ಸಂಪಾದಕೀಯ| ಸಮಗ್ರ ಚರ್ಚೆ ನಡೆಯಲಿ

Farmer
Published on

ರೈತರ ಆದಾಯವನ್ನು 2022ರ ಹೊತ್ತಿಗೆ ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು, ಹೊಸ ಕಾನೂನುಗಳನ್ನು ತರುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲವಾಗಿಸುವುದು, ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವುದು ಮತ್ತು ಕೃಷಿಕ್ಷೇತ್ರದಲ್ಲಿ ಮೂಲಸೌಕರ್ಯ ವಿಸ್ತರಿಸುವುದು ಸರ್ಕಾರದ ಉದ್ದೇಶವಾಗಿದೆ. ಭಾರತ ವಿಶಾಲ ರಾಷ್ಟ್ರವಾಗಿರುವುದರಿಂದ ಇಂಥ ಯಾವುದೇ ಸುಧಾರಣೆ ಅಥವಾ ಬದಲಾವಣೆ ತರುವ ಆಶಯ ಸುಲಭದಲ್ಲಿ ಈಡೇರುವುದಿಲ್ಲ. ದೇಶದ ಕೃಷಿರಂಗದಲ್ಲಿ ಪರಿವರ್ತನೆ ತರುವ ಮತ್ತು ರೈತರ ಆದಾಯ ಹೆಚ್ಚಿಸುವ ಮೂರು ಮಸೂದೆಗಳು ಈಗ ವಿವಾದ ಮತ್ತು ವಿರೋಧಕ್ಕೆ ಕಾರಣವಾಗಿರುವುದು ಇದಕ್ಕೆ ತಾಜಾ ನಿದರ್ಶನ.

ಕೃಷಿಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಹೆಚ್ಚು ಆಯ್ಕೆಗಳನ್ನು ನೀಡುವ ‘ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪೊ್ರೕತ್ಸಾಹ ಮತ್ತು ನೆರವು) ಮಸೂದೆ, 2020’, ಕೃಷಿ ವ್ಯವಹಾರಗಳಿಗೆ ರಾಷ್ಟ್ರೀಯ ಚೌಕಟ್ಟು ಒದಗಿಸುವ ‘ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020’ ಮತ್ತು ‘2020ರ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ’ಗೆ ಎನ್​ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವೇ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸಚಿವೆ ಹರ್​ಸಿಮ್ರತ್ ಕೌರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈ ಮೂರೂ ಮಸೂದೆಗಳು ಲೋಕಸಭೆಯ ಅಂಗೀಕಾರ ಪಡೆದುಕೊಂಡಿದ್ದು, ರಾಜ್ಯಸಭೆಯಲ್ಲಿ ಮುಂದಿನ ದಿನಗಳಲ್ಲಿ ಮಂಡನೆ ಆಗಲಿವೆ. ‘ಮಸೂದೆ ರೈತಪರವಾಗಿವೆ. ಆದರೆ, ಕೆಲವರು ರೈತರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

‘ಹೊಸ ಮಸೂದೆ ಎಪಿಎಂಸಿ ವ್ಯವಸ್ಥೆಯನ್ನು ಹಾಳು ಮಾಡಿ ಮತ್ತಷ್ಟು ದಲ್ಲಾಳಿಗಳನ್ನು ಸೃಷ್ಟಿಸುತ್ತದೆ. ಕೃಷಿಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವುದಿರಲಿ; ರೈತರು ಬಿಡಿಗಾಸಿಗೆ ಮಾರಾಟ ಮಾಡಬೇಕಾಗುತ್ತದೆ. ಈ ಮಸೂದೆ ಕರೊನಾ ಸೋಂಕಿಗಿಂತ ಅಪಾಯಕಾರಿ’ ಎಂಬುದು ಶಿರೋಮಣಿ ಅಕಾಲಿ ದಳದ ವಾದ. ಪಂಜಾಬಿನಲ್ಲಿ ರೈತರು ಕಳೆದ ತಿಂಗಳಿಂದಲೇ ಈ ಮೂರೂ ಮಸೂದೆಗಳ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ಮಸೂದೆ ಬೆಂಬಲಿಸುವ ಸಂಸದರನ್ನು ಹಳ್ಳಿಗಳಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಅಕಾಲಿ ದಳ ಕಠಿಣ ನಿಲುವನ್ನು ತಳೆದಿದೆ.

ಯಾವುದೇ ಹೊಸ ಮಸೂದೆ ಬಂದಾಗ ಪರ-ವಿರೋಧ ಅಭಿಪ್ರಾಯಗಳು ಹೊಮ್ಮುವುದು ಸಹಜವೇ. ಆದರೆ, ಈ ಮಧ್ಯದಲ್ಲಿ ಸಂವಾದದ ಮತ್ತು ಅರಿವು ಮೂಡಿಸುವ ಮಾರ್ಗವನ್ನು ಆಯ್ದುಕೊಳ್ಳುವುದು ಉತ್ತಮ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳ ಬಗ್ಗೆಯೂ ಸಮಗ್ರ ಮತ್ತು ಗಂಭೀರ ಚರ್ಚೆ ಆಗಬೇಕಿದೆ. ರೈತರ ಹಿತಕ್ಕೆ ಮಾರಕವಾಗುವಂಥ ಅಂಶಗಳಿದ್ದರೆ ಅದನ್ನು ಕೈಬಿಡಬೇಕು. ಆದರೆ, ವಿರೋಧದ ನೆಪದಲ್ಲಿ ಮಹತ್ವದ ಸುಧಾರಣೆಗಳು ನನೆಗುದಿಗೆ ಬೀಳಬಾರದು ಎಂಬ ಕಳಕಳಿಯೂ ಮುಖ್ಯ. ಪ್ರಸ್ತುತ ಸೃಷ್ಟಿಯಾಗಿರುವ ಗೊಂದಲ ಮತ್ತು ಅನುಮಾನಗಳನ್ನು ನಿವಾರಿಸಬೇಕಿರುವುದು ಸರ್ಕಾರದ ಕರ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net