

ಕರೊನಾ ಸೋಂಕಿನ ತೀವ್ರತೆಯಿಂದ ಭಾರತ ದಿಗ್ಭಂಧನದಲ್ಲಿದೆ. ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಷೇರು ಮಾರುಕಟ್ಟೆ ಪಾತಾಳ ಕಂಡಿದೆ. ಮುಂದಿನ ದಿನಗಳು ಇನ್ನಷ್ಟು ಕಷ್ಟದಿಂದ ಕೂಡಿರಲಿವೆ ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಸಮಾಜಮುಖಿ ಸಂಘಸಂಸ್ಥೆಗಳು ನೆರವಿನ ಹಸ್ತ ಚಾಚಿದ್ದು, ಬಡವರಿಗೆ ಊಟ, ದಿನಸಿ ವಿತರಿಸುತ್ತಿವೆ. ಈ ಬಗೆಯ ಸ್ಪದನೆ ಈ ಹೊತ್ತಿನ ಅಗತ್ಯವೂ ಹೌದು. ಆದರೆ, ಎಂಥ ಕ್ಲಿಷ್ಟಕರ ಸನ್ನಿವೇಶ ಇದ್ದಾಗಲೂ ಅದರ ದುರ್ಲಾಭ ಪಡೆಯುವ, ಆ ಮೂಲಕ ಜನರನ್ನು ವಂಚಿಸುವ ಒಂದಿಷ್ಟು ಸಮಾಜವಿರೋಧಿ ಶಕ್ತಿಗಳು ಸದಾ ಸಕ್ರಿಯವಾಗಿ ಇರುತ್ತವೆ. ಇಂಥವರಿಗೆ ಈಗ ಕರೊನಾ ಕೂಡ ದುಡ್ಡು ಲಪಟಾಯಿಸುವ ದಂಧೆ ಆಗಿಬಿಟ್ಟಿದೆ.
‘ಅಗತ್ಯವಿದ್ದವರಿಗೆ ನೆರವು ನೀಡುತ್ತೇವೆ, ಇಂಥ ಖಾತೆಗೆ ಹಣ ಕಳಿಸಿ’ ಎಂದು ಹೇಳುವ, ಜನರ ಬ್ಯಾಂಕ್ ಖಾತೆಗಳ ವಿವರ ಕೇಳಿ, ಬಳಿಕ ಕನ್ನ ಹಾಕುವ ಕೆಲ ಜಾಲಗಳು ಸಕ್ರಿಯವಾಗಿವೆ. ಸೈಬರ್ ಅಪರಾಧದ ಮೂಲಕ ಅಮಾಯಕ ಜನರನ್ನು ವಂಚಿಸಲು ಇವು ಯತ್ನಿಸುತ್ತಿರುವುದರಿಂದ ಜನಸಾಮಾನ್ಯರು ಜಾಗೃತರಾಗಬೇಕಿದೆ. ಒಳ್ಳೆಯ ಉದ್ದೇಶಕ್ಕಾಗಿ ಸಹಾಯ ಮಾಡಲು ಹೋಗಿ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಈ ಹಿಂದೆ ಬರ, ನೆರೆಯ ಹೊತ್ತಲ್ಲೂ ಇಂಥ ಜಾಲಗಳು ನಕಲಿ ಪರಿಹಾರನಿಧಿ ಖಾತೆಗಳನ್ನು ಸೃಷ್ಟಿಸಿ, ಹಣ ಲಪಟಾಯಿಸಿದ ನಿದರ್ಶನಗಳಿವೆ ಎಂಬುದನ್ನು ಮರೆಯುವಂತಿಲ್ಲ. ಇಂಥವರ ಕೈಗೆ ಕರೊನಾ ಈಗ ಹೊಸ ಅಸ್ತ್ರವಾಗಿ ಸಿಕ್ಕಿದೆ. ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ ಕೂಡ. ಲಾಕ್ಡೌನ್ ಸಂಕಷ್ಟದಿಂದ ಮೂರು ತಿಂಗಳ ಇಎಂಐಗಳನ್ನು ಆರ್ಬಿಐ ಮುಂದೂಡಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ಹಣ ಲಪಟಾಯಿಸುವ ಸಾಧ್ಯತೆಗಳಿವೆ. ಹಾಗಾಗಿ, ಜನರು ಜಾಗ್ರತೆಯಿಂದ ವ್ಯವಹರಿಸಬೇಕು. ಸೈಬರ್ ವಂಚಕರು ಹೊಸ ತಂತ್ರಗಳನ್ನು ಬಳಸಲು ಹಾತೊರೆಯುತ್ತಿದ್ದಾರೆ. ಹಾಗಾಗಿ, ಒಟಿಪಿ, ಪಿನ್, ಸಿವಿಸಿ ನಂಬರ್ ಹಂಚಿಕೊಳ್ಳಬೇಡಿ. ಹಿಂದೆಮುಂದೆ ನೋಡದೆ ಪರಿಹಾರ ನಿಧಿಯೆಂದು ಯಾವುದೋ ಖಾತೆಗಳಿಗೆ ಹಣ ಹಾಕುವುದು ಸಲ್ಲ. ಸಂಸ್ಥೆಗಳ ಅಧಿಕೃತತೆ ಮತ್ತು ಅವು ನಿಜಕ್ಕೂ ಸಂತ್ರಸ್ತರಿಗೆ ಸಹಾಯ ಮಾಡುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡೇ ಮುಂದಿನ ಹೆಜ್ಜೆ ಇಡಿ. ಮಾಹಿತಿ ಲಭ್ಯತೆ ಸುಲಭವಾಗಿರುವ ಈ ದಿನ ಗಳಲ್ಲಿ ಅದನ್ನೇ ಅಸ್ತ್ರವಾಗಿಸಿಕೊಂಡು, ವಂಚನೆಯಿಂದ ಪಾರಾಗುವುದು ಜಾಣತನ.