

ದೇಶವನ್ನು ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಡೆಗೂ ನ್ಯಾಯ ಪ್ರಾಪ್ತಿಯಾಗಿದೆ. 2012ರ ಡಿಸೆಂಬರ್ನಲ್ಲಿ ರಾಜಧಾನಿ ದೆಹಲಿಯಲ್ಲಿ ನಿರ್ಭಯಾ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶ ಹುಟ್ಟುಹಾಕಿತಲ್ಲದೆ ಮಹಿಳಾ ಸುರಕ್ಷತೆ ಬಗೆಗಿನ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಕಾರಣವಾಯಿತು. ದೆಹಲಿ ಸೇರಿ ಎಲ್ಲ ನಗರಗಳಲ್ಲಿ ಜನರು ಬೀದಿಗಿಳಿದು ಘಟನೆಯನ್ನು ಖಂಡಿಸಿದರು, ಈ ಮೂಲಕ ಜಾಗೃತಿಯ ಹೊಸ ಅಲೆಯೇ ಸೃಷ್ಟಿಯಾಯಿತು. ಆದರೆ, ನಿರ್ಭಯಾ ಪ್ರಕರಣದ ಅಪರಾಧಿಗಳು ಕಾನೂನಿನ ಕುಣಿಕೆಗೆ ಸಿಕ್ಕರೂ, ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದರೂ ಮೇಲಿಂದ ಮೇಲೆ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸುವುದು, ಕಾನೂನಿನ ಸಣ್ಣ ಅವಕಾಶವನ್ನೂ ಬಳಸಿಕೊಳ್ಳಲು ಹಾತೊರೆಯುವುದು ಸೇರಿ ಅನೇಕ ಹೊಯ್ದಾಟಗಳನ್ನು ನಡೆಸಲಾಯಿತು.
ನಾಲ್ಕನೇ ಡೆತ್ ವಾರಂಟ್ ಜಾರಿಯಾದ ಬಳಿಕ ಕಡೆಗೂ ಮಾರ್ಚ್ 20ರಂದು ನಸುಕಿನ ಜಾವ 5.30ಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ಅಪರಾಧಿಗಳಾದ ಅಕ್ಷಯ್, ಪವನ್ ಗುಪ್ತಾ, ಮುಕೇಶ್ ಸಿಂಗ್, ವಿನಯ್ನನ್ನು ಗಲ್ಲಿಗೇರಿಸಲಾಯಿತು. ಎಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದ ನಿರ್ಭಯಾ ತಾಯಿ-‘ಕಡೆಗೂ ನ್ಯಾಯ ಸಂದಿದ್ದಕ್ಕೆ ಸಮಾಧಾನವಾಗಿದೆ. ನ್ಯಾಯವ್ಯವಸ್ಥೆಗೆ, ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿ, ಈ ಬೆಳಗನ್ನು ನಿರ್ಭಯಾಗೆ ಅರ್ಪಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ಅಪರಾಧಿಗಳನ್ನು ಗಲ್ಲಿಗೇರಿಸುತ್ತಿದ್ದಂತೆ ದೆಹಲಿ ಸೇರಿ ದೇಶದ ಹಲವೆಡೆ ಸಂಭ್ರಮಾಚರಣೆ ನಡೆಸಲಾಯಿತು. ಘೋರ ಕೃತ್ಯ ಮಾಡಿದವರನ್ನು, ಯಾವುದೇ ಪ್ರಕರಣದ ತಪ್ಪಿತಸ್ಥರನ್ನು ಈ ದೇಶದ ನ್ಯಾಯಾಂಗ ವ್ಯವಸ್ಥೆ ಶಿಕ್ಷಿಸದೆ ಬಿಡುವುದಿಲ್ಲ ಎಂಬ ಬಹುದೊಡ್ಡ ನೈತಿಕ ಸಂದೇಶ ಈ ಬೆಳವಣಿಗೆ ಮೂಲಕ ರವಾನೆ ಆಗಿದೆ. ನಿರ್ಭಯಾಗೆ ನ್ಯಾಯ ದೊರಕಿದಂತಾಗಿದ್ದು, ಜಟಿಲ ಪ್ರಕರಣವೊಂದು ಬಗೆಹರಿದಿದೆ.
ನಿರ್ಭಯಾ ಮಾದರಿ ಪ್ರಕರಣಗಳು ಮತ್ತೆಂದು ಮರುಕಳಿಸಬಾರದು. ಆ ನಿಟ್ಟಿನಲ್ಲಿ ಬಿಗಿ ಕಾನೂನು ಅಗತ್ಯವೇ. ಆದರೆ, ಬರೀ ಕಾನೂನಿನ ಬಲದಿಂದ ಅಪರಾಧಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದು ವಾಸ್ತವ. ಈ ನಿಟ್ಟಿನಲ್ಲಿ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಪ್ರತಿಷ್ಠಾಪಿಸಬೇಕಿದೆ. ಭಾರತೀಯ ಸಂಸ್ಕೃತಿಯಲ್ಲಂತೂ ಸನಾತನ ಕಾಲದಿಂದ ಹೆಣ್ಣನ್ನು ಪೂಜನೀಯವಾಗಿ ನೋಡಲಾಗುತ್ತದೆ, ಗೌರವದಿಂದ ಕಾಣಲಾಗುತ್ತದೆ. ಈ ಭಾವನೆಯೇ ಸಮಾಜಕ್ಕೆ ಭದ್ರತೆಯ ಭರವಸೆ ನೀಡುವಂಥದ್ದು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ, ಸ್ವೇಚ್ಛಾಚಾರದ ಭಾವದಿಂದ ಹದಿಹರೆಯದವರು, ಯುವಕರು ದಾರಿ ತಪು್ಪತ್ತಿರುವ ನಿದರ್ಶನಗಳು ಢಾಳಾಗಿ ಗೋಚರವಾಗುತ್ತಿವೆ. ಹಾಗಾಗಿ, ಸಮಾಜವೂ ಜಾಗೃತವಾಗಬೇಕಿದೆ. ಸಂಸ್ಕಾರ ನೀಡುವ ಕಾರ್ಯ ಮನೆಗಳಿಂದಲೇ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಂಜಲ ಮನಸ್ಸಿನಿಂದ ಚಿಂತನೆ ನಡೆಸಬೇಕು.