

ಪ್ರಮುಖ ಜಲವಿಚಾರವೊಂದರಲ್ಲಿ ಕರ್ನಾಟಕಕ್ಕೆ ಸಿಹಿ ಸಿಕ್ಕಿರುವುದು ಸಮಾಧಾನದ ಸಂಗತಿ. ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ನ್ಯಾಯಾಧಿಕರಣ ಪ್ರಕಟಿಸಿದ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದ್ದು, ಕರ್ನಾಟಕಕ್ಕೆ ಮುಂದಿನ ದಾರಿ ಸುಗಮವಾದಂತಾಗಿದೆ. ಹೀಗಿದ್ದರೂ ರಾಜ್ಯದ ಮೇಲೆ ಮಹತ್ತರ ಹೊಣೆಗಾರಿಕೆಗಳಿರುವುದನ್ನು ಮರೆಯುವಂತಿಲ್ಲ. ಹಾಗೆನೋಡಿದರೆ ಮಹದಾಯಿ ಯೋಜನೆ ನಾಲ್ಕು ದಶಕಗಳಷ್ಟು ಹಳೆಯದು. ಕೃಷಿಗೆ ಮತ್ತು ಜಲವಿದ್ಯುತ್ತಿಗಾಗಿ ರೂಪುಗೊಂಡ ಈ ಯೋಜನೆ ಗೋವಾದ ಕ್ಯಾತೆಯಿಂದಾಗಿ ಮೂಲೆಗೆ ಸರಿಯಿತು. ನಂತರದಲ್ಲಿ ಉತ್ತರ ಕರ್ನಾಟಕದ ಕೆಲ ಪ್ರದೇಶಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಳಸಾ-ಬಂಡೂರಿ ನಾಲೆಯನ್ನು ಮಲಪ್ರಭಾ ನದಿಗೆ ಜೋಡಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿತು.
ಕುಡಿಯುವ ನೀರಿನ ಯೋಜನೆಯಾದ್ದರಿಂದ ಪರಿಸರ ಮತ್ತಿತರ ಅನುಮತಿ ಅಗತ್ಯವಿಲ್ಲ ಎಂಬ ನೆಲೆಯಲ್ಲಿ ಕಾಮಗಾರಿ ಶುರುವಾಯಿತು. ಆದರೆ ಈ ಯೋಜನೆಯಿಂದ ಮಹದಾಯಿ ನದಿ ನೀರಿಗೆ ತೊಂದರೆಯಾಗುತ್ತದೆ ಎಂದು ಗೋವಾ ಆಕ್ಷೇಪವೆತ್ತಿದ್ದರಿಂದಾಗಿ, ಕೆಲ ಕಾಮಗಾರಿ ನಡೆದಿದ್ದರೂ ಯೋಜನೆ ಮುಂದುವರಿಯಲಿಲ್ಲ. ಈ ನಡುವೆ, ಕರ್ನಾಟಕಕ್ಕೆ 13.42 ಮತ್ತು ಗೋವಾಕ್ಕೆ 24 ಟಿಎಂಸಿ ನೀರನ್ನು ನಿಗದಿಪಡಿಸಿ ಮಹದಾಯಿ ನ್ಯಾಯಾಧಿಕರಣ ಐತೀರ್ಪ ಪ್ರಕಟಿಸಿದರೂ, ಸಂಬಂಧಪಟ್ಟ ರಾಜ್ಯಗಳು ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರಿಂದಾಗಿ ವಿಷಯ ಮತ್ತೆ ನನೆಗುದಿಗೆ ಬಿತ್ತು. ಆದರೂ, ಅಧಿಸೂಚನೆ ಪ್ರಕಟಿಸಲು ಗೋವಾ ಕೂಡ ಸಹಮತಿಸಿದ್ದರಿಂದಾಗಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೆಲ ದಿನಗಳ ಹಿಂದೆ ನಿರ್ದೇಶನ ನೀಡಿತ್ತು. ಆ ಪ್ರಕಾರ ಈಗ ಅಧಿಸೂಚನೆ ಪ್ರಕಟವಾಗಿದೆ.
ಯೋಜನೆ ವಿವಾದ ಇನ್ನೂ ಪೂರ್ತಿಯಾಗಿ ಬಗೆಹರಿಯದಿದ್ದರೂ, ಸದ್ಯ ಕರ್ನಾಟಕ ಕೆಲಮಟ್ಟಿಗೆ ನಿರಾಳವಾಗುವಂತಾಗಿದೆ. ಆದರೆ ಈ ತಕ್ಷಣ ಮಾಡಬೇಕಾದ ಮಹತ್ವದ ಕೆಲಸಗಳೂ ಇವೆ. ಮೊದಲನೆಯದಾಗಿ, ಕಳಸಾ-ಬಂಡೂರಿ ಯೋಜನೆ ಕುರಿತಂತೆ ಕೇಂದ್ರ ಸರ್ಕಾರದಿಂದ ಪರಿಸರ ಇನ್ನಿತರ ಅನುಮತಿ ಪಡೆಯುವುದಕ್ಕಾಗಿ ವಿಸõತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಅದಕ್ಕೆ ಅನುಮೋದನೆ ಪಡೆಯುವತ್ತ ಪ್ರಯತ್ನಿಸಬೇಕಾಗಿದೆ. ಇದಲ್ಲದೆ, ಮಾರ್ಚ್ 5ರಂದು ಮಂಡನೆಯಾಗಲಿರುವ ಬಜೆಟ್ನಲ್ಲಿ ಈ ಯೋಜನೆಗಾಗಿ ಸಾಕಷ್ಟು ಹಣವನ್ನು ತೆಗೆದಿರಿಸಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ನೀರಾವರಿ ಯೋಜನೆ ಮಹತ್ವದ ಬಗ್ಗೆ ಅವರಿಗೆ ಹೊಸದಾಗಿ ಹೇಳಬೇಕಾದ್ದೇನಿಲ್ಲ. ಅದೂ ಅಲ್ಲದೆ, ರಾಜ್ಯದ ಹಲವು ಜನಪ್ರತಿನಿಧಿಗಳೂ ಈ ಕುರಿತಂತೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಜನರು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ.
ನಮ್ಮ ದೇಶದಲ್ಲಿ ಅನೇಕ ರಾಜ್ಯಗಳ ನಡುವೆ ಜಲವಿವಾದಗಳಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂಥ ವಿವಾದಗಳು ಉದ್ಭವಿಸುವುದು ಸಹಜವೇ. ಆದರೆ, ವಿವಾದಗಳನ್ನು ಕಾಲಮಿತಿಯಲ್ಲಿ ಪರಿಹರಿಸದಿದ್ದರೆ ಎಲ್ಲರಿಗೂ ಹಾನಿ. ಯೋಜನಾ ವೆಚ್ಚ ಹೆಚ್ಚುವ ಜತೆಗೆ, ಯೋಜನೆಯ ಲಾಭ ಜನರಿಗೆ ದಕ್ಕುವುದು ತಡವಾಗುವುದರಿಂದ ಮತ್ತಷ್ಟು ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಜಲವಿವಾದಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಏಕ ನ್ಯಾಯಾಧಿಕರಣ ವ್ಯವಸ್ಥೆ ತಂದಿದೆ. ಯಾವುದೇ ವಿವಾದ ಪರಿಹಾರಕ್ಕೆ ಕಾಲಮಿತಿಯನ್ನೂ ನಿಗದಿಪಡಿಸಲಾಗಿದೆ. ಹೀಗಾಗಿ ಭವಿಷ್ಯದಲ್ಲಿ ಜಲವಿವಾದಗಳು ಮುಂಚಿನಷ್ಟು ಜಗ್ಗಾಡಲಾರವು ಎಂದು ನಿರೀಕ್ಷಿಸಬಹುದಾಗಿದೆ. ರಾಜ್ಯಗಳು ಮತ್ತು ಒಟ್ಟಾರೆ ದೇಶದ ಹಿತದೃಷ್ಟಿಯಿಂದಲೂ ಇದು ಅಗತ್ಯ.