದಿನಿಂದ ಅವರು ಸಂನ್ಯಾಸಿಗಳ ಹೊಣೆಯನ್ನು ವಹಿಸಿ, ಅವರಿಗೆ ಗುಡಿಸಲನ್ನು ಕಟ್ಟಿಕೊಟ್ಟು ಅವರಿಗೆ ಬೇಕಾದ ಸಣ್ಣಪುಟ್ಟ ಸಹಾಯವನ್ನು ಮಾಡಿಕೊಡಲಾರಂಭಿಸಿದರು.
ಇದನ್ನು ಕಂಡ ಊರಿನವರೀರ್ವರು ಮಾತನಾಡಿಕೊಂಡರು. ‘ಲೋಕರೂಢಿಗಳನ್ನು ತ್ಯಜಿಸಿದ ಸಂನ್ಯಾಸಿಯಿವರು. ಬಂಧು-ಬಾಂಧವರು, ಮನೆ-ಮಠದ ಮೋಹವನ್ನು ಬಿಟ್ಟವನೇ ನಿಜವಾಗಲೂ ಶ್ರೇಷ್ಠ!’ ಮತ್ತೋರ್ವ ಒಪ್ಪಲಿಲ್ಲ. ‘ಸಂನ್ಯಾಸಿ ಜಗವನ್ನು ಬಿಟ್ಟ ಸರಿ. ಆದರೆ ಗೃಹಸ್ಥನಿಂದಲೇ ಸಂನ್ಯಾಸಿಗಳು ಉಳಿಯಲು ಸಾಧ್ಯ. ಗೃಹಸ್ಥನೇ ಸರ್ವಶ್ರೇಷ್ಠ!’ ಎಂದನು. ಇಬ್ಬರ ವಾದ ಕೊನೆಗಾಣಲಿಲ್ಲ. ಸಂನ್ಯಾಸಿಗಳನ್ನೇ ಕೇಳಿಬಿಡೋಣವೆಂದು ನಿರ್ಧರಿಸಿ ಅವರಬಳಿ ಹೋದರು. ಅವರ ಪ್ರಶ್ನೆಯನ್ನು ಕೇಳಿದ ಸಾಧುಗಳು ಮುಗುಳು ನಗೆಯನಕ್ಕರು. ‘ಇವರಿಬ್ಬರೂ ಶ್ರೇಷ್ಠರು, ಆದರೆ ಇವರಿಬ್ಬರೂ ಗೌಣರು’ ಎಂದರು. ಪ್ರಶ್ನಿಸಿದವರು ಇದೆಂತಹ ವಿಚಿತ್ರ ಉತ್ತರವೆಂದು ತಲೆಕೆರೆದುಕೊಂಡರು.
ನಿಸ್ವಾರ್ಥವಾಗಿ ತನ್ನ ಧರ್ಮವನ್ನು ನಿರ್ವಹಿಸಿದವನೇ ಶ್ರೇಷ್ಠ! ಯಾವೊಂದು ಕೆಲಸವನ್ನು ಮಾಡದಿದ್ದರೆ, ಪದಾರ್ಥದ ಅಸ್ತಿತ್ವವೇ ನಶಿಸುವುದೋ ಅದು ಧರ್ಮ. ಕಣ್ಣಿಗೆ ನೋಡುವ ಶಕ್ತಿ ನಶಿಸಿದರೆ, ಅದು ಕಣ್ಣಲ್ಲ, ಕೇಳದಿದ್ದರೆ ಕಿವಿಯಲ್ಲ. ಅಂತೆಯೇ ಪರಾತ್ಪರತತ್ತ್ವದಲ್ಲಿ ಸನ್ನ್ಯಸ್ಥವಾದ (ಮುಳುಗಿದ) ಮನಸ್ಸಿಲ್ಲದಿದ್ದರೆ, ಅವನು ಸಂನ್ಯಾಸಿಯಲ್ಲ. ಗೃಹವನ್ನು ಪೋಷಿಸದವನು ಗೃಹಸ್ಥನಲ್ಲ. ಬ್ರಹ್ಮವಸ್ತುವಿನಲ್ಲಿ ಮನಸ್ಸು ಚರಿಸದಿದ್ದರೆ, ಬ್ರಹ್ಮಚಾರಿಯಲ್ಲ. ಆದ್ದರಿಂದಲೇ ಆಯಾ ಕೃತ್ಯಗಳು ಅವರವರ ಧರ್ಮವೆಂದೆನಿಸಿಕೊಳ್ಳುತ್ತವೆ. ಬ್ರಹ್ಮಚರ್ಯದಲ್ಲಿ ಪಡೆದ ಬ್ರಹ್ಮಾನುಭವ, ಅದರ ಸೌಖ್ಯ ಸಂತೋಷಗಳನ್ನು ಇತರರೂ ಪಡೆಯಲೆಂಬ ಆಶಯದೊಂದಿಗೆ ಕಾರ್ಯಪ್ರವೃತ್ತನಾಗುವವನು ಗೃಹಸ್ಥ. ಅದಕ್ಕಾಗಿ ಯೋಗ್ಯವಾದ ಸಂತಾನ ಪಡೆಯುವುದು, ಪೋಷಿಸಿ ಬೆಳೆಸುವುದು ಅವನ ಧರ್ಮ. ತನ್ನ ಮಕ್ಕಳು ಮಾತ್ರವಲ್ಲದೆ ಪಶು, ಪಕ್ಷಿ, ವೃಕ್ಷ-ವನಸ್ಪತಿಗಳೇ ಮೊದಲಾದ ಜಗತ್ತಿನ ಪ್ರತಿಯೊಂದು ಜೀವ, ಪಶು, ಪ್ರಾಣಿಯಲ್ಲೂ ಜಗನ್ಮಾತಾ ಪಿತೃಗಳಂತೆ ವರ್ತಿಸುವುದು ಅವನ ಸಹಜ ಸ್ವಭಾವ. ಜ್ಞಾನದ ಹಾದಿಯಲ್ಲಿ ನಡೆವ ಸಂನ್ಯಾಸಿಗಳು, ಬ್ರಹ್ಮಚಾರಿಗಳೇ ಮುಂತಾದವರಿಗೆ ಸೂಕ್ತ ಭರಣೆಯನ್ನು ನೀಡುವುದು ಅವನಿಗೆ ವಿಶೇಷ ತೃಪ್ತಿಯನ್ನು ಉಂಟುಮಾಡುತ್ತದೆ. ಅಂತೆಯೇ ಜ್ಞಾನದಿಂದ ತುಂಬಿ ತುಳುಕುತ್ತಿರುವ, ಸನ್ನ್ಯಸ್ಥಮನಸ್ಕನಾದ ಸಂನ್ಯಾಸಿ-ಬೈರಾಗಿಯು, ಲೋಕವನ್ನು ತ್ಯಜಿಸಲೂ ಸಿದ್ಧನಾದವನು. ತನ್ನಲ್ಲಿರುವ ತಪಃಫಲ
ವನ್ನು ಆಶೀರ್ವಾದಗಳ ಮೂಲಕ ಉದಾರವಾಗಿ ವಿತರಿಸುವುದು ಸಹಜ ಸ್ವಭಾವ. ಆದ್ದರಿಂದಲೇ ಮೇಲಿನ ಕಥೆಯಲ್ಲಿ ಸ್ವಧರ್ಮವನ್ನು ಪಾಲಿಸಿದ್ದರಿಂದ ಸನ್ಯಾಸಿ-ಗೃಹಸ್ಥರಿಬ್ಬರೂ ಶ್ರೇಷ್ಠರು. ಆದರೆ ಅವರು ತಾವು ತಮ್ಮನ್ನು ಧರ್ಮದ ನಿರ್ವಾಹಕರಾಗಿ ನೋಡುತ್ತಿರುವುದ ರಿಂದ ಅವರಿಬ್ಬರಿಗಿಂತಲೂ ಸೃಷ್ಟಿ-ಸೃಷ್ಟೀಶನ ಧರ್ಮವೇ ಶ್ರೇಷ್ಠತಮ.
| ಡಾ.ಮೋಹನ ರಾಘವನ್
(ಲೇಖಕರು ಹೈದರಾಬಾದ್ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕರು)