ಮನೋಲ್ಲಾಸ| ಸತ್ಕರ್ಮದ ಅವಕಾಶ...

Shrikrishna
Published on

| ಚಿದಂಬರ ಮುನವಳ್ಳಿ

ದೇವ-ದಾನವರ ಯುದ್ಧದಲ್ಲಿ ದೇವತೆಗಳೆಲ್ಲ ಸೋಲನುಭವಿಸುವ ಪರಿಸ್ಥಿತಿ ಉಂಟಾಯಿತು. ದೇವತೆಗಳ ರಾಜ ಇಂದ್ರ ದೈತ್ಯರ ಹೊಡೆತ ತಾಳಲಾರದೆ ಕೊನೆಗೆ, ಶ್ರೀರಾಮನ ಪೂರ್ವಜ ಹಾಗೂ ಮಾಂಧಾತ ರಾಜನ ಪುತ್ರ ಮುಚಕುಂದನ ಹತ್ತಿರ ಹೋಗಿ ಸಹಾಯ ಯಾಚಿಸಿದ.

ಚಕುಂದ ದೇವತೆಗಳ ಸೈನ್ಯದ ನೇತೃತ್ವ ವಹಿಸಿಕೊಂಡು ಪರಾಕ್ರಮದಿಂದ ಯುದ್ಧ ಮಾಡಿ ದೈತ್ಯರನ್ನೆಲ್ಲ ಸೆದೆಬಡಿದ. ಇಂದ್ರ ಸಂತೋಷದಿಂದ ಕೃತಜ್ಞತೆ ಸೂಚಿಸುತ್ತ ಅವನಿಗೆ ‘ಏನು ವರ ಬೇಕು ಕೇಳು?’ ಎಂದ. ಮುಚಕುಂದ ವಿನಮ್ರತೆಯಿಂದ, ‘ಸಹಾಯ ಬೇಡಿ ಬಂದವರಿಗೆ ಅಭಯ ನೀಡುವ ನನ್ನ ಕ್ಷತ್ರಿಯ ಧರ್ಮ ಪಾಲಿಸಿದ್ದೇನೆ. ನನಗೆ ಏನೂ ಬೇಡ’ ಎಂದು ತನ್ನ ರಾಜ್ಯಕ್ಕೆ ಹೊರಡಲು ತಯಾರಾದ. ಆಗ ಇಂದ್ರ, ‘ಈಗ ಅಲ್ಲಿಗೆ ಹೋದರೆ ನಿನ್ನವರು ಯಾರೂ ಇರುವುದಿಲ್ಲ’ ಎಂದ. ಚಕಿತನಾದ ಮುಚಕುಂದ, ‘ಯಾಕೆ ನನ್ನ ರಾಜ್ಯಕ್ಕೆ ಅಂಥ ಸಂಕಟ ಏನು ಬಂದಿದೆ?’ ಎಂದು ಕೇಳಿದಾಗ, ‘ಏನೂ ಆಗಿಲ್ಲ. ನಮ್ಮ ದೇವಲೋಕದ ಕಾಲಗಣನೆಗೂ ಭೂಲೋಕದ ಕಾಲಗಣನೆಗೂ ವ್ಯತ್ಯಾಸ ಇರುವುದರಿಂದ ಇಲ್ಲಿಯ ಸ್ವಲ್ಪ ಅವಧಿಗೆ ಅಲ್ಲಿ ಎಷ್ಟೋ ವರ್ಷಗಳು ಗತಿಸಿ ಹೋಗಿರುತ್ತವೆ. ಈಗ ಅಲ್ಲಿ ನಿನ್ನ ಗುರುತು ಹಿಡಿಯುವವರು ಯಾರೂ ಇರುವುದಿಲ್ಲ’ ಎಂದ ಇಂದ್ರ. ‘ಹಾಗಾದರೆ ದೇವೇಂದ್ರನೇ ಮೋಕ್ಷದ ವರ ಕೊಟ್ಟು ಬಿಡು’ ಎಂದ. ಅದಕ್ಕೆ ಇಂದ್ರ, ‘ಅದನ್ನು ದಯಪಾಲಿಸುವ ಶಕ್ತಿ ಪರಮಾತ್ಮನಿಗೊಬ್ಬನೇ ಇರುವುದು. ಬೇರೆ ಏನಾದರೂ ಕೇಳು’ ಎಂದ. ‘ನಾನೀಗ ತುಂಬ ದಣಿದಿದ್ದೇನೆ. ಮಲಗಿ ವಿಶ್ರಾಂತಿ ಪಡೆಯಬೇಕಾಗಿದೆ’. ಇಂದ್ರನು ಭೂಲೋಕದಲ್ಲಿ ಸುರಕ್ಷಿತವಾದ ಗುಹೆಯಲ್ಲಿ ಅವನಿಗೆ ವ್ಯವಸ್ಥೆ ಮಾಡಿಸಿ, ‘ಯಾರಾದರೂ ನಿನ್ನ ನಿದ್ರಾಭಂಗ ಮಾಡಿದರೆ ನಿನ್ನ ದೃಷ್ಟಿಗೆ ಬಿದ್ದ ತಕ್ಷಣ ಅವರು ಸುಟ್ಟು ಬೂದಿಯಾಗುತ್ತಾರೆ’ ಎಂಬ ವರವನ್ನೂ ಕೊಟ್ಟ. ಯುಗಗಳೇ ಕಳೆದವು.

ಇತ್ತ ಮಗಧ ದೊರೆ ಜರಾಸಂಧನು ಕೃಷ್ಣ, ಬಲರಾಮರ ಸಾಮರ್ಥ್ಯದ ಎದುರು ಗೆಲ್ಲಲು ಸಾಧ್ಯವಾಗದಾದಾಗ ಕಾಲಯವನ ಎಂಬ ಕ್ರೂರರಾಜನ ಸ್ನೇಹ ಬೆಳೆಸಿದ. ಕಾಲಯವನ ಮಥುರೆ ಮೇಲೆ ಆಕ್ರಮಣ ಮಾಡಿದ. ಕಾಲಯವನನಿಗೆ ಯಾವ ಶಸ್ತ್ರಾಸ್ತ್ರಗಳಿಂದಲೂ ಸಾವು ಬಾರದ ಹಾಗೆ ವರವಿರುವುದನ್ನು ಅರಿತ ಶ್ರೀಕೃಷ್ಣ ಉಪಾಯ ಮಾಡಿ ಕಾಲಯವನನನ್ನು ಮಲ್ಲಯುದ್ಧಕ್ಕೆ ಆಹ್ವಾನಿಸಿ ಮುಚಕುಂದನು ಮಲಗಿದ ಗುಹೆಯೊಳಗೆ ಪ್ರವೇಶಿಸಿ ಅಂಗವಸ್ತ್ರವನ್ನು ಮುಚಕುಂದನ ಮೇಲೆ ಹೊದಿಸಿ ಮರೆಯಲ್ಲಿ ನಿಂತುಕೊಂಡ. ಸಿಟ್ಟಿನಿಂದ ಗುಹೆಯನ್ನು ಪ್ರವೇಶಿಸಿದ ಕಾಲಯವನ ‘ಮಲ್ಲಯುದ್ಧಕ್ಕೆ ಆಹ್ವಾನಿಸಿ ಇಲ್ಲಿ ಹೇಡಿಯಂತೆ ಬಂದು ಮಲಗಿರುವೆಯಾ ಕೃಷ್ಣಾ’ ಎಂದು ಮುಚಕುಂದನಿಗೆ ಒದೆಯಲು ಅವನಿಗೆ ಎಚ್ಚರವಾಗಿ ಕಣ್ಣು ತೆಗೆದು ನೋಡುವುದೇ ತಡ ಕಾಲಯವನ ಸುಟ್ಟು ಬೂದಿಯಾದ. ಶ್ರೀಕೃಷ್ಣ ತನ್ನ ದಿವ್ಯರೂಪದೊಂದಿಗೆ ಮುಚಕುಂದನ ಮುಂದೆ ಪ್ರತ್ಯಕ್ಷವಾಗಿ ಅವನ ಮೋಕ್ಷದ ಇಚ್ಛೆ ಪೂರ್ಣಗೊಳಿಗೊಳಿಸಿದ. ಒಂದು ಸತ್ಕರ್ಮದ ಫಲ ಮತ್ತೊಂದು ಲೋಕಕಲ್ಯಾಣ ಕೆಲಸವನ್ನು ಮಾಡಲು ಪ್ರೇರೇಪಿಸುತ್ತ ಭಗವತ್ ಪ್ರಾಪ್ತಿಯೆಡೆಗೆ ಕರೆದೊಯ್ಯುತ್ತದೆ. ಅಂಥ ಅವಕಾಶ ಬಂದಾಗ ಬಿಡಬಾರದು ಅಷ್ಟೆ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net