ಮನೋಲ್ಲಾಸ: ಪ್ರಾಮಾಣಿಕತೆಯ ಮಹತ್ವ

Chanakya-1
Published on
ವಿದ್ಯಾ ಜೋಶಿ

ಇತಿಹಾಸ ಪ್ರಸಿದ್ದ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಮಹಾ ಬುದ್ಧಿವಂತ, ಅಷ್ಟೇ ಅಲ್ಲ ಪ್ರಾಮಾಣಿಕ ಕೂಡ. ಒಮ್ಮೆ ಚಂದ್ರಗುಪ್ತ ಹಾಗೂ ಚಾಣಕ್ಯ ಜನರ ಕಷ್ಟ-ಸುಖ ಅರಿಯಲು ರಾತ್ರಿ ಹೊತ್ತು ವೇಷ ಬದಲಾಯಿಸಿ ಸಂಚಾರ ಹೊರಟರು. ಬಡಜನ ಚಳಿಯಿಂದ ನಡುಗುತ್ತಿರುವುದನ್ನು ನೋಡಿದ ರಾಜ ಇವರಿಗೆಲ್ಲ ಕಂಬಳಿ ಕೊಡುವ ವ್ಯವಸ್ಥೆ ಆಗಬೇಕು ಎಂದು ಚಾಣಕ್ಯನಿಗೆ ಹೇಳಿದ. ಆದೇಶದಂತೆ ಸಿದ್ಧವಾದ ಕಂಬಳಿಗಳನ್ನು ಚಾಣಕ್ಯನ ಮನೆಯಲ್ಲಿ ಇಡಲಾಯಿತು. ಮನೆ ಬಹಳ ಚಿಕ್ಕದಿರುವುದರಿಂದ ಅದರಲ್ಲಿಯೇ ಒಂದು ಕಡೆ ಕಂಬಳಿ ಜೋಡಿಸಲಾಗಿತ್ತು. ಇದನ್ನು ಗಮನಿಸಿದ ಕಳ್ಳರು, ರಾತ್ರಿ ಚಾಣಕ್ಯನ ಮನೆಗೆ ನುಗ್ಗಿ ಕಂಬಳಿಗಳನ್ನು ಕದಿಯಬೇಕೆಂದು ಯೋಚಿಸಿದರು.

ಆ ದಿನ ರಾತ್ರಿ ಚಾಣಕ್ಯನ ಮನೆ ಪ್ರವೇಶಿಸಿದ ಕಳ್ಳರಿಗೆ ಕಾಣಿಸಿದ್ದು ಜೋಡಿಸಿಟ್ಟ ಕಂಬಳಿಗಳು. ಅಲ್ಲೆ ಸ್ವಲ್ಪ ದೂರದಲ್ಲಿ ಚಾಣಕ್ಯ ಮತ್ತು ಅವನ ತಾಯಿ ಹರಕು ಕಂಬಳಿ ಹೊದ್ದು ಮುದುರಿ ಮಲಗಿದ್ದನ್ನು ಕಂಡು ಕಳ್ಳರಿಗೆ ಆಶ್ಚರ್ಯವಾಯ್ತು. ಹೊಸ ಕಂಬಳಿಗಳ ರಾಶಿಯೇ ಇಲ್ಲಿ ಬಿದ್ದಿರುವಾಗ ಇವರು ಅದನ್ನು ಹೊದೆಯದೆ ಮುದುಡಿ ಮಲಗಿದ್ದಾರೆ ಎಂದು ಯೋಚಿಸುತ್ತಾ ಕಳ್ಳರಿಗೆ ತಾವು ಬಂದ ಉದ್ದೇಶವೇ ಮರೆತು ಹೋಯ್ತು. ಹರಿದ ಕಂಬಳಿ ಹೊದ್ದು ಮಲಗಿದ ಕಾರಣವೇನಿರಬಹುದು ಎಂದು

ತಿಳಿಯುವ ಕುತೂಹಲ ಹೆಚ್ಚಾಗಿ ಕಳ್ಳರ ಯಜಮಾನ ಚಾಣಕ್ಯನನ್ನು ಎಬ್ಬಿಸಿ, ‘ಅಯ್ಯಾ ನಿಮ್ಮ ಮನೆಯಲ್ಲಿ ಕಂಬಳಿಗಳ ರಾಶಿಯೇ ಇದೆ. ಆದರೂ ಹೀಗೇಕೆ ಹರಿದುದನ್ನು ಹೊದ್ದು ಮಲಗಿದ್ದಿರಿ’ ಎಂದ. ಅದಕ್ಕೆ ನಸುನಕ್ಕ ಚಾಣಕ್ಯ, ‘ಅಯ್ಯಾ ಇದರಲ್ಲಿ ಒಂದನ್ನು ತೆಗೆದುಕೊಂಡಿದ್ದರೂ ನಾನು ಕೂಡ ನಿಮ್ಮಂತೆಯೆ ಆಗಿಬಿಡುತ್ತಿದ್ದೆ’ ಎಂದ. ಇದು ಕಳ್ಳರ ಯಜಮಾನನಿಗೆ ಅರ್ಥವಾಗಲಿಲ್ಲ. ‘ನನ್ನ ಬಳಿ ಹರಿದ ಕಂಬಳಿಯಾದರೂ ಇದೆ. ಇನ್ನು ಎಷ್ಟೋ ಜನರಿಗೆ ಏನೂ ಇಲ್ಲಾ ಅಂತ ರಾಜರು ಅವರಿಗಾಗಿ ಕಳಿಸಿರುವ ಕಂಬಳಿಗಳನ್ನು ಹೊದ್ದು ಮಲಗಿ ನಾನು ಕಳ್ಳನಾಗಲೇ? ’ಎಂದ ಚಾಣಕ್ಯ.

ಇದನ್ನು ಕೇಳಿದ ಕಳ್ಳರಿಗೆ ತಪ್ಪಿನ ಅರಿವಾಯ್ತು. ಕಳ್ಳತನದಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ನಮಗೆ ಅರಿವಾಗದೆ ಹೋಯಿತಲ್ಲ ಎಂದು ಪಶ್ಚಾತ್ತಾಪಪಟ್ಟು ಎಲ್ಲರೂ ಚಾಣಕ್ಯನಿಗೆ, ‘ನೀವು ನಮ್ಮ ಕಣ್ಣು ತೆರೆಸಿದಿರಿ, ಮುಂದೆಂದೂ ಕಳ್ಳತನ ಮಾಡುವುದಿಲ್ಲ’ ಎಂದು ನಮಸ್ಕರಿಸಿ ಹೊರಟು ಹೋದರು. ಚಾಣಕ್ಯನ ಪ್ರಾಮಾಣಿಕತೆಯ ನೈತಿಕ ಶಕ್ತಿ ಕಳ್ಳರ ಮನ ಪರಿವರ್ತನೆ ಮಾಡಿತು. ಮಾತು ಮತ್ತು ಕೃತಿ ಇವೆರಡರಲ್ಲಿ ಪ್ರಾಮಾಣಿಕತೆ ಇದ್ದು ಬದುಕು ಸಾಗಿಸಿದರೆ ಪರಮಾತ್ಮನನ್ನು ಕಂಡಂತೆಯೇ. ಪ್ರಾಮಾಣಿಕತೆಯು ಸುಖ ನೀಡದಿದ್ದರೂ ಕಷ್ಟ ಎದುರಿಸುವ ಶಕ್ತಿ, ಸರಳ ಜೀವನದ ಮಹತ್ವ ತಿಳಿಸುತ್ತದೆ. ಯಶಸ್ಸಿಗೆ ಸ್ಪೂರ್ತಿ ನೀಡುತ್ತದೆ. ಮನುಷ್ಯತ್ವವನ್ನು ಅಮೂಲ್ಯವಾಗಿಸುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net