

| ರಾಘವ ಶರ್ಮ ನಿಡ್ಲೆ ಮೌ (ಉತ್ತರ ಪ್ರದೇಶ)
ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ ಕಾಯ್ದೆ ಮೂಲಕ ಗೂಂಡಾಗಳ ಹೆಡೆಮುರಿ ಕಟ್ಟಿರುವುದು ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಪ್ರಚಾರ. ಜನರೂ ಗೂಂಡಾರಾಜ್ನಿಂದ ಮುಕ್ತಿ ಸಿಕ್ಕಿರುವ ಬಗ್ಗೆ ಇಲ್ಲಿ ಮಾತನಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ನಾಯಕರು ಭಾಷಣಗಳಲ್ಲಿ ಮಾಫಿಯಾಗಳೆಂದೇ ಕುಖ್ಯಾತಿಯಾಗಿದ್ದ ಮೂವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಷಾ ಪೂರ್ವ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಹರಯ್ಯಾ ವಿಧಾನಸಭೆ ಕ್ಷೇತ್ರದಲ್ಲಿ ರ‍್ಯಾಲಿ ನಡೆಸಿದ್ದ ವೇಳೆ, ‘ಭಯ್ಯಾ ಬೋಲೋ ಮುಖ್ತಾರ್ ಅನ್ಸಾರಿ ಕಹಾ ಹೈ? ಆಜಂ ಖಾನ್ ಕಹಾ ಹೈ? ಅತೀಕ್ ಅಹ್ಮದ್ ಕಹಾ ಹೈ..’? ಎಂದು ಜನರನ್ನು ಹುರಿದುಂಬಿಸಿದರು. ಇದಕ್ಕೆ ಉತ್ತರವೆಂಬಂತೆ ಜನರು, ‘ಜೈಲ್ ಮೇ ಹೈ’ ಎಂದರು. ಅದೇನಿದ್ದರೂ, ಮಾಫಿಯಾಗಳ ವಿಷಯದಲ್ಲಿ ಕಠಿಣ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆ ಕಾರಣಕ್ಕಾಗಿಯೇ ‘ಬುಲ್ಡೋಜರ್ ಬಾಬಾ’ ಎಂದೂ ಖ್ಯಾತಿಯಾಗಿದ್ದಾರೆ.
ಅನ್ಸಾರಿ, ಅಹ್ಮದ್ ಮತ್ತು ಆಜಂ ಖಾನ್ ಮೂವರೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ಗೆ ಆಪ್ತರಾಗಿದ್ದವರು ಮತ್ತು ಅಖಿಲೇಶ್ ಜತೆಗೂ ಒಡನಾಟ ಹೊಂದಿದ್ದರು. ಸಮಾಜವಾದಿ ಮುಖಂಡ, ಮಾಜಿ ಸಚಿವ ಆಜಂ ಖಾನ್ ಜೈಲಿನಲ್ಲಿದ್ದರೂ, ರಾಮ್ುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರ ಪುತ್ರ ಅಬ್ದುಲ್ಲಾ ಜಿಲ್ಲೆಯ ರಾಮ್ುರ ಸುವಾರ್ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಈ ಮಧ್ಯೆ, ವಾರಾಣಸಿಯಿಂದ 110 ಕಿಮೀ ಅಂತರದಲ್ಲಿರುವ ಮೌ ಜಿಲ್ಲೆಯ ಮೌ ಕ್ಷೇತ್ರದ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಈಗ ಜೈಲಿನಲ್ಲಿದ್ದಾರೆ. 1996ರಿಂದ ಮೌ ಕ್ಷೇತ್ರದಿಂದ ಸತತ 5 ಚುನಾವಣೆ ಗೆದ್ದಿರುವ ಅನ್ಸಾರಿ ಈ ಬಾರಿ ಪುತ್ರ 30 ವರ್ಷದ ಅಬ್ಬಾಸ್ ಅನ್ಸಾರಿಯನ್ನು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದಿಂದ (ಎಸ್ಬಿಎಸ್ಪಿ) ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಬಿಜೆಪಿಯಿಂದ ಅಶೋಕ್ ಸಿಂಗ್ ಸ್ಪರ್ಧಿಸಿದ್ದರೆ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಭೀಮ್ ರಾಜಭರ್ ಮತ್ತು ಕಾಂಗ್ರೆಸ್ನಿಂದ ಮಾಧವೇಂದ್ರ ಬಹಾದೂರ್ ಸಿಂಗ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪಿಂಚಣಿ ಸಿಗುತ್ತಿಲ್ಲ...: ಮೌ ಕ್ಷೇತ್ರದಲ್ಲಿ ಹಿಂದುಳಿದ ರಾಜಭರ್ ಮತ್ತು ಮುಸ್ಲಿಂ ಮತಗಳೇ ನಿರ್ಣಾಯಕ. ಮೌ ಪಟ್ಟಣದ ಬಲಿಯಾ ಮೋಡ್ನಲ್ಲಿ ಮಾತಿಗೆ ಸಿಕ್ಕ ವಿಧವಾ ಮಹಿಳೆ ಪರ್ವಿುದೇವಿ ರಾಜಭರ್ ಸಮಾಜಕ್ಕೆ ಸೇರಿದ್ದಾರೆ. ಪತಿ ನಿಧನಹೊಂದಿ 10 ವರ್ಷವಾಗಿದ್ದರೂ, ಆಕೆಗೆ ವಿಧವಾ ಪಿಂಚಣಿ ಸಿಗುತ್ತಿಲ್ಲ. ಪರ್ವಿುದೇವಿಯ ಅಂಗವಿಕಲ ಮಗಳಿಗೂ ಸರ್ಕಾರದ ಪಿಂಚಣಿ ಸಿಗುತ್ತಿಲ್ಲ. 7 ಮಕ್ಕಳ ತಾಯಿ ಪರ್ವಿುದೇವಿ ಪಕೋಡಾ ಮಾರುತ್ತ ಕುಟುಂಬ ನಡೆಸುತ್ತಿದ್ದಾರೆ. ‘ಅಡುಗೆಎಣ್ಣೆ ಬೆಲೆ ಏರಿಕೆಯಿಂದ ಪಕೋಡಾ ಮಾರಾಟದಲ್ಲಿ ಲಾಭಾಂಶ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುವ ಆಕೆ, ‘ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ಬೆಲೆಯೇರಿಕೆಗೆ ಕಡಿವಾಣ ಹಾಕಬೇಕು’ ಎನ್ನುತ್ತಾಳೆ.
ವಿಕಾಸ್ ದುಬೆ ಎನ್ಕೌಂಟರ್: ರಾಜ್ಯದ ಕುಖ್ಯಾತ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ರಾಜ್ಯ ಪೊಲೀಸರು ಎನ್ಕೌಂಟರ್ ಮಾಡಿದ್ದರಿಂದ ಬ್ರಾಹ್ಮಣರು ಸಿಟ್ಟಾಗಿದ್ದಾರೆ ಎಂಬ ಗ್ರಹಿಕೆ ರೂಪುಗೊಂಡಿತ್ತು. ಗ್ಯಾಂಗ್ಸ್ಟರ್ಗಳು ಠಾಕೂರ್ ಸಮಾಜದಲ್ಲಿದ್ದರೂ, ಸಿಎಂ ಆದಿತ್ಯನಾಥ ಬ್ರಾಹ್ಮಣ ಸಮುದಾಯದ ಗ್ಯಾಂಗ್ಸ್ಟರ್ಗಳನ್ನಷ್ಟೇ ಗುರಿ ಮಾಡಿದ್ದಾರೆ ಎನ್ನುವುದು ‘ಠಾಕೂರ್-ಬ್ರಾಹ್ಮಣರ’ ವೈಮನಸ್ಯಕ್ಕೂ ಕಾರಣವಾಗಿತ್ತು. ಅಯೋಧ್ಯೆಯಲ್ಲಿ ವಿಜಯವಾಣಿ ಜತೆ ಮಾತನಾಡಿದ ಠಾಕೂರ್ ಸಮಾಜದ ವ್ಯಾಪಾರಿ ಸಂಜಯ್ ಸಿಂಗ್, ‘ಯೋಗಿ ಬ್ರಾಹ್ಮಣರನ್ನು ಟಾರ್ಗೆಟ್ ಮಾಡಿದ್ದಾರೆಂಬ ಸಿಟ್ಟಿರುವುದು ನಿಜ. ಆದರೆ, ಠಾಕೂರ್-ಬ್ರಾಹ್ಮಣರೆಲ್ಲರೂ ಕೊನೆಗೆ ಬಿಜೆಪಿಯನ್ನೇ ಬೆಂಬಲಿಸುತ್ತಾರೆ’ ಎಂದರು. ಸೀತಾಪುರದಲ್ಲಿ ಸಿಕ್ಕ ಬ್ರಾಹ್ಮಣ ಸಮಾಜದ ಕೃಷಿಕರಾದ ಬಾಬುರಾಮ್ ಮಿಶ್ರಾ ಮತ್ತು ಮನೋಜ್ ಮಿಶ್ರಾ, ‘ಹತ್ತಾರು ಅಮಾಯಕರನ್ನು ಕೊಂದುಹಾಕಿದ ವಿಕಾಸ್ ದುಬೆಯನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದೇ ಸರಿಯಾದ ಕ್ರಮ. ಆತನ ಹತ್ಯೆ ಮಾಡಿದ್ದಕ್ಕೆ ಸಿಎಂ ಯೋಗಿ ಮೇಲೆ ಸಿಟ್ಟಾಗುವವರು ಮೂರ್ಖರು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂದಹಾಗೆ, ಉತ್ತರ ಪ್ರದೇಶದ ಅಪರಾಧ ಲೋಕದ ಮೊದಲ ದೊರೆ, ಕಾಂಗ್ರೆಸ್ ನಾಯಕ ಹರಿಶಂಕರ್ ತಿವಾರಿ. ಮುಖ್ತಾರ್ ಅನ್ಸಾರಿಯಂತೆ ಜೈಲಿನಿಂದಲೇ ಸ್ಪರ್ಧಿಸಿ ಚುನಾವಣೆ (1950ರ ದಶಕ) ಗೆದ್ದಿದ್ದರು.
ಓಂಪ್ರಕಾಶ್ ರಾಜಭರ್ ಪ್ರಭಾವ: ಪೂರ್ವ ಉತ್ತರ ಪ್ರದೇಶದಲ್ಲಿ ರಾಜಭರ್ ಎಂಬ ಹಿಂದುಳಿದ ಸಮುದಾಯದಲ್ಲಿ ಗುರುತಿಸಿಕೊಂಡಿರುವ, 2002ರಲ್ಲಿ ಸ್ಥಾಪನೆಯಾದ ಸುಹೇಲ್ ಭಾರತೀಯ ಸಮಾಜ ಪಾರ್ಟಿ 2017ರಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ 8 ಕ್ಷೇತ್ರಗಳಲ್ಲಿ 5 ಗೆದ್ದಿತ್ತು. ಪಕ್ಷದ ನಾಯಕ ಓಂ ಪ್ರಕಾಶ್ ರಾಜಭರ್ ಯೋಗಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು. 2019ರಲ್ಲಿ ಮೈತ್ರಿಕೂಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ ರಾಜಭರ್ರನ್ನು ಯೋಗಿ ಸಂಪುಟದಿಂದ ಕೈಬಿಡಲಾಗಿತ್ತು. ಹಾಲಿ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಜಭರ್, ವಾರಾಣಸಿ ಜಿಲ್ಲೆಯ ಜಹೂರಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಅನ್ಸಾರಿ ಮತ್ತು ಬೆಂಬಲಿಗರಿಂದ ಈಗಲೂ ಬೆದರಿಕೆಯಿದೆ ಎಂದು ಸಿಂಗ್ ಮನೆ ಮುಂದೆ ದೊಡ್ಡದಾದ ಗೋಡೆ ನಿರ್ವಣವಾಗಿದೆ. ಹತ್ತಾರು ಸಿಸಿಟಿವಿಗಳ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಸಿಂಗ್ ಹೋರಾಟದ ಬಗ್ಗೆ ಅನೇಕ ಸ್ಥಳೀಯರಿಗೆ ಕನಿಕರವಿದೆ. ಆದರೆ, ಅವರ ಪರ ಬಹಿರಂಗವಾಗಿ ಮಾತನಾಡಲು ಹೆದರುತ್ತಾರೆ. ಯೋಗಿ ಸಿಎಂ ಆದ ನಂತರ ಜನ ಮೆತ್ತಗೆ ಧ್ವನಿಯೆತ್ತಲು ಶುರುಮಾಡಿದಂತಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಅಶೋಕ್ ಸಿಂಗ್ಗೆ ಟಿಕೆಟ್ ನೀಡಿದ್ದು, ಅನುಕಂಪದ ಅಲೆಯಲ್ಲಿ ಗೆಲ್ಲಬಹುದು ಎಂದು ನಿರೀಕ್ಷಿಸಿದೆ. ಆದರೆ, ಕ್ಷೇತ್ರದಾದ್ಯಂತ ಭಾರೀ ಪ್ರಭಾವಳಿ ಸೃಷ್ಟಿಸಿಕೊಂಡಿರುವ ಅನ್ಸಾರಿ, ಕ್ಷೇತ್ರದ ಬಡವರಿಗೆ ನೆರವಾಗಿರುವುದು ಸುಳ್ಳಲ್ಲ. ಮೇಲಾಗಿ ಇಲ್ಲಿ ಮುಸಲ್ಮಾನ ಜನಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ ಮತ್ತು ಅನ್ಸಾರಿ ಪುತ್ರ ಹೊರತುಪಡಿಸಿ ಬೇರೆ ಯಾವುದೇ ಪಕ್ಷದಿಂದ ಮುಸಲ್ಮಾನ ಅಭ್ಯರ್ಥಿ ಕಣದಲ್ಲಿಲ್ಲ. ಹೀಗಾಗಿ, ಮುಸ್ಲಿಂ ಮತಗಳ ವಿಭಜನೆಯ ಆತಂಕವಿಲ್ಲ. ‘ಅನ್ಸಾರಿ ವಿರುದ್ಧ ಕೇಸುಗಳೇನೇ ಇದ್ದರೂ ಗೆಲ್ಲುತ್ತಿರುವುದು ಜನರಿಗೆ ನೆರವಾದ ಕಾರಣದಿಂದಲೇ’ ಎನ್ನುತ್ತಾರೆ ಮೌ ನಿವಾಸಿ ರಾಜೇಶ್ ಶರ್ಮ. ಪಿಎಂ ಮೋದಿ ಮತ್ತು ಸಿಎಂ ಯೋಗಿ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿದ ರಾಜೇಶ್, ಸ್ಥಳೀಯ ಮಟ್ಟದಲ್ಲಿ ನಮಗೆ ಅನ್ಸಾರಿಯವರೇ ಸೂಕ್ತ. ಅವರ ಮಗನಿಗೇ ಮತ ಎಂದರು.
ಅಧಿಕೃತ ದಾಖಲೆಗಳ ಪ್ರಕಾರ ಪೂರ್ವ ಉತ್ತರ ಪ್ರದೇಶದಲ್ಲೇ 44ಕ್ಕಿಂತಲೂ ಹೆಚ್ಚು ಕೇಸುಗಳು ಅನ್ಸಾರಿ ಮೇಲಿದ್ದು, ಬಹುತೇಕ ಹತ್ಯೆ ಪ್ರಕರಣಗಳೇ ಆಗಿವೆ. ಬೇರೆ ರಾಜ್ಯಗಳಲ್ಲೂ ಅನ್ಸಾರಿ ಮೇಲೆ ಮೊಕದ್ದಮೆ ದಾಖಲಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಬಿಎಸ್ಪಿ ನಾಯಕಿ ಮಾಯಾವತಿ ಅವರು 2010ರಲ್ಲಿ ಅನ್ಸಾರಿಯನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಆದರೆ, 2016ರ ವೇಳೆಗೆ, ಅನ್ಸಾರಿ ಯಾವುದೇ ತಪು್ಪ ಮಾಡಿಲ್ಲ ಎಂದಿದ್ದ ಮಾಯಾವತಿ 2017ರಲ್ಲಿ ಮೌ ಕ್ಷೇತ್ರದ ಟಿಕೆಟ್ ನೀಡಿದ್ದರು. ಈ ಬಾರಿ ಬಿಎಸ್ಪಿ ಟಿಕೆಟ್ ತಿರಸ್ಕರಿಸಿದ್ದರಿಂದ ಮಗನನ್ನು ಕಣಕ್ಕಿಳಿಸಿದ ಅನ್ಸಾರಿ ಜೈಲಿನಿಂದಲೇ ಪ್ರಚಾರ ರಣತಂತ್ರ ರೂಪಿಸಿದ್ದರು. ವಿಶೇಷ ಎಂದರೆ, ಕಳೆದ ಚುನಾವಣೆಯಲ್ಲಿ ಅನ್ಸಾರಿ ಪರ ಧೋರಣೆ ಹೊಂದಿದ್ದ ಬಿಎಸ್ಪಿ, ಈ ಬಾರಿ ಗ್ಯಾಂಗ್ಸ್ಟರ್ ಅನ್ಸಾರಿಯನ್ನು ಬೆಂಬಲಿಸಬೇಡಿ ಎಂದು ಜನರಲ್ಲಿ ಮತಯಾಚಿಸುತ್ತಿದೆ!